Thursday 7th, December 2023
canara news

ಕಾರ್ತಿಕ್ ರಾಜ್ ಕೊಲೆ ಪ್ರಕರಣ; ಮೂವರ ಬಂಧನ

Published On : 29 Apr 2017   |  Reported By : Canaranews Network


ಮಂಗಳೂರು: ಮಂಗಳೂರು ಹೊರವಲಯದ ಕೋಣಾಜೆ ಠಾಣಾ ವ್ಯಾಪ್ತಿಯ ಕಾರ್ತಿಕ್ ರಾಜ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಕಾರ್ತಿಕ್ ರಾಜ್ ರ ಸಹೋದರಿ ಮತ್ತು ಆಕೆಯ ಪ್ರಿಯತಮ ಸಹಿತ ಮೂವರನ್ನು ಬಂಧಿಸಿದ್ದಾರೆ. ಕಾರ್ತಿಕ್ ರಾಜ್ ರವರ ಸಹೋದರಿ ಕಾವ್ಯಾಶ್ರೀ, ಆಕೆಯ ಪ್ರಿಯತಮ ಪಂಡಿತ್ ಹೌಸ್ ಸಂತೋಷನಗರ ನಿವಾಸಿ ಗೌತಮ್(೨೬), ಮತ್ತು ಗೌತಮ್ ಸಹೋದರ ಗೌರಮ್(೧೯) ಬಂಧಿತ ಆರೋಪಿಗಳು. ಕಾವ್ಯಾಶ್ರೀ ಗೆ ವಿವಾಹವಾಗಿದ್ದು, ಪತಿ ದುಬೈಯಲ್ಲಿ ಉದ್ಯೋಗಿಯಾಗಿದ್ದು, ಪತಿ-ಪತ್ನಿಯರ ನಡುವಿನ ಸಂಬಂಧ ಸರಿ ಹೊಂದುತ್ತಿರಲಿಲ್ಲ. ಹೀಗಾಗಿ ಕಾವ್ಯಾ ತನ್ನ ಸಹೋದರ ಕಾರ್ತಿಕ್ ರಾಜ್ ಬಳಿಯಲ್ಲಿ ಹೇಳಿ ತಾಯಿ ಮನೆಗೆ ಬಂದಿದ್ದಳೆನ್ನಲಾಗಿದೆ. ಆದರೂ ಕಾರ್ತಿಕ್ ತನ್ನ ಸಹೋದರಿಗೆ ಬುದ್ದಿವಾದ ಹೇಳಿ ಗಂಡನ ಮನೆಗೆ ಕಳುಹಿಸಿದ್ದರು. ಮತ್ತೇ ಅದೇ ಮನೆಯವರ ಕಿರುಕುಳದಿಂದ ಬೇಸತ್ತ ಕಾವ್ಯಾ ತಾಯಿ ಮನೆಗೆ ಬಂದಿದ್ದು, ಈ ಸಂದರ್ಭದಲ್ಲಿ ಕಾರ್ತಿಕ್ ಮನೆಗೆ ಬಾರದಂತೆ ಹೇಳಿದ್ದರೆನ್ನಲಾಗಿದೆ. ಇದೇ ವಿಷಯಕ್ಕೆ ಸಂಬಂಧಿಸಿ ಕಾರ್ತಿಕ್ ರಾಜ್ ಮತ್ತು ಕಾವ್ಯಾಶ್ರಿ ನಡುವೆ ಜಗಳವಾಗುತ್ತಿತ್ತು. ಕೊನೆಗೂ ಕಾರ್ತಿಕ್ ತನ್ನ ಸಹೋದರಿಗೆ ಕುತ್ತಾರ್ ನಲ್ಲಿ ಬಾಡಿಗೆ ಮನೆಯೊಂದಕ್ಕೆ ಮಾಡಿ ಅಲ್ಲೇ ಇರುವಂತೆ ಹೇಳಿದ್ದರೆಂದು ಮೂಲಗಳು ತಿಳಿಸಿವೆ. ಈ ನಡುವೆ ಕೆಲಸಕ್ಕೆ ಹೋಗುತ್ತಿದ್ದ ಕಾವ್ಯಾಶ್ರಿಗೆ ಅಲ್ಲಿ ಗೌತಮ್ ಎಂಬಾತನ ಪರಿಚಯವಾಗಿದೆ. ಈ ಪರಿಚಯವು ಪ್ರೇಮಕ್ಕೆ ತಿರುಗಿದ್ದು, ಈ ವಿಚಾರ ಕಾರ್ತಿಕ್ ಗೆ ತಿಳಿದಿತ್ತು. ಇದರಿಂದ ಸಹೋದರಿಯನ್ನು ಕಾರ್ತಿಕ್ ತರಾಟೆಗೆ ತೆಗೆದುಕೊಳ್ಳುತ್ತಿದ್ದ. ಕಾರ್ತಿಕ್ ವರ್ತನೆಯಿಂದ ಬೇಸತ್ತ ಕಾವ್ಯಾ ಅಣ್ಣನಿಗೆ ಬುದ್ಧಿ ಕಲಿಸಬೇಕೆಂದು ನಿರ್ಧರಿಸಿ ಗೌತಮ್ ನೊಂದಿಗೆ ಮಾತನಾಡಿ ಯೋಜನೆ ರೂಪಿಸಿದ್ದಳೆನ್ನಲಾಗಿದೆ. ಇದನ್ನು ಒಪ್ಪಿಕೊಂಡ ಗೌತಮ್ ಕಾರ್ತಿಕ್ ಗೆ ಹಲ್ಲೆ ನಡೆಸಲು ಸುಪಾರಿ ನೀಡಬೇಕಿದ್ದು, ಅದಕ್ಕೆ ಹಣದ ಅಗತ್ಯ ಇದೆ ಎಂದಿದ್ದ. ಒಂದು ಲಕ್ಷ ರೂಪಾಯಿ ನೀಡುವುದಾಗಿ ಕಾವ್ಯಾ ಮೊದಲು ಒಪ್ಪಿಕೊಂಡಿದ್ದಳು. ಆದರೆ, ಗೌತಮ್ ಹೆಚ್ಚಿನ ಹಣಕ್ಕೆ ಬೇಡಿಕೆ ಇಟ್ಟಿದ್ದ. ಆದರೆ, ಗೌತಮ್ ಮನೆಯೊಂದನ್ನು ಕಟ್ಟುತ್ತಿದ್ದು, ಇದಕ್ಕಾಗಿ ಆತನಿಗೆ ಹಣದ ಅವಶ್ಯಕತೆಯಿತ್ತು. ಈ ಹಿನ್ನೆಲೆಯಲ್ಲಿ ಆತ ಸುಪಾರಿ ಹಂತಕರನ್ನು ಪರಿಚಯಿಸದೆ ಸ್ವತಃ ತಾನೇ ಕುಕೃತ್ಯಕ್ಕೆ ಕೈ ಹಾಕಿದ್ದ. ಇದಕ್ಕಾಗಿ ಆತ ತನ್ನ ಕಿರಿಯ ಸಹೋದರನಾಗಿರುವ ಗೌರವ್ ನನ್ನು ಬಳಸಿಕೊಂಡು ಕಾರ್ತಿಕ್ ರಾಜ್ ನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ ಎನ್ನಲಾಗಿದೆ.


ಕೊಲೆ ಮಾಡುವ ಉದ್ದೇಶವಿರಲಿಲ್ಲ
ಕಾವ್ಯಾಶ್ರಿಗೆ ತನ್ನ ಸಹೋದರನ್ನು ಕೊಲೆ ಮಾಡುವ ಉದ್ದೇಶ ಇರಲಿಲ್ಲ ಎಂದು ಹೇಳಲಾಗಿದೆ. ಆದರೆ, ತನಗೆ ಕಂಟಕನಾಗಿದ್ದ ಸಹೋದರ ಕೈ ಕಾಲು ಮುರಿದು ಮನೆಯಲ್ಲೇ ಬಿದ್ದಿರುವಂತೆ ಮಾಡಬೇಕೆಂದು ನಿರ್ಧರಿಸಿ ಗೌತಮ್ ಗೆ ಹೊಡೆಸಲು ಸುಪಾರಿ ನೀಡಿದ್ದಳೆನ್ನಲಾಗಿದೆ. ಆದರೆ, ಗೌತಮ್ ಕಾರ್ತಿಕ್ ಮೇಲೆ ನಡೆಸಿದ ಹಲ್ಲೆ ಕಾರ್ತಿಕ್ ನನ್ನು ಇಹಲೋಕ ತ್ಯಜಿಸುವಂತೆ ಮಾಡಿದೆ.

ಘಟನೆ ಹಿನ್ನೆಲೆ:
ಎಂಜಿನಿಯರಿಂಗ್ ಪದವೀಧರನಾಗಿದ್ದ ಕಾರ್ತಿಕ್ ರಾಜ್ ಬೆಳಗ್ಗಿನ ಜಾವ ಜಿಮ್ ಗೆ ತೆರಳುತ್ತಿದ್ದ.ಈ ಬಗ್ಗೆ ಗೌತಮ್ ಗೆ ಮಾಹಿತಿ ಇತ್ತು. ಕಾರ್ತಿಕ್ ನ ಚಲನವಲನಗಳ ಬಗ್ಗೆ ಕಣ್ಣಿಟ್ಟಿದ್ದ ಗೌತಮ್ ಆತನ ಮೇಲೆ ಹಲ್ಲೆ ಮಾಡಲು ನಿರ್ಧರಿಸಿದ್ದ. ೨೦೧೬ ಅ.೨೨ರಂದು ಕೊಣಾಜೆ ಗಣೇಶ್ ಮಹಲ್ ಬಳಿ ಕಾರ್ತಿಕ್ ಜಿಮ್ ಗೆ ತೆರಳುತ್ತಿದ್ದ ವೇಳೆ ವಿಳಾಸ ಕೇಳುವ ನೆಪದಲ್ಲಿ ಕಾರ್ತಿಕ್ ನನ್ನು ತಡೆದು ಆತನ ಮೇಲೆ ಖಾರದ ಹುಡಿ ಎರಚಿ ರಾಡ್ ನಿಂದ ಹಲ್ಲೆ ನಡೆಸಿದ್ದರು. ಪ್ರಾರಂಭದಲ್ಲಿ ಇದು ಆಘಾತವೆಂದು ಪರಿಗಣಿಸಲಾಗಿತ್ತು. ವೈದ್ಯಕೀಯ ವರದಿ ಮತ್ತು ತನಿಖೆಯ ಬಳಿಕ ಇದು ಕೊಲೆ ಎಂದು ಸಾಭೀತಾಗಿತ್ತು.

ವಿಶೇಷ ತಂಡ ರಚನೆ:
ಕಾರ್ತಿಕ್ ರಾಜ್ ಹತ್ಯೆಯ ತನಿಖೆ ಚುರುಕುಗೊಳಿಸುವ ನಿಟ್ಟಿನಲ್ಲಿ ಪೊಲೀಸ್ ಆಯುಕ್ತ ಎಂ. ಚಂದ್ರಶೇಖರ್ ಅವರು ಆರೋಪಿಗಳ ಪತ್ತೆಗೆ ವಿಶೇಷ ತಂಡಗಳನ್ನು ರಚಿಸಿದ್ದರು. ತನಿಖೆ ಚುರುಕುಗೊಳಿಸಿದ ಪೊಲೀಸ್ ತಂಡ ಸಿಸಿಬಿ ಹಾಗೂ ಕೊಣಾಜೆ ಪೊಲೀಸರ ಸಹಕಾರದಲ್ಲಿ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದೆ.

ಫಲ ನೀಡದ ಪ್ರತಿಭಟನೆ:
ಕಾರ್ತಿಕ್ ರಾಜ್ ಹತ್ಯೆ ಪ್ರಕರಣ ರಾಜಕೀಯ ಬಣ್ಣ ಪಡೆದುಕೊಂಡಿತ್ತು. ಕೆಲ ಸಂಘಟನೆಗಳು, ರಾಜಕೀಯ ಮುಖಂಡರು, ಜಿಲ್ಲೆಯಲ್ಲಿ ಅಶಾಂತಿ ವಾತಾವರಣ ಹರಡುವ ಹುನ್ನಾರ ನಡೆಸಿದ್ದರು. ಆದರೆ, ಇದೀಗ ನೈಜ ಆರೋಪಿಗಳ ಬಂಧನವಾಗುವುದರ ಮೂಲಕ ಪ್ರಕರಣ ಸುಖಾಂತ್ಯ ಕಂಡಿದೆ.




More News

ಹಳೆ ವಿದ್ಯಾರ್ಥಿಗಳ ಸಂಘ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಡೇರಿ
ಹಳೆ ವಿದ್ಯಾರ್ಥಿಗಳ ಸಂಘ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಡೇರಿ
ಪೆರ್ಮಂಕಿಗುತ್ತು ರಿತೇಶ್ ಪಕ್ಕಳ ಅವರಿಗೆ ಪಿಹೆಚ್‍ಡಿ ಪದವಿ
ಪೆರ್ಮಂಕಿಗುತ್ತು ರಿತೇಶ್ ಪಕ್ಕಳ ಅವರಿಗೆ ಪಿಹೆಚ್‍ಡಿ ಪದವಿ
ಇಪ್ಪತ್ತ್ತರನೇ ವಾರ್ಷಿಕ ಮಹಾಸಭೆ ಪೂರೈಸಿದ ಗಾಣಿಗ ಸಮಾಜ ಮುಂಬಯಿ
ಇಪ್ಪತ್ತ್ತರನೇ ವಾರ್ಷಿಕ ಮಹಾಸಭೆ ಪೂರೈಸಿದ ಗಾಣಿಗ ಸಮಾಜ ಮುಂಬಯಿ

Comment Here