Friday 9th, May 2025
canara news

ಜಲೀಲ್ ಕರೋಪಾಡಿ ಹತ್ಯೆ ಪ್ರಕರಣ;೧೧ ದುಷ್ಕರ್ಮಿಗಳ ಬಂಧನ

Published On : 30 Apr 2017   |  Reported By : Canaranews Network


ಮಂಗಳೂರು: ಬಂಟ್ವಾಳ ತಾಲೂಕಿನ ಕರೋಪಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಜಲೀಲ್ ಕರೋಪಾಡಿ ಕೊಲೆ ಪ್ರಕರಣವನ್ನು ಭೇದಿಸಿರುವ ವಿಶೇಷ ಪೊಲೀಸರ ತಂಡ ೧೧ ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಈ ಬಗ್ಗೆ ದ.ಕ.ಎಸ್ಪಿ ಭೂಷಣ್ ಜಿ ಬೊರಸೆ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದರು. ಎಪ್ರಿಲ್ ೨೦ರಂದು ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಕರೋಪಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಎ.ಅಬ್ದುಲ್ ಜಲೀಲ್ ಎಂಬವರು ಗ್ರಾಮ ಪಂಚಾಯತ್ ಕಚೇರಿಯಲ್ಲಿ ಕುಳಿತುಕೊಂಡಿರುವಾಗ ೪ ಜನ ದುಷ್ಕರ್ಮಿಗಳು ಮೋಟಾರ್ ಸೈಕಲ್ ನಲ್ಲಿ ಬಂದು ತಲವಾರು ಹಾಗೂ ಇತರ ಮಾರಾಕಾಯುಧಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿ ಪರಾರಿಯಾಗಿದ್ದರು.

ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಪ್ರಕರಣವನ್ನು ಭೇದಿಸಲು ೫ ತಂಡವನ್ನು ರಚಿಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರನ್ನು ಕರೋಪಾಡಿ ಗ್ರಾಮದ ರಾಜೇಶ್ ನಾಯಕ್, ಮಾಣಿಯ ನರಸಿಂಹ್, ಪುತ್ತೂರು ತಾಲೂಕಿನ ಪ್ರಜ್ವಲ್, ಪುಷ್ಪರಾಜ್ ಗೌಡ,ರೋಷನ್, ಪುನೀತ್, ಸಚಿನ್ ಸೇರಿದಂತೆ ಒಟ್ಟು ೧೧ ಮಂದಿ ಬಂಧಿತ ಆರೋಪಿಗಳು. ಬಂಧಿತರಿಂದ ಕೃತ್ಯಕ್ಕೆ ಬಳಸಿದ ೨ ಮೋಟಾರ್ ಸೈಕಲ್, ೨ ತಲವಾರು, ಹಾಗೂ ೧ ಓಮ್ನಿ ಕಾರನ್ನು ವಶಕ್ಕೆ ಪಡೆಯಲಾಗಿದೆ.೨೦೧೫ರಲ್ಲಿ ಗ್ರಾಮ ಪಂಚಾಯತ್ ಚುನಾವಣೆ ನಡೆದು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಸ್ಥಾನಕ್ಕಾಗಿ ದಿನೇಶ್ ಶೆಟ್ಟಿ ಆಕಾಂಕ್ಷಿಯಾಗಿದ್ದ. ದಿನೇಶ್ ಶೆಟ್ಟಿಯು ಭೂಗತ ಪಾತಕಿ ವಿಕ್ಕಿ ಶೆಟ್ಟಿಯ ಚಿಕ್ಕಿಪ್ಪನ ಮಗನಾಗಿದ್ದು, ವಿಕ್ಕಿ ಶೆಟ್ಟಿಯು ದಿನೇಶ್ ಶೆಟ್ಟಿಯನ್ನು ಬೆಂಬಲಿಸಿದ್ದ. ಆದರೆ, ದಿನೇಶ್ ಶೆಟ್ಟಿಗೆ ಉಪಾಧ್ಯಕ್ಷ ಸ್ಥಾನ ಸಿಗದೆ ಜಲೀಲ್ ಕರೋಪಾಡಿಗೆ ಉಪಾಧ್ಯಕ್ಷ ಸ್ಥಾನ ಸಿಕ್ಕಿತ್ತು. ಈ ಬಗ್ಗೆ ವಿಕ್ಕಿ ಶೆಟ್ಟಿ ಬೇಸರ ವ್ಯಕ್ತಪಡಿಸಿದ್ದ. ಮಾತ್ರವಲ್ಲದೆ, ಜಲೀಲ್ ಕರೋಪಾಡಿ ಹಾಗೂ ದಿನೇಶ್ ಶೆಟ್ಟಿ ನಡುವೆ ಗ್ರಾಮ ಪಂಚಾಯತ್ ಅಭಿವೃದ್ಧಿ ವಿಚಾರಗಳ ಬಗ್ಗೆ ಚರ್ಚೆ ನಡೆದಾಗ ವಾಗ್ವಾದ ನಡೆಯುತ್ತಿತ್ತು. ಈ ಹಿನ್ನೆಲೆಯಲ್ಲಿ ಹತ್ಯೆ ನಡೆದಿರಬಹುದು ಎಂದು ಅವರು ಮಾಹಿತಿ ನೀಡಿದರು. ಇನ್ನು, ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದ ತಂಡವನ್ನು ದ.ಕ.ಎಸ್ಪಿ ಅಭಿನಂಧಿಸಿದರು.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here