Friday 19th, April 2024
canara news

ಭಂಡಾರಿ ಸಮಾಜದ ಕುಲದೇವರು ಶ್ರೀಕಚ್ಚೂರು ನಾಗೇಶ್ವರ ದೇವರ ವರ್ಧಂತ್ಯುತ್ಸಕ್ಕೆ ಬಾರ್ಕೂರು ಹನೆಹಳ್ಳಿ ಗ್ರಾಮದಲ್ಲಿ ಸಾಗುತ್ತಿದೆ ಭರದ ಸಿದ್ಧತೆ

Published On : 01 May 2017   |  Reported By : Ronida Mumbai


(ಚಿತ್ರ / ಮಾಹಿತಿ : ರೊನಿಡಾ ಮುಂಬಯಿ)

ಹೊಯ್ಸಳ ರಾಜ ವಿಷ್ಣುವರ್ಧನನ ಮಹಾ ಮಾಂಡಲಿಕನಾಗಿದ್ದ ಭುಜ ಬಲ ಕವಿ ಅಲೂಪೇಂದ್ರ (ಕ್ರಿ.ಶ 1115 ರಿಂದ 1155 ವರೆಗೆ). ಬಾರಕೂರು ಸೀಮೆಯನ್ನು ಆಳುತ್ತಿದ್ದ ಕಾಲ. ತನ್ನ ಆಶ್ರಿತ ವರ್ಗಕ್ಕೆಲ್ಲ ನಿತ್ಯ ಸಂತೋಷ ನೀಡುತ್ತಿದ್ದ ಅಲೂಪೇಂದ್ರ ರಾಜನ ಸುಭೀಕ್ಷ ಕಾಲವದು. ರಾಜ ಅಲೂಪೇಂದ್ರನ ಆಪ್ತ ವರ್ಗದಲ್ಲಿದ್ದ ಭಂಡಾರಿ ಸಮಾಜದ ಶಿವ ಭಂಡಾರಿಯವರು ಪರಮ ಶಿವ ಭಕ್ತ. ಒಂದು ದಿನ ಬೆಳಿಗ್ಗೆ ನದಿ ತೀರದಲ್ಲಿ ಶಿವ ಭಂಡಾರಿ ಮರಳಿನಲ್ಲಿ ಶಿವಲಿಂಗ ರೂಪಿಸಿ ಧ್ಯಾನಾಸಕ್ತನಾಗುತ್ತಾನೆ. ಅದೇ ಸಮಯಕ್ಕೆ ರಾಜ ಅಲೂಪೇಂದ್ರ ಶಿವ ಭಂಡಾರಿಯನ್ನು ಅರಮನೆಗೆ ಕರೆಯಲು ತನ್ನ ಭಟರನ್ನು ಕಳಿಸುತ್ತಾನೆ. ಶಿವ ಭಂಡಾರಿಯವರನ್ನು ಹುಡುಕುತ್ತಾ ನದಿತೀರಕ್ಕೆ ಬಂದ ಸೈನಿಕರು ಶಿವ ಭಂಡಾರಿಯನ್ನು ಧ್ಯಾನಾವಸ್ತೆಯಿಂದ ಎಬ್ಬಿಸಲು ಪ್ರಯತ್ನಿಸುತ್ತಾರೆ. ಆದರೆ ಶಿವ ಭಂಡಾರಿ ಭಕ್ತಿ ಪರವಶನಾಗಿ ದೇವರ ಧ್ಯಾನದಲ್ಲಿ ಮಗ್ನನಾಗಿರುತ್ತಾನೆ. ಸೈನಿಕರು ರಾಜನಿಗೆ ಶಿವ ಭಂಡಾರಿ ನದಿ ತೀರದಲ್ಲಿ ಶಿವನ ಆರಾಧನೆ ಮಾಡುತ್ತಿದ್ದು ಎಷ್ಟು ಕರೆದರು ತಮ್ಮೊಂದಿಗೆ ಬರಲಿಲ್ಲವೆಂದು ದೂರುತ್ತಾರೆ. ರಾಜ ಕೋಪಿಷ್ಟನಾಗಿ ಕೂಡಲೇ ಶಿವ ಭಂಡಾರಿಯನ್ನು ಎಳೆದು ತರಲು ಸೈನಿಕರಿಗೆ ಆದೇಶಿಸುತ್ತಾನೆ.

ಹಲವು ಸಂಖ್ಯೆಯಲ್ಲಿ ಬಂದ ಸೈನಕರು ದೇವರ ಧ್ಯಾನದಲ್ಲಿ ತಲ್ಲೀನನಾದ ಶಿವ ಭಂಡಾರಿಯನ್ನು ಹಿಡಿದೆಬ್ಬಿಸಿ ಎಳೆಯಲು ಮುಂದಾಗುತ್ತಾರೆ. ಕೂಡಲೇ ಹೆಡೆ ಬಿಚ್ಚಿದ ಸರ್ಪವೊಂದು ಶಿವ ಭಂಡಾರಿಯ ಬಳಿ ಸೈನಿಕರು ಸುಳಿಯದಂತೆ ರಕ್ಷಿಸುತ್ತದೆ. ಭಯ ಬೀತರಾದ ಸೈನಿಕರು ಈ ವಿಷಯವನ್ನು ರಾಜರಿಗೆ ಮುಟ್ಟಿಸುತ್ತಾರೆ. ರಾಜ ನದಿ ತೀರಕ್ಕೆ ಬರುತ್ತಾರೆ ಹೆಡೆ ಬಿಚ್ಚಿ ಶಿವ ಭಂಡಾರಿಗೆ ರಕ್ಷಣೆ ನೀಡುತ್ತಿರುವ ಸರ್ಪ ಮತ್ತು ಇದ್ಯಾವುದರ ಪರಿವೆಯೂ ಇಲ್ಲದೆ ಶಿವನ ಧ್ಯಾನದಲ್ಲಿ ತಲ್ಲೀನನಾಗಿರುವ ಶಿವ ಭಂಡಾರಿ, ಈ ದೃಶ್ಯ ನೋಡಿ ರಾಜನಿಗೆ ಆಶ್ಚರ್ಯವಾಗುತ್ತದೆ. ಶಿವ ಭಂಡಾರಿ ಧ್ಯಾನಾವಸ್ತೆಯಿಂದ ಹೊರ ಬರುವವರೆಗೂ ರಾಜನೂ ಅಲ್ಲಿಯೇ ಸ್ವಯಂ ಕಾಯುತ್ತಿರುತ್ತಾನೆ. ಶಿವ ಭಂಡಾರಿ ಧ್ಯಾನದಿಂದ ಹೊರ ಬಂದು ಎದುರು ನಿಂತ ರಾಜನನ್ನು ನೋಡಿ ದಿಗ್ಭ್ರಮೆಯಿಂದ ರಾಜನಲ್ಲಿ ತಾವು ಇಲ್ಲಿ ಯಾಕೆ ಬಂದಿದ್ದೀರಿ ಹೇಳಿ ಕಳುಹಿಸಿದ್ದರೆ ನಾನೇ ಬರುತ್ತಿದ್ದೆನಲ್ಲವೆ ಎಂದು ಹೇಳುತ್ತಾನೆ. ರಾಜ ನಡೆದ ವೃತ್ತಾಂತವನ್ನು ಶಿವನಿಗೆ ತಿಳಿಸಿ ಅವನ ದೈವ ಭಕ್ತಿಯನ್ನು ಮೆಚ್ಚಿ ನದಿ ತೀರದಲ್ಲಿ ಏಕೆ ಧ್ಯಾನ ಮಾಡುತ್ತೀಯಾ ಎಂದು ರಾಜ ಪ್ರಶ್ನಿಸುತ್ತಾನೆ.

ದೇವರ ಪೂಜೆ, ಅರ್ಚನೆ ಮಾಡಲು ನಮಗೆ ಯಾವುದೇ ದೇವಸ್ಥಾನವಿಲ್ಲ. ಆದ್ದರಿಂದ ನದಿ ತೀರದಲ್ಲಿ ಶಿವನ ಲಿಂಗವನ್ನು ತಯಾರಿಸಿ ಪೂಜೆ ಸಮರ್ಪಿಸಿ ಶಿವನನ್ನು ಧ್ಯಾನಿಸುತ್ತಿದ್ದೆ ಎಂದು ಶಿವ ಭಂಡಾರಿ ರಾಜನಿಗೆ ಹೇಳುತ್ತಾನೆ.
ರಾಜ ಮಂತ್ರಿಯನ್ನು ಕರೆದು ಬಾರಕೂರು ನಗರದ ಮಧ್ಯ ಭಾಗದಲ್ಲಿ ಕೂಡಲೇ ಸುಂದರವಾದ ಶಿವಾಲಯ ನಿರ್ಮಿಸಿ ಶಿವ ಭಂಡಾರಿಗೆ ನೀಡುವಂತೆ ಆದೇಶಿಸುತ್ತಾನೆ. ಅದರಂತೆ ನಗರ ಮಧ್ಯದಲ್ಲಿ ಶಿವಾಲಯ ನಿರ್ಮಾಣ ಮಾಡಿ ಮಹಾ ಶಿವಲಿಂಗವನ್ನು ತರಿಸಿ ಪ್ರತಿಷ್ಠಾಪಿಸಿ ಭಂಡಾರಿ ಸಮಾಜಕ್ಕೆ ನೀಡಿ ಈ ದೇವಸ್ಥಾನಕ್ಕೆಂದೇ ಉಂಬಳಿಯನ್ನು ಬಿಟ್ಟು ಪೂಜೆಗೆ ವ್ಯವಸ್ಥೆ ಮಾಡಿ ವಾರ್ಷಿಕ ಉತ್ಸವಾದಿಗಳು ವಿಶೇಷ ಪರ್ವಾದಿಗಳು ವಿಜೃಂಭನೆಯಿಂದ ನಡೆಯುವಂತೆ ಏರ್ಪಾಡು ಮಾಡಿ ದೇವಸ್ಥಾನದ ಆಡಳಿತ ವ್ಯವಸ್ಥೆಯನ್ನು ಭಂಡಾರಿ ಸಮಾಜದವರಿಗೆ ವಹಿಸಿಕೊಟ್ಟರು. ನಗರದ ಕೇಂದ್ರ ಭಾಗದಲ್ಲಿ ಈ ದೇವಸ್ಥಾನ ಇದ್ದುದರಿಂದ ಸಹಸ್ರಾರು ಭಕ್ತರು ನಿತ್ಯ ಪೂಜಿಸಲ್ಪಡುತ್ತಿದ್ದು ದೇವರ ದರ್ಶನವನ್ನು ಮಹಾರಾಜರು ನಿತ್ಯವೂ ಪಡೆಯುತ್ತಿದ್ದರು. ನಗರ ಮಧ್ಯಭಾಗದಲ್ಲಿ ಈ ದೇವಸ್ಥಾನ ಇದ್ದು ನಗರೇಶ್ವರ ಎಂಬ ಹೆಸರಿನಿಂದ ಪ್ರಸಿದ್ಧಿಯಲ್ಲಿತ್ತು.

1760 ರಲ್ಲಿ ಹೈದರಾಲಿ ಮತ್ತು ಟಿಪ್ಪುಸುಲ್ತಾನರ ತುಳು ನಾಡಿಗೆ ಪ್ರವೇಶವಾಯಿತು. ಈ ಸಂದರ್ಭದಲ್ಲಿ ವಯಕ್ತಿಕ ದ್ವೇಷ ಅಸೂಯೆಗಳು ಹೊತ್ತಿ ಉರಿದವು.ಜನರು ಪರಸ್ಪರ ಕೊಲ್ಲೆ ಹೊಡೆದರು. ಹರಾಜುಕತೆ ತಾಂಡವಾಡಿತು. ಜನ ಸೂರು ಕಳೆದುಕೊಂಡು ನಿರಾಶ್ರಿತರಾದರು. ಈ ಸಂದರ್ಭದಲ್ಲಿ ಹಲವು ಗುಡಿ ಗೋಪುರಗಳಿಗೆ ಬೆಂಕಿ ಇಡಲಾಯಿತು. ದೇವಸ್ಥಾನಗಳು ಮೂಳೆ ಗುಂಪಾದವು, ಮೂರ್ತಿಗಳಿಗೆ ಪೂಜೆಯೇ ಇಲ್ಲವಾಯಿತು. ಅಳಿದುಳಿದ ದೇವತಾ ಮೂರ್ತಿಗಳ ರಕ್ಷಣಾ ಕಾರ್ಯವನ್ನು ಭಕ್ತರು ಮರೆಯಲ್ಲೇ ನಡೆಸತೊಡಗಿದರು.

ಸಾರ್ವಜನಿಕವಾಗಿ ಪೂಜೆ ಸಲ್ಲಿಸಲು ಮತಾಂದರ ಭಯ. ಊರಿನ ನಡುವಿನಲ್ಲಿದ್ದ ಈ ದೇವಸ್ಥಾನದ ಪೌಳಿಗಳು ಕುಸಿದು ಬಿದ್ದು ಗರ್ಭಗುಡಿಯಲ್ಲಿದ್ದ ಮಹಾಲಿಂಗವನ್ನು ಕೇಳುವವರು ಇಲ್ಲದಾಗಾಯಿತು. ಇದೇ ಸಮಯದಲ್ಲಿ ಭಂಡಾರಿ ಸಮಾಜದ ಅಳಿದುಳಿದ ಕೆಲವು ಮಂದಿ ಈ ಮಹಾಲಿಂಗವನ್ನು ರಕ್ಷಣೆ ಮಾಡಲು ಪೇಟೆ ಬಿಟ್ಟು ಸ್ವಲ್ಪ ದೂರದಲ್ಲಿ ಮುಲ್ಲು ಪೊದೆಗಳಿಂದ ಆವೃತವಾದ ಹೊಂಡವೊಂದರಲ್ಲಿ ಈ ಮಹಾಲಿಂಗವನ್ನು ಎತ್ತಿ ತಂದಿಟ್ಟರು. ಅಲ್ಲಿಡಲು ಅವರಿಗೆ ದೈವ ಪ್ರೇರಣೆಯೇ ಕಾರಣ. ಹಿಂದಿನ ಯುಗದಲ್ಲಿ ಸಿದ್ದರು, ಮುನಿಗಳು ತಪಸ್ಸು ಮಾಡಿ ಸಾಕ್ಷಾತ್ಕಾರ ಪಡೆದ ದಿವ್ಯಸ್ಥಳದು. ಅಲ್ಲದೆ ವನದೇವತೆಯಾದ ರಕ್ತೇಶ್ವರಿಯ ಸನ್ನಿಧಿಯು ಆಗಿತ್ತು. ಮಹಾ ಸರ್ಪವೊಂದು ಆ ಸ್ಥಳದಲ್ಲಿ ವಾಸವಾಗಿತ್ತು. ಮತಾಂತದರಿಂದ ರಕ್ಷಿಸಲು ಮಹಾಲಿಂಗವನ್ನು ಗೌಪ್ಯವಾಗಿ ತಂದು ಹಾಕಿದ ಭಂಡಾರಿ ಸಮಾಜದ ಮಂದಿಗೆ ಬದುಕೇ ದುರ್ಭರವಾದಾಗ ಅವರಾದರೂ ಹೇಗೆ ಗುಡಿ ಗೋಪುರ ಕಟ್ಟುವ ಸಾಹಸ ಮಾಡಿಯಾರು. ಆದ್ದರಿಂದ ಕೆಲವು ದಶಕಗಳ ಕಾಲ ಈ ಮಹಾಲಿಂಗ ಅಜ್ಞಾತವಾಗಿ ಉಳಿಯಿತು.

18ನೇ ಶತಮಾನದ ಮೊದಲಿಗೆ ಭಂಡಾರಿ ಸಮಾಜದ ದೇವಸ್ಥಾನಕ್ಕೆ ಸಂಬಂಧ ಪಟ್ಟ ಮಹಿಳೆಯೊಬ್ಬಳು ಬದುಕಿನ ಕಷ್ಟಕಾರ್ಪಣ್ಯಗಳಿಗೆ ನೊಂದು ದುಃಖ ತಪ್ತಳಾಗಿ ಊರೇ ಬಿಟ್ಟು ಹೋಗುವ ಸಂದರ್ಭದಲ್ಲಿ ಅದೇ ದಾರಿಯಾಗಿ ನಡೆಯುವಾಗ ನಾಗ ದೇವ ಆಕೆಗೆ ಕಾಣಿಸಿಕೊಂಡು ಈ ಮಹಾಲಿಂಗವನ್ನು ತೋರಿಸಿದ. ಈ ದಿವ್ಯ ಮೂರ್ತಿಯ ದರ್ಶನದಿಂದ ತನ್ನ ದುಃಖವನ್ನೆಲ್ಲ ಮರೆತ ಆಕೆ ತನ್ನ ಆಸುಪಾಸಿನ ಬಂಧುಗಳನ್ನು ಒಟ್ಟು ಸೇರಿಸಿ ಎಲ್ಲರ ನೆರವಿನಿಂದ ಸಣ್ಣ ಗುಡಿ ಕಟ್ಟಿ ಈ ಮೂರ್ತಿಯನ್ನು ಮರು ಪ್ರತಿಷ್ಠಾಪಿಸಲಾಯಿತು. ಪ್ರತ್ಯಕ್ಷ ನಾಗದೇವರೇ ಈ ದೇವಸ್ಥಾನದ ಮರು ಸ್ಥಾನನೆಗೆ ಮೂಲ ಪ್ರೇರಣೆ ನೀಡಿದ್ದರಿಂದ ನಾಗೇಶ್ವರ ದೇವರೆಂದು ಹೆಸರು ಬಂತು. ಮುಂದೆ ಸಮಾಜದ ಹಿರಿಯರ ಪರಸ್ಪರ ಮೇಲಾಟದಿಂದ ಇಲ್ಲಿಯ ಆಡಳಿತ ವ್ಯವಸ್ಥೆ ಹಾಳಾಗಿ ನಿತ್ಯ ಪೂಜೆ ವ್ಯತ್ಯಯಗೊಂಡು ಕೆಲವು ವರ್ಷಗಳ ಕಾಲ ಪೂಜೆಯೇ ಇಲ್ಲವಾಯಿತು. ಸುಮಾರು 150 ವರ್ಷಕ್ಕೂ ಹೆಚ್ಚು ಕಾಲ ಈ ದೇವಸ್ಥಾನ ಜನ ಮಾನಸದಿಂದ ದೂರವಾಗಿತ್ತು.

1986 ರಲ್ಲಿ ಈ ದೇವಸ್ಥಾನ ಭಂಡಾರಿ ಸಮಾಜಕ್ಕೆ ಸೇರಿದ್ದು ಎನ್ನಲಾಗಿದ್ದು ನಂತರ ಭಂಡಾರಿ ಸಮಾಜದ ಮುಖಂಡರು ದೇವಸ್ಥಾನವನ್ನು ಜೀಣೋದ್ಧಾರ ಗೊಳಿಸಲು ಚಿಂತನೆ ನಡೆಸಿ ಅದಕ್ಕೆ ಬೇಕಾದ ಸಮಿತಿಗಳನ್ನು ರಚಿಸಿಕೊಂಡು 1991 ರಲ್ಲಿ ದೇವಸ್ಥಾನಕ್ಕೆ ಶಿಲನ್ಯಾದ ನಡೆಸಿ 1993 ರಲ್ಲಿ ಆಗಮನ ಶಾಸ್ತ್ರಕ್ಕನುಗುಣವಾಗಿ ಭವ್ಯ ಶಿವಾಲಯವನ್ನು ಪುನ:ರ್ ನಿರ್ಮಾಣ ಮಾಡಲಾಯಿತು. ಸುಮಾರು ಅರ್ಧ ಎಕರೆ ಜಮೀನಿನಲ್ಲಿ ದೇವಸ್ಥಾನದ ಅಭಿವೃದ್ದಿ ನಡೆದಿದ್ದು ಗರ್ಭಗುಡಿ, ತೀರ್ಥಮಂಟಪ, ಗಣಪತಿ ಗುಡಿ, ಅನ್ನಪೂರ್ಣೇಶ್ವರಿ ಗುಡಿ, ನಾಗನ ಚಿತ್ರಕೂಟ, ರಾಜಾಂಗಣ, ಸುಸಜ್ಜಿತ ಸಭಾಂಗಣ, ಭೋಜನ ಶಾಲೆ, ಪಾಕ ಶಾಲೆ, ವಸತಿ ಗೃಹ, ಸಾರ್ವಜನಿಕ ಶೌಚಾಲಯ ಮುಂತಾದವುಗಳು ನಿರ್ಮಾಣಗೊಂಡು ಸಾರ್ವಜನಿಕ ಸೇವೆಗೆ ದೊರೆಯುತ್ತಿದೆ.

ದೇವಸ್ಥಾನದಲ್ಲಿ ದಿನಂ ಪ್ರತಿ ನಡೆಯುವ ಪೂಜೆಗಳು ಹಬ್ಬ ಹುಣ್ಣಿಮೆಗಳಲ್ಲಿ ನಡೆಯುವ ವಿಶೇಷ ಪೂಜೆಗಳು, ವರ್ಷಾಧಿ ನಡೆಯುವ ವಾರ್ಷಿಕ ಪೂಜೋತ್ಸವಗಳು, ಅಲ್ಲದೆ ಮಹಾಶಿವರಾತ್ರಿ, ವರಮಹಾಲಕ್ಷ್ಮಿ ಪೂಜೆ, ನಾಗರ ಪಂಚಮಿ, ಚೌತಿ, ಸೋಣಾರತಿ, ಕಾರ್ತಿಕ ಸೋಮವಾರ ವಿಶೇಷ ಪೂಜೆ, ನವರಾತ್ರಿ ಉತ್ಸವ, ವರ್ಷಂಪ್ರತಿ ಷಷ್ಠಿಯಂದು ಸಾರ್ವಜನಿಕ ಆಶ್ಲೇಷ ಬಲಿ ಪೂಜೆ, ವರ್ಷಂ ಪ್ರತಿ ವಾರ್ಷಿಕ ಮಹಾಸಭೆಯಂದು ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ನಡೆದಿದ್ದು ಭಂಡಾರಿ ಸಮಾಜದ ಆರಾಧ್ಯ ದೇವರಾಗಿ ಊರಿನ ಭಕ್ತರ ನೆಚ್ಚಿನ ದೇವಸ್ಥಾನವಾಗಿ ಪೂಜೆ ಪುನಸ್ಕಾರ ನಡೆಯುತ್ತಿದೆ.

ದೇವಸ್ಥಾನದಲ್ಲಿ ದಾರ್ಮಿಕ ಕಾರ್ಯಕ್ರಮಗಳೊಂದಿಗೆ ಸಾಮಾಜಿಕ ಕಾರ್ಯಕ್ರಮವು ನಡೆಯುತ್ತಿದ್ದು ವರ್ಷಂ ಪ್ರತಿ ಸಮಾಜದ ನೂರಾರು ಮಕ್ಕಳಿಗೆ ವಿದ್ಯಾರ್ಥಿ ವೇತನ ವಿತರಣೆ ಮಾಡುತ್ತಿದ್ದು ಸಮಾಜದ ಆರ್ಥಿಕವಾಗಿ ದುರ್ಬಲರಾದವರಿಗೆ ವೈದ್ಯಕೀಯ ಚಿಕಿತ್ಸೆಗಾಗಿ ದೇವಸ್ಥಾನದ ಕ್ಷೇಮ ನಿಧಿಯಿಂದ ಸಹಾಯ ಹಸ್ತ ನೀಡಲಾಗುತ್ತಿದೆ.
ಇದೇ ದಿನಾಂಕ 08-05-2017 ರಂದು ಮುಂಬಯಿ ಭಂಡಾರಿ ಬಂಧುಗಳ ಉಸ್ತುವಾರಿಯಲ್ಲಿ ದೇವಸ್ಥಾನದ ವಾರ್ಷಿಕ ಪ್ರತಿಷ್ಠಾ ವರ್ಧತ್ಯುತ್ಸವ ನಡೆಯಲಿದೆ.

ಕರ್ನಾಟಕ ರಾಜ್ಯದ ಮೂಲ ಜನಾಂಗದಲ್ಲೊಂದಾದ ಪ್ರತಿಷ್ಠಿತ ಭಂಡಾರಿ ಸಮುದಾಯವು ತನ್ನ ಕಲದೇವರು ಆಗಿಸಿ ಆರಾಧಿಸಿಕೊಂಡು ಬಂದಿರುವ ಸುಮಾರು ಒಂಭತ್ತು ಶತಮಾನಗಳ ಇತಿಹಾಸವುಳ್ಳ ಉಡುಪಿ ಜಿಲ್ಲೆಯ ಬ್ರಹ್ಮಾವರ ಸನಿಹದ ಬಾರ್ಕೂರು ಹನೆಹಳ್ಳಿ ಗ್ರಾಮದಲ್ಲಿನ ನೆಲೆಯಾಗಿರುವ ದೇವಸ್ಥಾನದಲ್ಲಿ ಕಚ್ಚೂರು ಶ್ರೀ ನಾಗೇಶ್ವರ ವಾರ್ಷಿಕ ಪ್ರತಿಷ್ಠಾಪನಾ ವರ್ಧಂತ್ಯುತ್ಸ-2017ವನ್ನು ಶ್ರೀ ನಾಗೇಶ್ವರ ಉತ್ಸವ ಮುಂಬಯಿ ಸಮಿತಿ, ಮುಂಬಯಿನ ಸಮಸ್ತ ಭಂಡಾರಿ ಬಂಧುಗಳ ಸಮಾಕ್ಷಮ ಹಾಗೂ ಉಡುಪಿ ಬಾರ್ಕೂರು ಅಲ್ಲಿನ ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನ ಮಂಡಳಿಯ ಸಾರಥ್ಯದಲ್ಲಿ ದೇಶ ವಿದೇಶಗಳಲ್ಲಿನ ಸಾವಿರಾರು ಭಂಡಾರಿ ಸಮಾಜ ಬಂಧುಗಳ ಸೇರುವಿಕೆಯಲ್ಲಿ ಇದೇ ಮೇ.08ನೇ ಸೋಮವಾರ ಸ್ವಸ್ತಿ ಶ್ರೀ ಹೇಮಲಂಬಿ ನಾಮ ಸಂವತ್ಸರದ ಮೇಷ ಮಾಸ ದಿನ 25 ಸಲುವ ವೈಶಾಖ ಶುದ್ಧನೇ ಶುಭದಿನದಂದು ಕಚ್ಚೂರು ಶ್ರೀ ನಾಗೇಶ್ವರ ದೇವರ ದಿವ್ಯ ಸನ್ನಿಧಿಯಲ್ಲಿ ವಾರ್ಷಿಕ ಕಾಲಮಾಸದಂತೆ ದಿನಪೂರ್ತಿ ಕಾರ್ಯಕ್ರಮಗಳೊಂದಿಗೆ ವಾರ್ಷಿಕ ಪ್ರತಿಷ್ಠಾಪನಾ ವರ್ಧಂತ್ಯುತ್ಸ ಆಚರಿಸಲಿದೆ.

ವಾರ್ಷಿಕೋತ್ಸವ ಸಮಿತಿ ಮುಂಬಯಿ ಪ್ರಾಯೋಜಕತ್ವದಲ್ಲಿ ನಡೆಸಲ್ಪಡುವ ಕಾರ್ಯಕ್ರಮವು ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನ ಬಾರ್ಕೂರು ಇದರ ಆಡಳಿತ ಮೊಕ್ತೇಸರ ಹಾಗೂ ಕಚ್ಚೂರು ಶ್ರೀ ನಾಗೇಶ್ವರ ಸೇವಾ ಟ್ರಸ್ಟ್ ಬಾರ್ಕೂರು ಅಧ್ಯಕ್ಷ ಕಡಂದಲೆ ಸುರೇಶ್ ಎಸ್.ಭಂಡಾರಿ ಅವರ ಅಧ್ಯಕ್ಷತೆಯಲ್ಲಿ ಭವ್ಯ ಧಾರ್ಮಿಕ ಸಮಾರಂಭ ಜರುಗಲಿದೆ. ಭಂಡಾರಿ ಮಹಾ ಮಂಡಲದ ಅಧ್ಯಕ್ಷ ಸದಾಶಿವ ಸಕಲೇಶಪುರ ಪ್ರಧಾನ ಕಾರ್ಯದರ್ಶಿ ಯು.ಸತೀಶ್ ಭಂಡಾರಿ, ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನ ಸಮಿತಿಯ ಪ್ರಧಾನ ಕಾರ್ಯದರ್ಶಿ ಸೋಮಶೇಖರ ಎಂ. ಭಂಡಾರಿ, ಕೋಶಾಧಿಕಾರಿ ಬನ್ನಂಜೆ ಸಂಜೀವ ಭಂಡಾರಿ, ಭಂಡಾರಿ ಸೇವಾ ಸಮಿತಿ ಮುಂಬಯಿ ಅಧ್ಯಕ್ಷ ನ್ಯಾಯವಾದಿ ಶೇಖರ್ ಎಸ್. ಭಂಡಾರಿ ಸಹಯೋಗವಿದ್ದು, ವಾರ್ಷಿಕೋತ್ಸವ ಸಮಿತಿ ಮುಂಬಯಿ ಅಧ್ಯಕ್ಷ ಡಾ| ಅತ್ತೂರು ಶಿವರಾಮ ಕೆ.ಭಂಡಾರಿ, ಉಪಾಧ್ಯಕ್ಷ ಕೇಶವ ಟಿ.ಭಂಡಾರಿ, ಪ್ರಧಾನ ಕಾರ್ಯದರ್ಶಿ ನ್ಯಾ| ಆರ್.ಎಂ.ಭಂಡಾರಿ, ಕೋಶಾಧಿಕಾರಿ ರಮೇಶ ವಿ.ಭಂಡಾರಿ, ಜೊತೆ ಕಾರ್ಯದರ್ಶಿ ರಂಜಿತ್ ಸೀತಾರಾಮ ಭಂಡಾರಿ, ಜೊತೆ ಕೋಶಾಧಿಕಾರಿ ಶಶಿಧರ್ ಭಂಡಾರಿ ಸೇರಿದಂತೆ ವಿವಿಧ ಉಪ ಸಮಿತಿಗಳ ಮುಖ್ಯಸ್ಥರು, ಎಲ್ಲಾ ಪದಾಧಿಕಾರಿಗಳು ಮತ್ತು ಸರ್ವ ಸದಸ್ಯರು ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸುತ್ತಿದ್ದಾರೆ ಎಂದು ಭಂಡಾರಿ ಸೇವಾ ಸಮಿತಿ ಮುಂಬಯಿ ಇದರ ಮಾಜಿ ಪ್ರಧಾನ ಕಾರ್ಯದರ್ಶಿ ಪ್ರಭಾಕರ್ ಪಿ.ಭಂಡಾರಿ ಥಾಣೆ ತಿಳಿಸಿದ್ದಾರೆ.

 

 

 

 




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here