Saturday 10th, May 2025
canara news

ಪಂಪ್ವೆಲ್ಲಿನಲ್ಲಿ ಹೈಟೆಕ್ ಬಸ್ ನಿಲ್ದಾಣವೂ ಇಲ್ಲ ;

Published On : 30 Jun 2017   |  Reported By : Rons Bantwal


`ಪಂಪ್ವೆಲ್ಲಿನಲ್ಲಿ ಹೈಟೆಕ್ ಬಸ್ ನಿಲ್ದಾಣವೂ ಇಲ್ಲ ;
`ಪ್ರಸ್ತಾವಿತ' ಜಾಗದ ವಿವಾದಕ್ಕೆ ಕೊನೆಯೂ ಇಲ್ಲ....!
ಇನ್ :- ಜಮೀನು ಮಾಲಕರ ನೋವು ಕೇಳುವವರಿಲ್ಲವೇ ?

ಮಂಗಳೂರು : ಸ್ಮಾರ್ಟ್ ಸಿಟಿ ಯೋಜನೆಯಡಿ ಆಯ್ಕೆಯಾಗಿರುವ ಮಂಗಳೂರಲ್ಲಿ ಖಾಸಗಿ ಬಸ್ಸುಗಳಿಗೆ ವ್ಯವಸ್ಥಿತ ನಿಲ್ದಾಣವೊಂದಿಲ್ಲ. 10 ವರ್ಷದ ಹಿಂದೆ ಮಂಗಳೂರು ನಗರ ಪಾಲಿಕೆ ಪಂಪುವೆಲ್ಲಿಗೆ ಹತ್ತಿರ ಹೆದ್ದಾರಿ ಪಕ್ಕದಲ್ಲಿ ಹೈಟೆಕ್ ಬಸ್ ನಿಲ್ದಾಣ ನಿರ್ಮಿಸಲು ಎಕ್ರೆಗಟ್ಟಲೆ ಜಾಗ ಕಾಯ್ದಿರಿಸಿದ್ದರೂ, ಆ ಜಾಗದಲ್ಲಿ ಇದುವರೆಗೆ ಬಸ್ ನಿಲ್ದಾಣ ನಿರ್ಮಾಣದ ಕಾಮಗಾರಿ ಕುರುಹುಗಳು ಕಂಡು ಬಂದಿಲ್ಲ. ಬದಲಾಗಿ, ಸದ್ರಿ ಜಾಗ ಪಾಳು ಬಿದ್ದಿದ್ದು, ಇದಕ್ಕೆ ಹೊಂದಿಕೊಂಡಿರುವ ಖಾಸಗಿಯವರ ಅಥವಾ ಮನಪಾ `ಪ್ರಸ್ತಾವಿತ' ಒಂದಷ್ಟು ಎಕ್ರೆ ಜಮೀನು ಇದ್ದು, ಇದರಲ್ಲಿ ಕಟ್ಟಡ ನಿರ್ಮಾಣಕ್ಕೆ ಮನಪಾ ಲೈಸೆನ್ಸ್ ನೀಡದಿರುವುದು ಅತ್ಯಂತ ಶೋಚನೀಯ ಸಂಗತಿಯಾಗಿದೆ.

ಒಂಬತ್ತು ವರ್ಷದ ಹಿಂದೆ ಮನಪಾ ನಗರದಲ್ಲೊಂದು ಖಾಸಗಿ ಹೈಟೆಕ್ ಬಸ್ ನಿಲ್ದಾಣ ನಿರ್ಮಿಸಲು ಪ್ರಸ್ತಾವಿಸಿ, ಪಂಪ್ವೆಲ್ಲಿನಲ್ಲಿ 7.23 ಎಕ್ರೆ ಜಾಗ ಸ್ವಾಧೀನಪಡಿಸಿಕೊಂಡಿತ್ತು. ಹೆಚ್ಚುವರಿ ಜಮೀನಾಗಿ ಪಕ್ಕದಲ್ಲಿರುವ 11.38 ಎಕ್ರೆ ಜಾಗವನ್ನೂ ಮನಪಾ ಪ್ರಸ್ತಾವನೆಗೆ ಇಟ್ಟಿತ್ತು. ಈ ಜಾಗದೆದುರು 4.38 ಎಕ್ರೆ ಡೀನೋಟಿಫೈ ಜಾಗವಿದೆ. ಬಸ್ ನಿಲ್ದಾಣ ನಿರ್ಮಿಸಲು ಸ್ವಾಧೀನಪಡಿಸಿಕೊಂಡಿರುವ ಜಾಗದ ಕೊನೆಯಲ್ಲಿ ಸಚಿವ ಖಾದರ್ ಸಂಬಂಧಿಯೊಬ್ಬರಿಗೆ ಸೇರಿದೆ ಎನ್ನಲಾದ ಜಾಗದಲ್ಲಿ ಸಿಂಗಲ್ ಲೇಔಟ್ ನಿರ್ಮಿಸಲು ಮನಪಾ ಲೈಸೆನ್ಸ್ ನೀಡಿದ್ದು, ಕಟ್ಟಡ ಕಾಮಗಾರಿ ಪೂರ್ಣ ಹಂತದಲ್ಲಿದೆ. ಆದರೆ ಪ್ರಸ್ತಾವಿತ ಜಾಗದ(11.38 ಎಕ್ರೆ) ಬಗ್ಗೆ ಮನಪಾದ ಧೋರಣೆ ಮಾತ್ರ ಜಮೀನುದಾರರ ನಿದ್ದೆಗೆಡಿಸಿದಂತಿದೆ !

ಪ್ರಸ್ತಾವಿತ ಜಾಗ ಬೇಡ ಎನ್ನುತ್ತಿರುವ ಮನಪಾ, ಆ ಜಾಗದಲ್ಲಿ ಕಟ್ಟಡ ನಿರ್ಮಿಸಲು ಲೈಸೆನ್ಸ್ ನೀಡದಿರಲು ಕಾರಣವೇನು ? ಈ ಜಾಗ ಮಾರಬಹುದಾದರೂ ಖರೀದಿಸುವವರಿಲ್ಲದಂತಾಗಿದೆ. ಸಿಂಗಲ್ ಲೇಔಟಿಗೆ ಅನುಮತಿ ಸಿಕ್ಕಿದರೂ ಮನಪಾ ಲೈಸೆನ್ಸ್ ಇಲ್ಲದಿದ್ದರೆ ಬ್ಯಾಂಕುಗಳು ಸಾಲ ನೀಡುವುದಿಲ್ಲ. ಈ ವಿಷಯದಲ್ಲಿ `ಪ್ರಸ್ತಾವಿತ' ಪ್ರದೇಶದಲ್ಲಿ 10, 15, 20 50 30 ಸೆಂಟ್ಸ್ ಜಾಗ ಹೊಂದಿರುವ 60ಕ್ಕೂ ಹೆಚ್ಚು ಭೂ-ಮಾಲಕರು ಸಂದಿಗ್ಧ ಪರಿಸ್ಥಿತಿ ಎದುರಿಸುವಂತಾಗಿದೆ.

ಪ್ರಸ್ತಾವಿತ ಜಾಗವನ್ನೂ ಖರೀದಿಸಿ ಎಂದು ಹಿಂದೊಮ್ಮೆ ಮನಪಾಕ್ಕೆ ಬೇಡಿಕೆ ಇಟ್ಟಾಗ, ``ಈಗ ಸ್ವಾಧೀನಪಡಿಸಲಾಗಿರುವ ಜಾಗದಲ್ಲೂ ಬಸ್ ನಿಲ್ದಾಣ ನಿರ್ಮಿಸಲು ಆರ್ಥಿಕ ಮುಂಗಟ್ಟು ಎದುರಾಗಿದೆ. ಹಾಗಾಗಿ ಉಳಿದ(ಪ್ರಸ್ತಾವಿತ) ಜಾಗ ಯಾರಿಗೆ ಬೇಕು'' ಎಂದು ಮನಪಾ ಮಾಜಿ ಆಯುಕ್ತ ಪ್ರಶ್ನಿಸಿದ್ದಾರೆಂದು ಸ್ಥಳೀಯ ನೊಂದ ಜಮೀನು ಮಾಲಕರೊಬ್ಬರು ವಿವರಿಸಿದ್ದಾರೆ.

ಪ್ರಸ್ತಾವಿತ ಜಾಗದಲ್ಲಿ ಸಿಂಗಲ್ ಲೇಔಟಿಗೆ ಮೂಡ ಈಗಲೂ ಪರವಾನಿಗೆ ನೀಡುತ್ತಿದ್ದು, ಲಕ್ಷಾಂತರ ರೂ ಗಳಿಸುತ್ತಿದೆ. ಆದರೆ ಈ ಜಾಗದಲ್ಲಿ ಕಟ್ಟಡ ನಿರ್ಮಿಸಲು ಮನಪಾ ಲೈಸೆನ್ಸ್ ಮಂಜೂರು ಮಾಡುತ್ತಿಲ್ಲ. ಹಾಗಾಗಿ ಸಾಲ ಮಾಡಿ ಇಲ್ಲಿ ಜಾಗ ಖರೀದಿಸಿರುವ ಭೂ-ಮಾಲಕರು ಜಾಗವನ್ನು ಅತ್ತ ಮಾರಲಾಗದೆ, ಇತ್ತ ಉಳಿಸಿಕೊಳ್ಳಲಾಗದೆ ಸಂಕಷ್ಟ ಎದುರಿಸುವಂತಾಗಿರುವುದಲ್ಲದೆ, ಹೋರಾಟದ ಹಾದಿ ಹಿಡಿಯುವಂತಾಗಿದೆ.

ಬಸ್ ನಿಲ್ದಾಣಕ್ಕಾಗಿ ಪ್ರಸ್ತಾವಿಸಲಾಗಿರುವ ಹೆಚ್ಚುವರಿ ಜಾಗ ಬಿಟ್ಟುಕೊಡಲಾಗುವುದು ಎಂದು ಪಾಲಿಕೆ ಕಳೆದ ಮೂರ್ನಾಲ್ಕು ವರ್ಷದಿಂದ ಹೇಳುತ್ತಿದ್ದರೂ, ಮನಪಾ ಸ್ವಾಧೀನಪಡಿಸಿರುವ ಜಾಗದಲ್ಲಿ ಮಾತ್ರ ಕಟ್ಟಡ ನಿರ್ಮಿಸಲು ಲೈಸೆನ್ಸ್ ನೀಡಿರುವುದು ಉಳಿದ ಭೂ-ಮಾಲಕರ ಕಾನೂನು ರೀತ್ಯಾ ಸವಾಲಿಗೆ ಪುಷ್ಟಿ ನೀಡಿದಂತಾಗಿದೆ. ``ಒಂದಾ ಪ್ರಸ್ತಾವಿತ ಜಾಗದಲ್ಲಿ ನಮಗೆ ಕಟ್ಟಡ ನಿರ್ಮಿಸಲು ಮನಪಾ ಲೈಸೆನ್ಸ್ ಮಂಜೂರು ಮಾಡಬೇಕು ಅಥವಾ ಪ್ರಸ್ತಾವನೆ ಕೈಬಿಡಬೇಕು ಅಥವಾ 11.59 ಎಕ್ರೆ ಜಾಗ ಖರೀದಿಸಬೇಕು'' ಎಂದವರು ಆಗ್ರಹಿಸಿದ್ದಾರೆ.

ಈ ಬೇಡಿಕೆಗೆ ಸ್ಥಳೀಯ ಕಾರ್ಪೊರೇಟರುಗಳು ಬೆಂಬಲ ವ್ಯಕ್ತಪಡಿಸಿದ್ದಾರೆ. ಆದರೆ ಮಂಗಳೂರು ಶಾಸಕ ಜೆ ಆರ್ ಲೋಬೊ ಮತ್ತು ಮನಪಾ ಆಯುಕ್ತ ಸೂಕ್ತ ಪ್ರತಿಕ್ರಿಯೆ ನೀಡದೆ, ಪ್ರಸಕ್ತ ವಿವಾದ ಮುಂದುವರಿಸಲು ಪ್ರಯತ್ನಿಸುತ್ತಿದ್ದಾರೆಂದು ನೊಂದವರು ಆಪಾದಿಸಿದ್ದಾರೆ.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here