ಕುಂದಾಪುರ: ಚಾತುರ್ಮಾಸ ವೃತಾಚರಣೆ ಹಿಂದೂ ಧರ್ಮದ ಪ್ರಮುಖ ಆಚರಣೆಗಳಲ್ಲೊಂದು. ಭೀಮನಕಟ್ಟೆ ಮಠಾಧೀಶರು ಈ ಪವಿತ್ರ ವೃತಾಚರಣೆಗೆ ಕೋಟೇಶ್ವರವನ್ನು ಆಯ್ಕೆ ಮಾಡಿಕೊಂಡಿರುವುದು ಈ ಭಾಗದ ಭಕ್ತರ ಪುಣ್ಯ. ಈ ವೇಳೆ ಸತ್ಸಂಗ ನಡೆಯಲಿದ್ದು, ಭಜನೆ, ಕೀರ್ತನಾ ಸೇವೆಗಳನ್ನು ನಡೆಯಿಸುವವರಿಗೆ ಅವಕಾಶವಾಗುತ್ತದೆ. ಕೋಟೇಶ್ವರ 14 ಗ್ರಾಮಗಳ ಮಾಗಣೆ ಬಂಧುಗಳು ಸಹಕರಿಸಿ ಈ ವೃತಾಚರಣೆಯನ್ನು ಯಶಸ್ವಿಗೊಳಿಸಬೇಕು ಎಂದು ಕೋಟೇಶ್ವರದ ಶ್ರೀ ಕೋದಂಡ ರಾಮ ಮಂದಿರ ಆಡಳಿತ ಮಂಡಳಿಯ ಅಧ್ಯಕ್ಷ ದೊಡ್ಮನೆ ನಾಗೇಂದ್ರ ಭಟ್ ಮನವಿ ಮಾಡಿದರು.
ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕು ಭೀಮನಕಟ್ಟೆಯ ಶ್ರೀ ಭೀಮಸೇತು ಮುನಿವೃಂದ ಮಠದ ಕಿರಿಯ ಯತಿ ಶ್ರೀ ರಘುವರೇಂದ್ರ ತೀರ್ಥ ಸ್ವಾಮಿಗಳು ಇಲ್ಲಿನ ಶ್ರೀ ಕೋದಂಡ ರಾಮ ಮಂದಿರದಲ್ಲಿ ಚಾರ್ತುಮಾಸ್ಯ ವೃತಾಚರಣೆ ಕೈಗೊಳ್ಳುವ ಅಂಗವಾಗಿ ನಡೆದ ಪೂರ್ವಭಾವಿ ಸಭಾದ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.
ಆನೆಗುಡ್ಡೆ ಶ್ರೀ ವಿನಾಯಕ ದೇವಳ ಆಡಳಿತ ದರ್ಮಧರ್ಶಿ ಕೆ. ಸೂರ್ಯನಾರಾಯಣ ಉಪಾಧ್ಯಾಯ ಮಾತನಾಡಿ ಸ್ವಾಮೀಜಿಯವರ ವೃತಾಚರಣೆಯಿಂದ ಊರಿಗೇ ಒಳಿತಾಗುತ್ತದೆ. ಅವರ ಹುಟ್ಟೂರು ಕೋಟೇಶ್ವರವೇ ಆದ್ದರಿಂದ ಈ ಬಾರಿ ಮಹತ್ವ ಪಡೆದಿದೆ. ಇದನ್ನು ಯಶಸ್ವಿಗೊಳಿಸುವುದು ನಮ್ಮೆಲ್ಲರ ಜವಾಬ್ದಾರಿ ಎಂದರು.
ಗೋಪಾಡಿ ಸೀತಾರಾಮ ಧನ್ಯ ಮಾತನಾಡಿ ಈಗಾಗಲೇ ಸ್ವಾಮೀಜಿಯವರೊಂದಿಗೆ ಮಾತುಕತೆ ನಡೆಸಲಾಗಿದೆ. ಅವರ ವೃತಾಚರಣೆಯ ಸಂದರ್ಭದಲ್ಲಿ ದೈನಂದಿನ ಪೂಜಾದಿಗಳು. ಭದ್ರತೆ ಇತ್ಯಾದಿಗಳ ಬಗ್ಗೆ ಚರ್ಚಿಸಲಾಗಿದೆ ಎಂಬ ವಿವಿರಗಳನ್ನು ನೀಡಿದರು.
ಶ್ರೀ ಕೋದಂಡ ರಾಮ ಮಂದಿರದ ಅರ್ಚಕ ನಾಗರಾಜ ಅಡಿಗ, ಮಾಧವ ವರ್ಣ, ರಾಮಚಂದ್ರ ವರ್ಣ. ಪ್ರಾಣೇಶ ತಂತ್ರಿ, ಶ್ರೀನಿವಾಸ ಹೆಬ್ಬಾರ್, ವೆಂಕಟೇಶ ಅರಸ್, ಲಕ್ಷ್ಮೀನಾರಾಯಣ ಉಪಾಧ್ಯ, ಕುಂಭಾಸಿ ಶ್ರೀ ಹರಿಹರ ದೇವಳದ ಅರ್ಚಕ ನಾಗರಾಜ ಭಟ್ ಮೊದಲಾದವರು ಸಲಹೆ ಸೂಚನೆಗಳನ್ನು ನೀಡಿದರು. ವೃತಾಚರಣೆಯ 52 ದಿನಗಳ ಕಾಲ ವಿವಿಧ ಗ್ರಾಮಸ್ಥರು, ಕೋಟೇಶ್ವರ ಮಾಗಣೆ ಬಂಧುಗಳು ಕರಸೇವೆ ಸಲ್ಲಿಸಿ ಸಹಕರಿಸಬೇಕಾಗಿಯೂ, ಚಾತುರ್ಮಾಸ ವೃತಾಚರಣೆ ಯಶಸ್ವಿಗೊಳಬೇಕಾಗಿಯೂ ಸಭೆಯಲ್ಲಿ ಮನವಿ ಮಾಡಲಾಯಿತು.
ಇದೇ ಸಂದರ್ಭಲದಲ್ಲಿ ಚಾತುರ್ಮಾಸ ವೃತಾಚರಣೆ ಉಸ್ತುವಾರಿ ಸಮಿತಿಯೊಂದನ್ನು ರಚಿಸಲಾಯಿತು. ಮಾಗಣೆಯ ಹಿರಿಯ, ನಿವೃತ್ತ ಬ್ಯಾಂಕ್ ಅಧಿಕಾರಿ ಮಾಧವ ವರ್ಣ ಸಮಿತಿಯ ಅಧ್ಯಕ್ಷರಾಗಿಯೂ. ಸೀತಾರಾಮ ಧನ್ಯ ಕಾರ್ಯದರ್ಶಿ, ನೇರಂಬಳ್ಳಿ ರಾಘವೇಂದ್ರ ರಾವ್ ಸಂಚಾಲಕ, ರಾಮಕೃಷ್ಣ ಮೂರ್ತಿ ಖಜಾಂಚಿಯಾಗಿಯೂ ಆಯ್ಕೆಗೊಂಡರು.
ಭೀಮಸೇತು ಮುನಿವೃಂದ ಮಠವು ಭೀಮನಕಟ್ಟೆ ಮಠ ಎಂದೇ ಪ್ರಸಿದ್ದಿಯಾಗಿದೆ. ಉಡುಪಿಯ ಅಷ್ಟ ಮಠಗಳೊಂದಿಗೆ ನಿಕಟ ಸಂಪರ್ಕಹೊಂದಿರುವ ಇದರ ಶಿಷ್ಯ ವರ್ಗದವರು ಕೋಟೇಶ್ವರ ಪರಿಸರದಲ್ಲಿ ವ್ಯಾಪಕವಾಗಿದ್ದಾರೆ. ಇಲ್ಲಿನ ಹಿರಿಯ ಯತಿ ರಘುಮಾನ್ಯ ತೀರ್ಥರು ಶ್ರೀ ಮಠದಲ್ಲೇ ಚಾತುರ್ಮಾಸ ವೃತ ಕೈಗೊಳ್ಳುವರು. ಕಿರಿಯ ಯತಿ ಶ್ರೀ ರಘುವರೇಂದ್ರ ತೀರ್ಥರು ಕೋಟೇಶ್ವರ ಸಮೀಪದ ಬೀಜಾಡಿಯ ಪ್ರತಿಷ್ಠಿತ ಅರಸರ ಕುಟುಂಬದಲ್ಲಿ ಜನಿಸಿದ್ದು, ಇಲ್ಲೇ ಪ್ರಾಥಮಿಕ, ಹೈಸ್ಕೂಲ್ ವಿದ್ಯಾಭ್ಯಾಸ ನಡೆಸಿದ್ದರು, ಕೋಟೇಶ್ವರದ ಶ್ರೀ ಕೋದಂಡ ರಾಮ ಮಂದಿರದಲ್ಲಿ ಇದುವರೆಗೂ ಯಾರೂ ಚಾತುರ್ಮಾಸ ವೃತಾಚರಣೆ ನಡಿಸಿದ್ದಿಲ್ಲ. ಇತಿಹಾಸದಲ್ಲೇ ಪ್ರಥಮ ಬಾರಿಗೆ, ಪೂರ್ವಾಶ್ರಮದಲ್ಲಿ ಇದೇ ಪರಿಸರದವರಾದ ಭೀಮನಕಟ್ಟೆ ಮಠಾಧೀಶರು ಇಲ್ಲಿ ವೃತಾಚರಣೆ ನಡೆಸುವುದು ವಿಶೇಷ ಮಹತ್ವ, ಸಂಭ್ರಮ ಮೂಡಿಸಿದೆ.