ಮಂಗಳೂರು: ಡಾ| ಜಿ. ಪರಮೇಶ್ವರ್ ಅವರಿಂದ ತೆರವಾಗಿರುವ ಗೃಹಸಚಿವ ಸ್ಥಾನವನ್ನು ಸಚಿವ ರಮಾನಾಥ ರೈ ಅವರಿಗೆ ನೀಡಲಾಗುತ್ತಿದೆ ಎಂಬುದಾಗಿ ಕಳೆದ ಹಲವು ದಿನಗಳಿಂದ ಕೇಳಿ ಬರುತ್ತಿರುವ ವದಂತಿಗಳಿಗೆ ಪುಷ್ಟಿ ನೀಡುವಂತೆ ಕೆಲವು ದಿಢೀರ್ ಬೆಳವಣಿಗೆಗಳು ಶನಿವಾರ ನಡೆದಿವೆ.
ತುರ್ತಾಗಿ ಬೆಂಗಳೂರಿಗೆ ಬರುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಬಿ. ರಮಾನಾಥ ರೈ ಅವರಿಗೆ ಬುಲಾವ್ ಬಂದಿದ್ದು ಈ ಹಿನ್ನೆಲಯಲ್ಲಿ ರವಿವಾರ ನಿಗದಿಯಾಗಿದ್ದ ಕಾರ್ಯಕ್ರಮಗಳನ್ನು ರದ್ದುಗೊಳಿಸಿ ಅವರು ಬೆಂಗಳೂರಿಗೆ ತೆರಳಿದ್ದಾರೆ ಎನ್ನಲಾಗಿದೆ. ರಾಜ್ಯ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿನ ಇತ್ತೀಚಿನ ವಿದ್ಯಮಾನಗಳು, ಕೆಲವೇ ತಿಂಗಳುಗಳಲ್ಲಿ ನಡೆಯುವ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ರಮಾನಾಥ ರೈ ಅವರು ಗೃಹಸಚಿವ ಸ್ಥಾನ ವಹಿಸಿಕೊಳ್ಳಲು ಹೆಚ್ಚಿನ ಆಸಕ್ತಿ ವಹಿಸಿಲ್ಲ.
ಗೃಹ ಸಚಿವಾಲಯ ಮಹತ್ವದ ಇಲಾಖೆಯಾಗಿದ್ದು ವಿಶೇಷ ಗಮನ ನೀಡಬೇಕಾಗುತ್ತದೆ. ಇದರಿಂದ ತನ್ನ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆಯ ಹಿನ್ನೆಲೆಯಲ್ಲಿ ಗಮನಹರಿಸಿ ಕೆಲಸ ಮಾಡಲು ಸಾಧ್ಯವಾಗಲಾರದು ಎಂಬ ಅಂಶಗಳು ಅವರು ಆಸಕ್ತಿ ವಹಿಸದಿರಲು ಕಾರಣವಾಗಿವೆ ಎಂದು ಮೂಲಗಳು ತಿಳಿಸಿವೆ.