ಗಡಿನಾಡ ಸಾಹಿತ್ಯ-ಸಾಂಸ್ಕøತಿಕ ಅಕಾಡೆಮಿಯಿಂದ ಗಡಿನಾಡ ಸಾಹಿತ್ಯ ಸಾಂಸ್ಕøತಿಕ ಪಯಣ ಕಾರ್ಯಕ್ರಮ
ಬದಿಯಡ್ಕ, ಜು.26: ಸಾಹಿತ್ತಿಕ, ಸಾಂಸ್ಕøತಿಕ ಬೇರುಗಳು ಗಟ್ಟಿಯಾದಂತೆ ಭಾಷೆ ಉಳಿದು ಬೆಳೆಯುತ್ತದೆ. ಮಕ್ಕಳಲ್ಲಿ ಸಾಂಸ್ಕøತಿಕ, ಸಾಹಿತ್ತಿಕ ಮೌಲ್ಯಗಳನ್ನು ಬಿತ್ತುವ ಪ್ರಯತ್ನ ಅಗತ್ಯವಿದ್ದು, ಈ ಮೂಲಕ ಕನ್ನಡ ಭಾಷೆ, ಸಂಸ್ಕøತಿ ವಿಶಾಲವಾಗಿ ಬೆಳೆಯಲು ನೆರವಾಗುತ್ತದೆ. ಇಂದಿನ ವೈಜ್ಞಾನಿಕ ಯುಗದಲ್ಲಿ ಎತ್ತಲೋ ಸಾಗುತ್ತಿರುವ ಸಾಮಾಜಿಕ ಮೌಲ್ಯಗಳನ್ನು ಮೂಲ ಸ್ವರೂಪದಲ್ಲಿ ಉಳಿಸಿಕೊಳ್ಳುವ ಶಕ್ತಿ ಸಾಹಿತ್ಯ ಮತ್ತು ಸಾಂಸ್ಕøತಿಕ ಚಟುವಟಿಕೆಗಳಲ್ಲಿ ಇದೆ ಎಂದು ಕರ್ನಾಟಕ ಸರಕಾರದ ಅನಿವಾಸಿ ಭಾರತೀಯ ಘಟಕದ ಉಪಾಧ್ಯಕ್ಷೆ ಡಾ| ಆರತಿ ಕೃಷ್ಣ ಅಭಿಪ್ರಾಯ ವ್ಯಕ್ತಪಡಿಸಿದರು.
ಕಾಸರಗೋಡಿನ ಗಡಿನಾಡ ಸಾಹಿತ್ಯ-ಸಾಂಸ್ಕøತಿಕ ಅಕಾಡೆಮಿಯು ಮಂಗಳವಾರ ಅಪರಾಹ್ನ ನೀರ್ಚಾಲು ಸಮೀಪದ ಮಾನ್ಯದ ಜ್ಞಾನೋದಯ ಹಿರಿಯ ಬುನಾದಿ ಶಾಲೆಯಲ್ಲಿ ಆರಂಭಿಸಿದ ಗಡಿನಾಡ ಸಾಹಿತ್ಯ ಸಾಂಸ್ಕøತಿಕ ಪಯಣ ಕಾರ್ಯಕ್ರಮವನ್ನು ದೀಪಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.
ಜಾಗತಿಕ ಮಟ್ಟದಲ್ಲಿ ಶ್ರೀಮಂತ ಸಾಹಿತ್ಯ, ಸಂಸ್ಕ್ರತಿಗಳ ಮಾನ್ಯತೆಹೊಂದಿರುವ ಕನ್ನಡ ಭಾಷೆ ಮಹಾನ್ ಸಾಧಕರ, ಕವಿಪುಂಗವರ ಕೊಡುಗೆಗಳ ಮೂಲಕ ಬೆಳೆದುನಿಂತಿದ್ದು, ಅದನ್ನು ಮೂಲ ಸ್ವರೂಪದಲ್ಲಿ ಉಳಿಸುವ ತುರ್ತು ಇಂದಿದೆ ಎಂದು ತಿಳಿಸಿದ ಅವರು, ಕನ್ನಡ ಮಾಧ್ಯಮ ಶಾಲೆಗಳಿಂದಷ್ಟೆ ಇದು ಸಾಧ್ಯವೆಂದು ತಿಳಿಸಿದರು. ಮಕ್ಕಳ ಬೆಳವಣಿಗೆಯ ಪ್ರಾಥಮಿಕ ಹಂತದಲ್ಲಿ ನಾವವರನ್ನು ಸಾಂಸ್ಕøತಿಕ ಹಿನ್ನೆಲೆಯ ಭದ್ರಬುನಾದಿಯೊಂದಿಗೆ ಬೆಳೆಸಿದಾಗ ಉದ್ದೇಶಿತ ಲಕ್ಷ್ಯ ನಿರ್ಮಾಣಗೊಳ್ಳಲು ಸಾಧ್ಯವೆಂದು ತಿಳಿಸಿದ ಡಾ| ಆರತಿ ಕೃಷ್ಣ, ಇಂದಿನ ವಿದ್ಯಾಭ್ಯಾಸ ಕ್ರಮಗಳಲ್ಲಿ ಇಂತವನ್ನು ಬೆಳೆಸಲು, ಕಲಿಸಲು ಹೆಚ್ಚು ಅವಕಾಶ ಇಲ್ಲದಿರುವುದು ವಿಷಾದನೀಯ ಎನ್ನುತ್ತಾ, ಸ್ಥಳೀಯ ಮಟ್ಟದಲ್ಲಿ ಸಾರ್ವಜನಿಕರ ಸಹಭಾಗಿತ್ವದಲ್ಲಿ ಸಂಘಸಂಸ್ಥೆಗಳು, ಅಕಾಡೆಮಿಗಳು ಈ ಪ್ರಯತ್ನಗಳನ್ನು ಮುನ್ನಡೆಸುತ್ತಿರುವುದು ಸ್ತುತ್ಯರ್ಹ ಎಂದರು. ಅನಿವಾಸಿ ಕನ್ನಡಿಗರ ಎಲ್ಲಾ ನೋವು ನಲಿವುಗಳಲ್ಲಿ ಕರ್ನಾಟಕ ಸರಕಾರದ ತಮ್ಮ ವಿಭಾಗ ಇದೀಗ ವ್ಯಾಪಕ ಕಾರ್ಯಚಟುವಟಿಕೆಗಳನ್ನು ಹಮ್ಮಿಕೊಂಡು ಕಾರ್ಯಾಚರಿಸುತ್ತಿರುವುದು ಅನಿವಾಸಿ ಕನ್ನಡಿಗರ ಭರವಸೆಯ ಬದುಕಿಗೆ ಕಾರಣವಾಗಿದೆ. ಜೊತೆಗೆ ಯಾವುದೇ ಪರಕೀಯ ನೆಲದಲ್ಲಿ ನೆಲೆನಿಂತಿದ್ದರೂ ಕರ್ನಾಟಕ ಸರಕಾರ ಅವರ ಕನ್ನಡ ಭಾಷೆ, ಸಂಸ್ಕøತಿಯ ಭದ್ರತೆ, ಪುನರುತ್ಥಾನಗಳಿಗೆ ವಿವಿಧ ಕಾರ್ಯಯೋಜನೆಯನ್ನು ಜಾರಿಗೊಳಿಸಿದೆ ಎಂದು ತಿಳಿಸಿದರು.
ಗಡಿನಾಡ ಸಾಹಿತ್ಯ-ಸಾಂಸ್ಕøತಿಕ ಅಕಾಡೆಮಿ ಅಧ್ಯಕ್ಷ ಕೇಳು ಮಾಸ್ತರ್ ಅಗಲ್ಪಾಡಿ ಯವರು ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಹಿರಿಯ ಪತ್ರಕರ್ತ, ಸಾಹಿತಿ ಮಲಾರು ಜಯರಾಮ ರೈ ಮಾತನಾಡಿ, ಸಾಹಿತ್ಯ ಸಂಸ್ಕøತಿಗಳ ಹೆಸರಲ್ಲಿ ಸಂಘಟನೆಗಳನ್ನು ರಚಿಸಿಕೊಳ್ಳುವುದು ಸುಲಭ. ಆದರೆ ಉದ್ದೇಶಿತ ಲಕ್ಷ್ಯ ಪ್ರಾಪ್ತಿಯ ನೆಲೆಯಲ್ಲಿ ಯಶಸ್ವಿಯಾಗಬೇಕಾದ ಹಠ, ಒಮ್ಮನಸ್ಸಿನ ಕಾರ್ಯಕ್ಷಮತೆ ಅಗತ್ಯವಿದೆ ಎಂದು ತಿಳಿಸಿದರು. ಇಂದಿನ ವಿದ್ಯಾರ್ಥಿಗಳಿಗೆ, ಯುವಜನತೆಗೆ ಮೌಲ್ಯಗಳ ಕೊರತೆ ಎದುರಾಗಿದ್ದು, ಅವನ್ನು ನೀಗಿಸುವ ಶಕ್ತಿ ಸಾಹಿತ್ಯ, ಸಾಂಸ್ಕøತಿಕ ಕಲೆಗಳಿಗಿವೆ. ತೌಳವ ಸಂಸ್ಕøತಿ ಕನ್ನಡದೊಂದಿಗೆ ಒಂದಾಗಿ ಬೆಳೆದು ಬರುವಲ್ಲಿ ಈ ಮಣ್ಣಿನ ವಿಶಿಷ್ಟ ಸಾಂಸ್ಕøತಿಕ ಮೌಲ್ಯಗಳು ಪ್ರಧಾನ ಪಾತ್ರವಹಿಸಿವೆ ಎಂದು ತಿಳಿಸಿದ ಅವರು, ಹೊಸ ತಲೆಮಾರಿಗೆ ಇವನ್ನು ದಾಟಿಸುವ ಯತ್ನಗಳಿಗೆ ಅಕಾಡೆಮಿ ಹಮ್ಮಿಕೊಂಡ ದೀರ್ಘ ಕಾಲದ ಚಟುವಟಿಕೆ ಯಶಸ್ವಿಯಾಗಲಿ ಎಂದು ಹಾರೈಸಿದರು.
ಬದಿಯಡ್ಕ ಗ್ರಾಮ ಪಂಚಾಯತು ಅಧ್ಯಕ್ಷ ಕೆ.ಎನ್ ಕೃಷ್ಣ ಭಟ್ ಉಪಸ್ಥಿತರಿದ್ದು ಮಾತನಾಡಿದರು. ನಿವೃತ್ತ ಉಪ ಜಿಲ್ಲಾಧಿಕಾರಿ ಬಿ.ಬಾಲಕೃಷ್ಣ ಅಗ್ಗಿತ್ತಾಯ, ಮೀಡಿಯಾ ಕ್ಲಾಸಿಕಲ್ಸ್‍ನ ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ ಅಚ್ಚಾಯಿ, ಮಾನ್ಯ ಜ್ಞಾನೋದಯ ಶಾಲಾ ಮುಖ್ಯೋಪಾಧ್ಯಾಯ ಗೋವಿಂದ ನಂಬೂದಿರಿ, ಪ್ರೊ.ಎ.ಶ್ರೀನಾಥ್ ಮೊದಲಾದವರು ಉಪಸ್ಥಿತರಿದ್ದು ಶುಭಹಾರೈಸಿದರು. ಪತ್ರಕರ್ತ, ಸಾಹಿತಿ ವಿರಾಜ್ ಅಡೂರು ಪ್ರಾಸ್ತಾವಿಕವಾಗಿ ಮಾತನಾಡಿ ಸಾಹಿತ್ಯ-ಸಾಂಸ್ಕøತಿಕ ಪಯಣದ ಉದ್ದೇಶ, ಲಕ್ಷ್ಯಗಳ ಬಗ್ಗೆ ಬೆಳಕುಚೆಲ್ಲಿದರು.
ಈ ಸಂದರ್ಭ ಖ್ಯಾತ ಭರತನಾಟ್ಯ ಗುರು, ನಾಟ್ಯನಿಲಯಂ ಮಂಜೇಶ್ವರದ ನಿರ್ದೇಶಕ ಬಾಲಕೃಷ್ಣ ಮಾಸ್ತರ್ ಮಂಜೇಶ್ವರ, ಸಮಾಜ ಸೇವಕ ಸುಂದರ ಶೆಟ್ಟಿ ಕೊಲ್ಲಂಗಾನ, ಪ್ರಗತಿಪರ ಕೃಷಿಕ ಎಂ.ಐತ್ತ ಮಾನ್ಯ ರವರನ್ನು ಅವರವರ ಕ್ಷೇತ್ರಗಳ ವಿಶೇಷ ಸಾಧನೆಗಳಿಗಾಗಿ ಅಭಿನಂದಿಸಿ ಗೌರವಿಸಲಾಯಿತು.ಜೊತೆಗೆ ವಿಶೇಷ ಸಾಧನೆಗೈದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಅಕಾಡೆಮಿಯ ಉಪಾಧ್ಯಕ್ಷ ಶ್ಯಾಂ ಪ್ರಸಾದ್ ಮಾನ್ಯ ಸ್ವಾಗತಿಸಿ, ಕಾರ್ಯದರ್ಶಿ ಅಖಿಲೇಶ್ ನಗುಮುಗಂ ವಂದಿಸಿದರು. ವಿದ್ಯಾ ಗಣೇಶ್ ಕಾಸರಗೋಡು ಕಾರ್ಯಕ್ರಮ ನಿರೂಪಿಸಿದರು.
ಬಳಿಕ ಮಧೂರಿನ ಶ್ರೀಬೊಡ್ಡಜ್ಜ ಯಕ್ಷಭಾರತಿ ತಂಡದವರಿಂದ ಶ್ರೀದೇವೀ ಮಹಿಷಮರ್ಧಿನಿ ಯಕ್ಷಗಾನ ತಾಳಮದ್ದಳೆ ಕೂಟ ಪ್ರದರ್ಶನಗೊಂಡಿತು.