ಮಂಗಳೂರು: ನಕಲಿ ಚಿನ್ನವನ್ನು ಅಡವಿಟ್ಟು ಬ್ಯಾಂಕಿಗೆ ಕೋಟ್ಯಾಂತರ ರೂಪಾಯಿ ಪಂಗನಾಮ ಹಾಕಿದ ಪ್ರಕರಣ ಮಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಈ ಸಂಬಂಧ ಮಂಗಳೂರಿನ ಬಂದರು ಪೊಲೀಸರು ನಗರದ ಬೊಂದೆಲ್ ನ ನಿವಾಸಿಗಳಾದ ವಿದ್ಯಾನಂದ ರಾವ್ ಮತ್ತು ಲಲಿತಾ ರಾವ್ ಅವರನ್ನು ಬಂಧಿಸಿದ್ದಾರೆ. ಪೊಲೀಸ್ ಮೂಲಗಳ ಮಾಹಿತಿಯಂತೆ ಇವರು ಮಂಗಳೂರಿನಲ್ಲಿ ಆಭರಣ ತಯಾರಿ ಅಂಗಡಿ ಹೊಂದಿದ್ದಾರೆ.
ಮಿಲಾಗ್ರಿಸ್ ಬಳಿಯ ಕಥೋಲಿಕ್ ಸಿರಿಯನ್ ಬ್ಯಾಂಕಿನಲ್ಲಿ ಇವರು ಚಿನ್ನ ಅಡವಿಟ್ಟು ಸಾಲ ಪಡೆದಿದ್ದರು.ದಂಪತಿ ಸುಮಾರು 4.5 ಕೋಟಿ ರೂಪಾಯಿಗಳ ಸಾಲ ಪಡೆದಿದ್ದು ಈ ಬಗ್ಗೆ ಬ್ಯಾಂಕಿನ ಆಡಳಿತ ಮಂಡಳಿಗೆ ಸಂಶಯ ಬಂದಿತ್ತು. ಈ ಕಾರಣಕ್ಕೆ ಅಡವಿಟ್ಟ ಚಿನ್ನವನ್ನು ಪರೀಕ್ಷೆಗೆ ಒಳಪಡಿಸಿದಾಗ ಕಂಚಿನ ಲೋಹಕ್ಕೆ ಚಿನ್ನದ ಲೇಪ ನೀಡಿದ್ದು ಪತ್ತೆಯಾಗಿದೆ. ಹೀಗೆ ಅಡವಿಟ್ಟ ಚಿನ್ನ ನಕಲಿ ಎಂದು ಗೊತ್ತಾಗಿದೆ. ಕೂಡಲೇ ಬಂದರು ಪೋಲಿಸ್ ಠಾಣೆಗೆ ಬ್ಯಾಂಕಿನ ಆಡಳಿತ ಮಂಡಳಿ ದೂರು ನೀಡಿದ್ದು ಇದೀಗ ವಂಚನೆ ಮಾಡಿದ ದಂಪತಿಗಳನ್ನು ಪೋಲಿಸರು ಬಂಧಿಸಿ ಮೊಕದ್ದಮೆ ದಾಖಲು ಮಾಡಿದ್ದಾರೆ.