ಮಂಗಳೂರು: ಮಂಗಳೂರು ಕೇಂದ್ರ ರೈಲ್ವೇ ನಿಲ್ದಾಣದಲ್ಲಿ ಮೇಲ್ಛಾವಣಿ ಕುಸಿದು ಹಲವರು ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ವೆನ್ಲಾಕ್ ಆಸ್ಪತ್ರೆಗೆ ಸೇರಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ಇವರಲ್ಲಿ ಒಬ್ಬರ ತಲೆಗೆ ಗಂಭೀರ ಗಾಯಗಳಾಗಿವೆ. ರೈಲಿನ ಟಿಕೆಟ್ ಕೌಂಟರ್ ಪಕ್ಕದಲ್ಲೇ ಈ ದುರ್ಘಟನೆ ನಡೆದಿದ್ದು, ಟಿಕೆಟ್ ಗಾಗಿ ಸಾಲಲ್ಲಿ ನಿಂತವರ ಮೇಲೆ ಮೇಲ್ಘಾವಣಿ ಕುಸಿದಿದೆ. ಹಳೇ ಮೇಲ್ಛಾವಣಿ ಇದಾಗಿದ್ದು, ಛಾವಣಿಯ ಬಿರುಕು ಬಿಟ್ಟ ಕೆಳ ಭಾಗದ ಗಾರೆ ಟಿಕೆಟ್ ಕೌಂಟರಿನಲ್ಲಿ ಸರತಿಯಲ್ಲಿ ನಿಂತವರ ಮೇಲೆ ಬಿದ್ದಿದೆ.
ಈ ಸಂದರ್ಭದಲ್ಲಿ ಹಲವರಿಗೆ ಅಲ್ಪ ಪ್ರಮಾಣದ ಗಾಯಗಳಾಗಿದ್ದರೆ ಓರ್ವನ ತಲೆಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.ಈತನನನ್ನು ಕೇರಳದ ಬಿಜು ಎಂದು ಗುರುತಿಸಲಾಗಿದ್ದು, ತನ್ನ ತಾಯಿಯ ಚಿಕಿತ್ಸೆಗಾಗಿ ನಗರದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು. ನಂತರ ವಾಪಸ್ ತೆರಳಲು ರೈಲು ನಿಲ್ದಾಣಕ್ಕೆ ಬಂದು ಟಿಕೆಟ್ ಖರೀದಿಸಲು ಸರತಿಯಲ್ಲಿ ನಿಂತಾಗ ಈ ದುರ್ಘಟನೆ ಸಂಭವಿಸಿದೆ. ಘಟನೆ ನಡೆದ ಸಂದರ್ಭದಲ್ಲಿ ಸ್ಥಳದಲ್ಲಿದ್ದ ರೈಲ್ವೇ ಪೋಲೀಸರು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.