ಮಂಗಳೂರು: ಫೇಸ್ಬುಕ್ನಲ್ಲಿ ಜಬ್ಟಾರ್ ಬಿ.ಸಿ.ರೋಡ್ ಎಂಬ ವ್ಯಕ್ತಿಯ ಹೆಸರಿನಲ್ಲಿ ನಕಲಿ ಖಾತೆಯನ್ನು ತೆರೆದು ಹಿಂದೂ ಧರ್ಮದ ದೇವತೆ ಸೀತಾಮಾತೆಗೆ ಅವಹೇಳನಕಾರಿ ಪದ ಪೋಸ್ಟ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಮಂಗಳೂರಿನ ಬಂದರು ಪೊಲೀಸರು ಉಳ್ಳಾಲ ಮದನಿ ಕ್ವಾಟರ್ಸ್ನ ದರ್ವೇಝ್ ಮೊದಿನ್ (27) ನನ್ನು ಬಂಧಿಸಿದ್ದಾರೆ.
ವಿದೇಶದಲ್ಲಿ ಅಡಗಿಕೊಂಡಿದ್ದ ಆರೋಪಿ ದರ್ವೇಝ್ ಮೊದಿನ್ ಗುರುವಾರ ಮುಂಬಯಿನ ಛತ್ರಪತಿ ಶಿವಾಜಿ ವಿಮಾನ ನಿಲ್ದಾಣದಲ್ಲಿ ಬಂದಿಳಿದಾಗ ವಿಮಾನ ನಿಲ್ದಾಣದ ಇಮಿಗ್ರೇಶನ್ ಅಧಿಕಾರಿಗಳು ಮಂಗಳೂರಿನ ಪೊಲೀಸರಿಗೆ ಮಾಹಿತಿ ನೀಡಿದ್ದು, ಮಂಗಳೂರು ಪೊಲೀಸರು ಮುಂಬಯಿಗೆ ತೆರಳಿ ಶುಕ್ರವಾರ ಮಂಗಳೂರಿಗೆ ಕರೆ ತಂದಿದ್ದಾರೆ.
ಆತನನ್ನು ಜೆ.ಎಂ.ಎಫ್.ಸಿ. 2 ನೇ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಪ್ರಕರಣದ ಹಿನ್ನೆಲೆ:
ಕಟೀಲು ಕ್ಷೇತ್ರದ ದೇವತೆ ಸಹಿತ ಹಿಂದೂ ದೇವತೆಗಳನ್ನು ಫೇಸ್ಬುಕ್ನಲ್ಲಿ ಅವಹೇಳನ ಮಾಡಿದ ಪ್ರಕರಣ 2016 ಸೆಪ್ಟಂಬರ್ ತಿಂಗಳಲ್ಲಿ ನಡೆದಿದ್ದು, ಈ ಬಗ್ಗೆ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿದ್ದರು. ಮಂಗಳೂರಿನ ಬಂದರು ಪೊಲೀಸ್ ಠಾಣೆಯಲ್ಲಿಯೂ ಈ ಬಗ್ಗೆ ಪ್ರತ್ಯೇಕ ಪ್ರಕರಣ ದಾಖಲಿಸಲಾಗಿತ್ತು. ತನಿಖೆ ನಡೆಸಿದ ಪೊಲೀಸರು ಫೇಸ್ಬುಕ್ನಲ್ಲಿ ಇದನ್ನು ಪೋಸ್ಟ್ ಮಾಡಿದ ವ್ಯಕ್ತಿಗಳು ಕಲಂದರ್ ಶಾಫಿ ಬಿ. ಎಂ. ಮತ್ತು ದರ್ವೇಝ್ ಮೊದಿನ್ ಎಂಬುದಾಗಿ ಗುರುತಿಸಿದ್ದು, ಈ ಹಿನ್ನೆಲೆಯಲ್ಲಿ ಅವರಿಬ್ಬರ ಮೇಲೆ ಕೇಸು ದಾಖಲಿಸಿದ್ದರು. ಆರೋಪಿಗಳು ವಿದೇಶ ದಲ್ಲಿದ್ದು, ಈ ಕೃತ್ಯವನ್ನು ಎಸಗಿದ್ದರಿಂದ ಅವರ ಪತ್ತೆಗಾಗಿ ಮಂಗಳೂರು ಪೊಲೀಸರು ಲುಕ್ಔಟ್ ನೋಟೀಸು ಜಾರಿಗೊಳಿಸಿದ್ದರು.
ಆರೋಪಿ ಕಲಂದರ್ ಶಾಫಿ ಬಿ.ಎಂ.ನನ್ನು 2016ರ ಅಕ್ಟೋಬರ್ 9ರಂದು ವಿದೇಶದಿಂದ ವಿಮಾನದಲ್ಲಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂದಿಳಿದ ಸಂದರ್ಭದಲ್ಲಿ ಬಂದರು ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಶಾಂತಾರಾಮ್ ಮತ್ತು ಸಿಬಂದಿ ವಶಕ್ಕೆ ಪಡೆದು ಬಂಧಿಸಿದ್ದರು. ಆತನನ್ನು ಬಳಿಕ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿದ್ದಾನೆ.