ಮಂಗಳೂರು: ಸ್ವಚ್ಛ ಭಾರತ ನಿರ್ಮಲ ಭಾರತ್ ಯೋಜನೆಯಡಿ ಹಲವಾರು ಜಾಗೃತಿ ಕಾರ್ಯಕ್ರಮಗಳು ದೇಶಾದ್ಯಂತ ನಡೆಯುತ್ತಲೇ ಇವೆ. ಆದರೆ ಸರ್ಕಾರಿ ಸಾರಿಗೆ ಬಸ್ ಗಳನ್ನು ಸ್ವಚ್ಛವಾಗಿಡುವ ನಿಟ್ಟಿನಲ್ಲಿ ಜನರಲ್ಲಿ ಜಾಗೃತಿ ಇನ್ನೂ ಮೂಡಿಲ್ಲ .ಬಸ್ಸಿನಲ್ಲಿ ಪ್ರಯಾಣಿಕರು ಎಸೆಯುವ ಖಾದ್ಯ ಪದಾರ್ಥಗಳು, ತಿಂಡಿಗಳ ಪ್ಯಾಕೆಟ್ ಗಳು, ಪ್ಲಾಸ್ಟಿಕ್ ಕೈ ಚೀಲಗಳು ಹಾಗೂ ಖಾಲಿ ಬಾಟಲ್ ಗಳು ಬಸ್ಸಿನೊಳಗೆ ಹರಡಿಕೊಂಡು ಪ್ರಯಾಣವೇ ಅಸಹ್ಯ ಎನಿಸುವಷ್ಟು ಪರಿಸ್ಥಿತಿ ಹದಗೆಟ್ಟಿರುತ್ತದೆ.
ಇದಕ್ಕೆ ಪರಿಹಾರ ನೀಡಲು ಚಿಂತಿಸಲಾಗಿದ್ದು, ಇದೀಗ ಈ ಚಿಂತನೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಸಾಕಾರಗೊಳಿಸಲಾಗಿದೆ. ಡಾ .ಡಿ .ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಇದೀಗ ಬಸ್ ಗಳಲ್ಲಿ ಎಲ್ಲೆಂದರಲ್ಲಿ ತ್ಯಾಜ್ಯ ಎಸೆಯುದನ್ನು ತಡೆಯಲು ಉಜಿರೆಯ ಎಸ್.ಡಿ.ಎಂ ಪಾಲಿಟೆಕ್ನಿಕ್ ಕಾಲೇಜು ಉಪನ್ಯಾಸಕರ ತಂಡ ಪರಿಹಾರ ಹುಡುಕಿದೆ.
ಕರ್ನಾಟಕ ರಸ್ತೆ ಸಾರಿಗೆಯ ವೇಗದೂತ ಬಸ್ ಗೆ ಕಸದ ಬುಟ್ಟಿಯನ್ನು ಪ್ರಾಯೋಗಿಕವಾಗಿ ಅಳವಡಿಸುವ ಯೋಜನೆಗೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆ ಚಾಲನೆ ನೀಡಿದ್ದಾರೆ. ಈ ಪ್ರಯೋಗ ಸಫಲವಾದರೆ ಮುಂಬರುವ ದಿನಗಳಲ್ಲಿ ಧರ್ಮಸ್ಥಳಕ್ಕೆ ಬರುವ ಎಲ್ಲ ಸಾರಿಗೆ ಬಸ್ ಗಳಿಗೂ ಈ ಕಸದ ಬುಟ್ಟಿಯನ್ನು ಅಳವಡಿಸುವ ಯೋಜನೆ ಕೂಡ ರೂಪಿಸಲಾಗಿದೆ .