ವೃತ್ತಿಯನ್ನು ಪ್ರೀತಿಸಿ, ಗೌರವಿಸಿ, ಬದ್ಧತೆಯಿಂದ ಕೆಲಸ ಮಾಡಿದಾಗ ಯಶಸ್ಸು ಪಡೆಯಲು ಸಾಧ್ಯವಾಗುತ್ತದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು.
ಅವರು ಶುಕ್ರವಾರ ಧರ್ಮಸ್ಥಳದಲ್ಲಿ ಶ್ರೀ ಸನ್ನಿಧಿ ಅತಿಥಿ ಗೃಹದಲ್ಲಿ ಮೂರು ದಿನಗಳಲ್ಲಿ ನಡೆದ ರುಡ್‍ಸೆಟ್ ಸಂಸ್ಥೆಗಳ ನಿರ್ದೇಶಕರುಗಳ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಜೀವನದಲ್ಲಿ ತಪ್ಪು ಮಾಡುವುದು ಸ್ವಾಭಾವಿಕ. ಆದರೆ ಒಮ್ಮೆ ಮಾಡಿದ ತಪ್ಪನ್ನು ತಾಳ್ಮೆಯಿಂದ ತಿದ್ದಿಕೊಂಡು ಸುಧಾರಣೆ ಮಾಡಿಕೊಂಡಾಗ ಉನ್ನತ ಸಾಧನೆ ಮಾಡಲು ಸಾಧ್ಯವಾಗುತ್ತದೆ. ದುಶ್ಚಟಗಳಿಗೆ ಬಲಿಯಾಗದೆ ವೃತ್ತಿಯಲ್ಲಿ ನೈತಿಕ ಮತ್ತು ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು. ಸಭ್ಯ, ಸುಸಂಸ್ಕøತ ನಾಗರಿಕರಾಗಿ ಸಮಾಜ ಸೇವೆ ಮಾಡಬೇಕು. ಋಣಾತ್ಮಕ ಚಿಂತನೆ ತ್ಯಜಿಸಿ ಧನಾತ್ಮಕ ಚಿಂತನೆಯೊಂದಿಗೆ ಕೆಲಸ ಮಾಡಿದಾಗ ಜನರ ಪ್ರೀತಿ-ವಿಶ್ವಾಸಕ್ಕೆ ಪಾತ್ರರಾಗಬಹುದು.
ಶ್ರೀ ಮಂಜುನಾಥ ಸ್ವಾಮಿಯ ಅನುಗ್ರಹದೊಂದಿಗೆ ಜನರ ಸಹಕಾರ ಮತ್ತು ಎಲ್ಲಾ ಸಿಬ್ಬಂದಿಯ ಪ್ರಾಮಾಣಿಕ ಸೇವೆ ಮತ್ತು ಬದ್ಧತೆಯಿಂದ ಧರ್ಮಸ್ಥಳದ ಎಲ್ಲಾ ಸೇವಾ ಕಾರ್ಯಗಳು ಯಶಶ್ವಿಯಾಗುತ್ತವೆ ಎಂದು ಹೇಳಿದರು.
ಕೆನರಾ ಬ್ಯಾಂಕಿನ ಡಿ.ಜಿ.ಎಂ. ಪಳನಿವೇಲು ಮಾತನಾಡಿ, ಸರ್ಕಾರದ ಹೊಸ ಮಾರ್ಗದರ್ಶಿ ಸೂತ್ರಗಳಂತೆ ಕಾಲಕಾಲಕ್ಕೆ ತರಬೇತಿಯ ವಿಧಾನಗಳಲ್ಲಿ ಮಾರ್ಪಾಡು ಮಾಡಿಕೊಳ್ಳಬೇಕು. ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಬೇಕು. ಉತ್ತಮ ಗುಣಮಟ್ಟದ ತರಬೇತಿಯೊಂದಿಗೆ ಕೌಶಲಾಭಿವೃದ್ಧಿಗೆ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.
ಮಧುರೈ ರುಡ್‍ಸೆಟ್ ಸಂಸ್ಥೆಯ ನಿರ್ದೇಶಕ ಅನಂತನ್, ಕಣ್ಣೂರು ರುಡ್‍ಸೆಟ್ ಸಂಸ್ಥೆಯ ನಿರ್ದೇಶಕ ರಾಜ್‍ಕುಮಾರ್, ಟಿ.ಎಂ. ಮತ್ತು ರಾಂಚಿ ರುಡ್‍ಸೆಟ್ ಸಂಸ್ಥೆಯ ನಿರ್ದೇಶಕ ಉದಯ ಕುಮಾರ್ ವಾರ್ಷಿಕ ಸಮ್ಮೇಳನದ ಬಗ್ಗೆ ತಮ್ಮ ಅಭಿಪ್ರಾಯ ಸಾದರ ಪಡಿಸಿದರು.
ಉಜಿರೆಯಲ್ಲಿರುವ ರುಡ್‍ಸೆಟ್ ಸಂಸ್ಥೆಗಳ ಕೇಂದ್ರೀಯ ಕಾರ್ಯಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಎಂ. ಜನಾರ್ದನ್ ಸ್ವಾಗತಿಸಿದರು. ಭುವನೇಶ್ವರ ರುಡ್‍ಸೆಟ್ ಸಂಸ್ಥೆಯ ನಿರ್ದೇಶಕ ಬಿ.ಕೆ. ರಾವುತ್ ಧನ್ಯವಾದವಿತ್ತರು. ಭೋಪಾಲ್‍ನ ವಿಜಯ ಕುಮಾರ್ ಅದ್ವಾನಿ ಕಾರ್ಯಕ್ರಮ ನಿರ್ವಹಿಸಿದರು.