Saturday 10th, May 2025
canara news

ಧರ್ಮಸ್ಥಳದಲ್ಲಿ ಭಜನಾ ತರಬೇತಿ ಕಮ್ಮಟ: ಭಜನೆಯಿಂದ ಆಧ್ಯಾತ್ಮಿಕ ಚೈತನ್ಯ ಜಾಗೃತಿ, ಪರಿಶುದ್ಧ ಜೀವನ

Published On : 12 Sep 2017   |  Reported By : Rons Bantwal


ಭಜನೆಗೆ ಭಕ್ತಿ ಮಾರ್ಗವೇ ಶ್ರೇಷ್ಠವಾಗಿದ್ದು ಪರಿಶುದ್ಧ ಭಾವನೆಯಿಂದ ಭಜನೆ ಮಾಡಿದರೆ ಆಧ್ಯಾತ್ಮಿಕ ಚೈತನ್ಯ ಜಾಗೃತಿಯಾಗಿ ಪರಿಶುದ್ಧ ಜೀವನ ಸಾಧ್ಯವಾಗುತ್ತದೆ. ನಾಸ್ತಿಕರನ್ನು ಆಸ್ತಿಕರಾಗಿ ಪರಿವರ್ತಿಸುವ ಶಕ್ತಿ ಭಜನೆಗಿದೆ ಎಂದು ವಿರಾಜಪೇಟೆಯ ಅರಮೇರಿ ಕಳಂಚೇರಿ ಮಠದ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು.

 

ಅವರು ಸೋಮವಾರ ಧರ್ಮಸ್ಥಳದಲ್ಲಿ 19ನೇ ವರ್ಷದ ಭಜನಾ ತರಬೇತಿ ಕಮ್ಮಟವನ್ನು ಉದ್ಘಾಟಿಸಿ ಮಾತನಾಡಿದರು.

ಭಜನೆಯಿಂದ ದ್ವೇಷ, ಕ್ಲೇಶಗಳು ದೂರವಾಗಿ, ಅಂತರಂಗ ಪರಿಶುದ್ಧವಾಗಿ ಭಗವಂತನ ಸಾಕ್ಷಾತ್ಕಾರವಾಗುತ್ತದೆ. ಅತ್ಮ ತೃಪ್ತಿಯೊಂದಿಗೆ ಜೀವನದಲ್ಲಿ ಯಶಸ್ಸು ಸಿಗುತ್ತದೆ. ಭಜನೆಯ ಮೂಲಕ ಸಭ್ಯ, ಸುಸಂಸ್ಕøತ ನಾಗರಿಕ ಸಮಾಜ ರೂಪುಗೊಳ್ಳುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

ಮಾಣಿಲದ ಮೋಹನದಾಸ ಸ್ವಾಮೀಜಿ ಮಾತನಾಡಿ, ಭಜನೆಯಿಂದ ಮಾನವೀಯ ಮೌಲ್ಯಗಳು ಉದ್ದೀಪನಗೊಂಡು, ಪ್ರೀತಿ-ವಿಶ್ವಾಸದ ಸಾಮರಸ್ಯದ ಬದುಕಿನೊಂದಿಗೆ ದುಶ್ಚಟ ಮುಕ್ತ ಸದೃಢ ಸಮಾಜ ನಿರ್ಮಾಣವಾಗುತ್ತದೆ ಎಂದು ಹೇಳಿದರು.

ಹೇಮಾವತಿ ವಿ. ಹೆಗ್ಗಡೆಯವರು ಮಾತನಾಡಿ ನಮ್ಮ ದೈನಂದಿನ ಕರ್ತವ್ಯವನ್ನು ಪ್ರಾಮಾಣಿಕವಾಗಿ ಮಾಡುವುದೇ ದೇವರ ಪೂಜೆ ಆಗಿದೆ. ಸಿಕ್ಕಿದ ಅವಕಾಶದ ಸದುಪಯೋಗ ಮಾಡಿ ಸಾಧ್ಯವಾದಷ್ಟು ಪರೋಪಕಾರ ಮಾಡಬೇಕು. ಭಜನೆಯ ಸತ್ಸಂಗದಿಂದ ನಮ್ಮ ಅಂತರಂಗ ಪರಿಶುದ್ಧವಾಗುತ್ತದೆ. ಶ್ರದ್ಧೆ ಮತ್ತು ಭಕ್ತಿಯಿಂದ ರಾಗ, ತಾಳ, ಲಯ ಬದ್ಧವಾಗಿ ಭಜನೆ ಮಾಡಬೇಕು. ಭಜನೆಯ ಮೂಲಕ ಧರ್ಮದ ಮರ್ಮವನ್ನು ಸರಳವಾಗಿ ಗ್ರಹಿಸಬಹುದು ಎಂದು ಅವರು ಹೇಳಿದರು.

ಅಧ್ಯಕ್ಷತೆ ವಹಿಸಿದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ, ದೇವರ ಅನುಗ್ರಹ ಪ್ರಾಪ್ತಿಗೆ ಭಜನೆ ಸರಳ ಮಾಧ್ಯಮವಾಗಿದೆ. ಭಜನೆಯ ಮೂಲಕ ಸತ್ಯ, ಸದಾಚಾರಗಳೊಂದಿಗೆ ಸಂಸ್ಕಾರಯುತ ಜೀವನ ನಡೆಸಬೇಕು. ಭಜನಾ ಮಂಡಳಿಗಳ ಮೂಲಕ ಊರಿನಲ್ಲಿ ಸಾಮರಸ್ಯ, ಸಂಘಟನೆ ಮತ್ತು ನಾಯಕತ್ವ ಬೆಳೆಯಬೇಕು ಎಂದು ಹೇಳಿದರು. ಜಾತಿ ಮತ ಬೇಧವಿಲ್ಲದೆ ಎಲ್ಲರೂ ಪ್ರೀತಿ-ವಿಶ್ವಾಸದಿಂದ ಭಜನಾ ಮಂದಿರದಲ್ಲಿ ಸೇರಿ ಭಜನೆ ಮಾಡಿ ತನ್ಮೂಲಕ ಊರಿನ ಸ್ವಾಸ್ಥ್ಯ ಕಾಪಾಡಬೇಕು ಎಂದು ಹೆಗ್ಗಡೆಯವರು ಸಲಹೆ ನೀಡಿದರು.

ಡಿ. ಹರ್ಷೇಂದ್ರ ಕುಮಾರ್ ಉಪಸ್ಥಿತರಿದ್ದರು.

ಭಜನಾ ಕಮ್ಮಟದ ಸಂಚಾಲಕ ಸುಬ್ರಹ್ಮಣ್ಯ ಪ್ರಸಾದ್ ಸ್ವಾಗತಿಸಿದರು. ಕಾರ್ಯದರ್ಶಿ ಮಮತಾ ರಾವ್ ಧನ್ಯವಾದವಿತ್ತರು. ಶ್ರೀನಿವಾಸರಾವ್ ಕಾರ್ಯಕ್ರಮ ನಿರ್ವಹಿಸಿದರು.

ಮುಖ್ಯಾಂಶಗಳು:

• ಒಂದು ವಾರ ನಡೆಯುವ ಭಜನಾ ತರಬೇತಿ ಕಮ್ಮಟದಲ್ಲಿ 148 ಪುರುಷರು ಹಾಗೂ 60 ಮಹಿಳೆಯರು ಸೇರಿದಂತೆ ಒಟ್ಟು 208 ಶಿಬಿರಾರ್ಥಿಗಳು ಭಾಗವಹಿಸುತ್ತಿದ್ದಾರೆ.
• ಕಳೆದ 18 ವರ್ಷಗಳಿಂದ ಪ್ರತಿ ವರ್ಷ ಭಜನಾ ತರಬೇತಿ ಕಮ್ಮಟ ಆಯೋಜಿಸಲಾಗುತ್ತದೆ.
• ಈ ವರೆಗೆ 1641 ಭಜನಾ ಮಂಡಳಿಗಳ 3117 ಮಂದಿಗೆ ಭಜನಾ ತರಬೇತಿ ನೀಡಲಾಗಿದೆ.
• ಭಜನೆ: ಭ ಅಂದರೆ ಭಜಿಸು. ಜ ಅಂದರೆ ಜಪಿಸು. ನೆ ಅಂದರೆ ನೆನೆಸು.
• ರಾಗ, ತಾಳ, ಲಯ ಬದ್ಧವಾಗಿ, ಉಚ್ಛಾರ ದೋಷವಿಲ್ಲದೆ ಭಜನೆ ಮಾಡಬೇಕು.
• ಭಜನೆಯಿಂದ ದೇವರ ಸಾಕ್ಷಾತ್ಕಾರವಾಗುತ್ತದೆ.
• ಭಜನೆಯಿಂದ ಸುಖ-ಶಾಂತಿ, ನೆಮ್ಮದಿಯ ಜೀವನ ಸಾಧ್ಯವಾಗುತ್ತದೆ.

 

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here