Saturday 10th, May 2025
canara news

ನೇರ ಲಾಭ ವರ್ಗಾವಣೆ ಯೋಜನೆಯಿಂದ 57ಸಾವಿರ ಕೋಟಿ ರೂಪಾಯಿ ಜನರಿಗೆ ತಲುಪಿದೆ-ಉಜಿರೆಯಲ್ಲಿ ಪ್ರಧಾನಿ ಮೋದಿ

Published On : 29 Oct 2017   |  Reported By : Ronida Mumbai


(ಚಿತ್ರ / ವರದಿ : ರೊನಿಡಾ ಮುಂಬಯಿ)

ಮುಂಬಯಿ (ಉಜಿರೆ) ಅ.29: ಪ್ರಧಾನಿ ನರೇಂದ್ರ ಮೋದಿ ಉಜಿರೆಯ ರತ್ನವರ್ಮ ಕ್ರೀಡಾಂಗಣದಲ್ಲಿ ನಡೆದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬೃಹತ್ ಕಾರ್ಯಕ್ರಮದಲ್ಲಿ ಇಂದು ಮಧ್ಯಾಹ್ನ ಪಾಲ್ಗೊಂಡು 12 ಲಕ್ಷ ಸ್ವಸಹಾಯ ಸಂಘದ ಸದಸ್ಯರಿಗೆ ರೂಪೇ ಕಾರ್ಡ್ ವಿತರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಇಬ್ಬರು ಮಹಿಳೆಯರಿಗೆ ಸಾಂಕೇತಿಕವಾಗಿ ರುಪೇ ಕಾರ್ಡ್ ವಿತರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಭಾರತ ಸರಕಾರದ ಪ್ರತಿಯೊಂದು ರೂಪಾಯಿ, ಪ್ರತಿಯೊಂದು ಸಂಪನ್ಮೂಲವೂ ಭಾರತೀಯರ ಶ್ರೇಯೋಭಿವೃದ್ಧಿಗಾಗಿ ಮೀಸಲಾಗಿರುತ್ತದೆ. ನೇರ ಲಾಭ ವರ್ಗಾವಣೆ ಯೋಜನೆಯಿಂದ 57 ಸಾವಿರ ಕೋಟಿ ರೂ.ಗಳು ಜನರಿಗೆ ತಲುಪಿದೆ. ಇದರಿಂದಾಗಿ ಮಧ್ಯವರ್ತಿಗಳಿಗೆ ಯಾವುದೇ ಹಣ ಸಿಗುತ್ತಿಲ್ಲ ಹಾಗಾಗಿ ಅವರು ನನ್ನನ್ನು ಇಷ್ಟಪಡುವುದಿಲ್ಲ ಎಂದು ಹೇಳಿದರು.

ಡಿಜಿಟಲ್ ಕರೆನ್ಸಿಯ ಯುಗ ಆರಂಭವಾಗಿದ್ದು, ಅದನ್ನು ಅಳವಡಿಸಿಕೊಳ್ಳಲು ಭಾರತ ತಡ ಮಾಡಬಾರದು.ದಿಲ್ಲಿಯಿಂದ ಬರುವ 1 ರೂಪಾಯಿ ಗ್ರಾಮಗಳಿಗೆ ತಲುಪುವಾಗ 30 ಪೈಸೆಯಾಗುತ್ತದೆ ಎಂದು ಜನರು ಹೇಳುತ್ತಿದ್ದರು. ಆದರೆ ನಾವು 100 ಪೈಸೆಯನ್ನೂ ಜನರಿಗೆ ತಲುಪಿಸಲು ನಿರ್ಧರಿಸಿದ್ದೇವೆ. ಡಿಜಿಟಲ್ ಇಂಡಿಯಾಗೆ ಕೊಡುಗೆ ನೀಡುತ್ತಿರುವ ಡಾ| ವೀರೇಂದ್ರ ಹೆಗ್ಗಡೆ ಹಾಗು ಸ್ವಸಹಾಯ ಸಂಘದ ಮಹಿಳೆಯರನ್ನು ಅವರು ಇದೇ ಸಂದರ್ಭ ಅಭಿನಂದಿಸಿದರು.

ಆರಂಭದಲ್ಲಿ `ನಮೋ ಮಂಜುನಾಥ....' ನಿಮಗೆಲ್ಲರಿಗೂ ಅಭಿನಂದನೆಗಳು ?ಎಂದು ಕನ್ನಡದಲ್ಲಿ ಭಾಷಣ ಆರಂಭಿಸಿದ ಪ್ರಧಾನಿ ಮೋದಿ `ಮಂಜುನಾಥ ಸ್ವಾಮಿ ದರ್ಶನ ಪಡೆಯುವ ಅವಕಾಶ ಸಿಕ್ಕಿದ್ದು ನನ್ನ ಭಾಗ್ಯ'. ?ಕಳೆದ ವಾರ ಆಧಿಶಂಕರರು ಸ್ಥಾಪಿಸಿದ್ದ ಕೇದರನಾಥ್ ದರ್ಶನ ಪಡೆದಿದ್ದೆ. ಇಂದು ದಕ್ಷಿಣದ ಮಂಜುನಾಥನ ದರ್ಶನದ ಅವಕಾಶ ಸಿಕ್ಕಿದ್ದು ನನ್ನ ಸೌಭಾಗ್ಯ ಎಂದು ಬಣ್ಣಿಸಿದರು.

`ನನ್ನಂತ ಸಾಮಾನ್ಯ ವ್ಯಕ್ತಿಗೆ ನೀವು ಸನ್ಮಾನ ಮಾಡಿದ್ದೀರಿ.ನಿಮ್ಮಂತಹ ಮಹಾನ್ ತಪಸ್ವಿಯ ಮುಂದೆ ನಾನು ಚಿಕ್ಕವನು. ನಿಮ್ಮ ಸಾಧನೆ ನಮಗೆಲ್ಲರಿಗೂ ಪ್ರೇರಣೆ ವಿಷಯ' ಎಂದು ಡಾ| ಹೆಗ್ಗಡೆ ಅವರನ್ನು ಪ್ರಧಾನಿ ಮೋದಿ ಶ್ಲಾಘಿಸಿದರು.`ಕೇಂದ್ರದ ಕೌಶಲ್ಯಾಭಿವದ್ಧಿ ಕಾರ್ಯಕ್ರಮಕ್ಕೆ ಹೆಗ್ಗಡೆಯವರೇ ಪ್ರೇರಣೆಯಾಗಿದ್ದಾರೆ. ಅವರ ತತ್ವವನ್ನೇ ಕೌಶಲ್ಯ ಅಭಿವೃದ್ಧಿ ಯೋಜನೆಯಲ್ಲಿ ಅಳವಡಿಸಲಾಗಿದೆ. ಅವರು ಸಣ್ಣ ವಯಸ್ಸಿನಿಂದ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದಾರೆ. 50 ವರ್ಷಗಳಿಂದ ಸಮಾಜದ ಹಿತಕ್ಕಾಗಿ ಕೆಲಸ ಮಾಡುವ ಅವರ ಸಾಧನೆ ದೊಡ್ಡದು' ಎಂದರು.

ಶ್ರೀಕ್ಷೇತ್ರದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಪ್ರಾಸ್ತಾವಿಕ ಮಾತನಾಡಿ ಪ್ರಧಾನಿ ಮೋದಿಗೆ ಮೈಸೂರು ಪೇಟಾ ತೊಡಿಸಿ, ಸರಸ್ವತಿಯ ವಿಗ್ರಹ ನೀಡಿ ಸಾಂಪ್ರದಾಯಿಕವಾಗಿ ಗೌರವಿಸಿದರು. ಇದೇ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ಡಾ ಹೆಗ್ಗಡೆ ಅವರನ್ನು ಸನ್ಮಾನಿಸಿದರು.

ಕೇಂದ್ರ ಸಚಿವರಾದ ಡಿ.ವಿ.ಸದಾನಂದ ಗೌಡ ಮತ್ತು ಅನಂತ ಕುಮಾರ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಸಂಸದ ನಳೀನ್‍ಕುಮಾರ್ ಕಟೀಲು, ಬೆಳ್ತಂಗಡಿ ಶಾಸಕ ವಸಂತ ಬಂಗೇರ ಮತ್ತಿತರರು ಉಪಸ್ಥಿತರಿದ್ದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾರ್ಯನಿರ್ವಾಹಕ ನಿರ್ದೇಶಕ ಎಲ್.ಎಚ್.ಮಂಜುನಾಥ ಸ್ವಾಗತಿಸಿದರು. ಡಾ| ಯಶೋವರ್ಮ ಕಾರ್ಯಕ್ರಮ ನಿರೂಪಿಸಿದರು.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here