Saturday 10th, May 2025
canara news

ಇಂಡಿಯನ್ ಕರಾಟೆ ಸಂಸ್ಥಾಪಕನಿಗೆ ಸುವರ್ಣ ಸಂಭ್ರಮ

Published On : 05 Nov 2017   |  Reported By : media release


ಮಂಗಳೂರು: ಇಂಡಿಯನ್ ಕರಾಟೆ ಸಂಸ್ಥಾಪಕ ಬಿ.ಎಂ.ನರಸಿಂಹನ್ ಗ್ರ್ಯಾಂಡ್ ಮಾಸ್ಟರ್ ಆಗಿ ಇದು ಐವತ್ತನೇ ವರ್ಷ. ಕಳೆದ ಅರ್ಧ ಶತಮಾನದಲ್ಲಿ ದೇಶದಲ್ಲಿ ಕರಾಟೆ ಆಗುಹೋಗು, ಏಳುಬೀಳುಗಳನ್ನು ನಿಕಟವಾಗಿ ವೀಕ್ಷಿಸುತ್ತಾ ಬಂದಿರುವ ಗ್ರ್ಯಾಂಡ್‍ಮಾಸ್ಟರ್, ಇದೀಗ ಟೋಕಿಯೊ ಒಲಿಂಪಿಕ್ಸ್‍ಗೆ ಶಿಷ್ಯರನ್ನು ಸಜ್ಜು ಮಾಡುವಲ್ಲಿ ನಿರತರಾಗಿದ್ದಾರೆ.

ಒಂಬತ್ತನೇ ವಯಸ್ಸಿನಲ್ಲೇ ಕರಾಟೆ ಕಲಿಕೆ ಆರಂಭಿಸಿದ ನರಸಿಂಹನ್, ಗೋಪಿರಾಜ್ ಅವರ ಗರಡಿಯಲ್ಲಿ ಪಳಗಿದವರು. 1968ರಲ್ಲಿ ರಾಷ್ಟ್ರೀಯ ಜೂಡೊ ಚಾಂಪಿಯನ್ ಆಗಿದ್ದ ಇವರು, ಜೂಡೊ, ಕಲರಿಯಪಟ್ಟು ಮತ್ತು ಕರಾಟೆಯ ಎಲ್ಲ ಒಳ್ಳೆಯ ಅಂಶಗಳನ್ನು ರೂಢಿಸಿಕೊಂಡು ಸೆಲ್ಫ್ ಡಿಫೆನ್ಸ್ ಸ್ಕೂಲ್ ಆಫ್ ಇಂಡಿಯನ್ ಕರಾಟೆ ಎಂಬ ವಿಶೇಷ ಪ್ರಕಾರ ಹುಟ್ಟುಹಾಕಿ, ಇದುವರೆಗೂ ಇಂಡಿಯನ್ ಕರಾಟೆಯ ಗ್ರ್ಯಾಂಡ್‍ಮಾಸ್ಟರ್ ಆಗಿಯೇ ಉಳಿದಿದ್ದಾರೆ. ಮಂಗಳೂರಿನಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಚಾಂಪಿಯನ್‍ಶಿಪ್‍ಗೆ ಆಗಮಿಸಿರುವ ಅವರು ಪತ್ರಕರ್ತರೊಂದಿಗೆ ಮಾತನಾಡಿದರು.

81ರ ವಯಸ್ಸಿನಲ್ಲೂ 18ರ ಯುವಕನಂತೆ ಸಕ್ರಿಯವಾಗಿ ಪ್ರತಿ ಆಗುಹೋಗುಗಳನ್ನು ಅವಲೋಕಿಸುತ್ತಿರುವ ನರಸಿಂಹನ್ ಅವರು ಸಾವಿರಾರು ಕರಾಟೆಪಟುಗಳನ್ನು ರೂಪಿಸಿದ್ದಾರೆ. ದೇಶದ ಕರಾಟೆ ಕ್ಷೇತ್ರದ ದಿಗ್ಗಜರೆನಿಸಿದ ಬೆಂಗಳೂರಿನ ಶ್ರೀನಿವಾಸ್, ವಿಜಯೇಂದ್ರಬಾಬು, ಅಶೋಕ್, ಕವಿತಾ ಸನಿಲ್ ಹೀಗೆ ಅತ್ಯುತ್ತಮ ಪಟುಗಳನ್ನು ರೂಪಿಸಿದ್ದಾರೆ. ನರಸಿಂಹನ್ ಅವರ ಹಿರಿಯ ಶಿಷ್ಯ ಹಾಗೂ ಕರಾಟೆಯಲ್ಲಿ ಸೋಲಿಲ್ಲದ ಸರದಾರ ಎಂದೇ ಕರೆಸಿಕೊಂಡಿರುವ ಶ್ರೀನಿವಾಸ್ ತಮ್ಮ ನಂತರ ಭಾರತೀಯ ಕರಾಟೆಯ ಸಾರಥ್ಯ ವಹಿಸಬೇಕು ಎಂಬ ಅಭಿಲಾಷೆಯನ್ನು ಅವರು ವ್ಯಕ್ತಪಡಿಸಿದರು.

"ಇದುವರೆಗೆ ಸಮರ ಕಲೆ ಎನಿಸಿಕೊಂಡಿದ್ದ ಕರಾಟೆ ಇದೀಗ ಕ್ರೀಡೆಯಾಗಿ ಒಲಿಂಪಿಕ್ಸ್‍ಗೆ ಸೇರ್ಪಡೆಯಾಗಿದೆ. ಒಲಿಂಪಿಕ್ಸ್‍ನಲ್ಲಿ ಭಾಗವಹಿಸುವ ಭಾರತೀಯ ಕರಾಟೆ ಪಟುಗಳಿಗೆ ವಿಶೇಷ ತರಬೇತಿ ನೀಡಿ ಸಜ್ಜುಗೊಳಿಸಬೇಕಿದೆ. ಈ ನಿಟ್ಟಿನಲ್ಲಿ ಇಂಡಿಯನ್ ಒಲಿಂಪಿಕ್ಸ್ ಅಸೋಸಿಯೇಶನ್ ಹಾಗೂ ಕರಾಟೆ ಅಸೋಸಿಯೇಶನ್ ಆಫ್ ಇಂಡಿಯಾ ಕಾರ್ಯಪ್ರವೃತ್ತವಾಗಿವೆ. ಇಂಡಿಯನ್ ಕರಾಟೆ ವತಿಯಿಂದಲೂ ಸಂಭಾವ್ಯರನ್ನು ಗುರುತಿಸಿ ವಿಶೇಷ ತರಬೇತಿ ನೀಡಲಾಗುತ್ತಿದೆ" ಎಂದು ವಿವರಿಸಿದರು.

ಸ್ವತಃ ಉತ್ತಮ ಆಯುರ್ವೇದ ವೈದ್ಯರೂ ಆಗಿರುವ ನರಸಿಂಹನ್ ಅವರ ಆರೋಗ್ಯದ ಗುಟ್ಟೇನು ಎಂದು ಕೇಳಿದಾಗ ಗಿಡಮೂಲಿಕೆಗಳು ಎಂದು ನಕ್ಕರು. ದೇಶದ 100ಕ್ಕೂ ಹೆಚ್ಚು ಕಡೆಗಳಲ್ಲಿ ಕರಾಟೆ ತರಬೇತಿಯನ್ನು ನೀಡಲಾಗುತ್ತಿದ್ದು, ಹೆಣ್ಣುಮಕ್ಕಳು ಈ ಹೆಚ್ಚುಹೆಚ್ಚಾಗಿ ಇದರಲ್ಲಿ ಪಾಲ್ಗೊಂಡು ಆತ್ಮರಕ್ಷಣೆಗೆ ಮುಂದಾಗಬೇಕು ಎನ್ನುವುದು ಅವರ ಅಭಿಮತ.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here