ಮಂಗಳೂರು: ಕರಾವಳಿ ಸಹಿತ ರಾಜ್ಯದಲ್ಲಿ ಕಂಬಳ ಆಯೋಜನೆಗೆ ತಡೆಯಾಜ್ಞೆ ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿದ್ದು, ಈ ಕುರಿತ ಪ್ರಕರಣದ ಅರ್ಜಿ ವಿಚಾರಣೆಯನ್ನು ನ. 13ಕ್ಕೆ ಮುಂದೂಡಿದೆ. ಈ ಮೂಲಕ ಕರಾವಳಿ ಭಾಗದಲ್ಲಿ ಕಂಬಳ ಆಯೋಜನೆಗೆ ತಲೆದೋರಿದ್ದ ಆತಂಕ ಸದ್ಯಕ್ಕೆ ದೂರವಾಗಿದೆ.
ರಾಜ್ಯದಲ್ಲಿ ಕಂಬಳಕ್ಕೆ ಅವಕಾಶ ನೀಡಿರುವ ಸರಕಾರದ ಅಧ್ಯಾದೇಶ ಪ್ರಶ್ನಿಸಿ ಪ್ರಾಣಿದಯಾ ಸಂಘವಾದ ಪೆಟಾ (ಪೀಪಲ್ ಫಾರ್ ಎಥಿಕಲ್ ಟ್ರೀಟ್ಮೆಂಟ್ ಆಫ್ ಎನಿಮಲ್ಸ್) ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಸೋಮವಾರ ಕೈಗೆತ್ತಿಕೊಂಡ ಸುಪ್ರೀಂ ಕೋರ್ಟ್ ತ್ರಿಸದಸ್ಯ ನ್ಯಾಯಪೀಠ ಕಂಬಳ ಆಯೋಜನೆಗೆ ತಡೆಯಾಜ್ಞೆ ನೀಡಲು ನಿರಾಕರಿಸಿದೆ. ಮುಂದಿನ ವಿಚಾರಣೆಯನ್ನು ನ. 13ಕ್ಕೆ ಮುಂದೂಡಿ ಕೇಂದ್ರ ಹಾಗೂ ರಾಜ್ಯ ಸರಕಾರಗಳಿಗೆ ನೋಟಿಸ್ ಜಾರಿ ಮಾಡಲು ಸೂಚಿಸಿದೆ.