Saturday 10th, May 2025
canara news

ಹಿರಿಯ ಶಿಕ್ಷಕ-ಪತ್ರಕರ್ತ- ಹಾಡುಕವಿ ಬಿ.ಎಸ್ ಕುರ್ಕಾಲ್ ಯುಗಾಂತ್ಯ

Published On : 12 Nov 2017   |  Reported By : Rons Bantwal


ಮುಂಬಯಿ, ನ.12: ಹಿರಿಯ ಶಿಕ್ಷಕ-ಪತ್ರಕರ್ತ-ಲಕ್ಷ್ಮೀ ಛಾಯಾ ವಿಚಾರ ವೇದಿಕೆ ಮುಂಬಯಿ ಸಂಚಾಲಕ, ಹಿರಿಯ ಹಾಡುಕವಿ ಎಂದೇ ಪ್ರಸಿದ್ಧರಾಗಿರುವ ಓರ್ವ ಸಹೃದಯಿ, ಆದರ್ಶ ಶಿಕ್ಷಕ, ಅಂಕಣಕಾರ, ನಾಟಕಕಾರ, ಗಾಯಕ ಬಿ.ಎಸ್ ಕುರ್ಕಾಲ್ ಪ್ರಸಿದ್ಧಿಯ ಭುಜಂಗ ಶೆಟ್ಟಿ ಕುರ್ಕಾಲ್ (85.) ಇಂದಿಲ್ಲಿ ಭಾನುವಾರ ಮುಂಜಾನೆ ಬೋರಿವಿಲಿ ಪೂರ್ವದ ಎಂ.ಜಿ ರೋಡ್ ಅಲ್ಲಿನ ಸಂಜಯ್ ಗಾಂಧಿ ನೇಶನಲ್ ಪಾರ್ಕ್ (ವೆಸ್ಟರ್ನ್ ಎಕ್ಸ್‍ಪ್ರೆಸ್ ಹೈವೇ ಸನಿಹದ) ಶಾಂತಿವನ್ ಅಲ್ಲಿನ ಧರಂ ಪ್ಯಾಲೇಸ್ ನಿವಾಸದಲ್ಲಿ ಹೃದಯಾಘಾತದಿಂದ ಕೊನೆಯುಸಿರೆಳೆದರು.

ಮೃತರು ಒಂದು ಗಂಡು (ದಯಾಸಾಗರ್ ಶೆಟ್ಟಿ), ಒಂದು ಹೆಣ್ಣು (ಅನ್ನಪೂರ್ಣ ಜೆ.ಶೆಟ್ಟಿ) ಸೇರಿದಂತೆ ಅಪಾರ ಬಂಧು ಬಳಗ, ಸಾಹಿತ್ಯಾಭಿಮಾನಿ, ಶಿಷ್ಯವರ್ಗವನ್ನು ಅಗಲಿದ್ದಾರೆ. ಒಂದು ತಿಂಗಳ ಹಿಂದೆಯಷ್ಟೇ ಬಿಲ್ಲವರ ಅಸೋಸಿಯೇಶನ್ ಮುಂಬಯಿ ಮುಖವಾಣಿ ಅಕ್ಷಯ ಮಾಸಿಕದವು ಕೊಡಮಾಡಿದ ಅಕ್ಷಯದ ಮಾಜಿ ಗೌರವ ಪ್ರಧಾನ ಸಂಪಾದಕ ಎಂ.ಬಿ ಕುಕ್ಯಾನ್ ಪ್ರಾಯೋಜಿತ `ಶ್ರೀ ಗುರು ನಾರಾಯಣ ಸಾಹಿತ್ಯ ಪ್ರಶಸ್ತಿ 2017'ಯೊಂದಿಗೆ ಗೌರವಿಸಲ್ಪಟ್ಟಿದ್ದರು.

ದಿನಾಂಕ 1932ರ ಜುಲೈ. 17ರಂದು ಕುರ್ಕಾಲು ಗಣಪಯ್ಯ ಶೆಟ್ಟಿ ಮತ್ತು ಬೋಳ ಲಕ್ಷಿ ್ಮೀ ಶೆಡ್ತಿ ದಂಪತಿ ಸುಪುತ್ರರಾಗಿ ಕುರ್ಕಾಲು ಅಲ್ಲಿನ ಕುಂಜಾರುಗಿರಿಯಲ್ಲಿ ಜನಿಸಿದ್ದರು. ತಂದೆ ಅವರ ಗಿರಿಜಾ ಶಾಲೆಯಲ್ಲಿ ಅಕ್ಷರಾಭ್ಯಾಸ ಆರಂಭಿಸಿ ಮುಂದೆ ಇನ್ನಂಜೆಯ ಹೈಸ್ಕೂಲಿನಲ್ಲಿ ಕಲಿಕೆ ಪೂರೈಸಿ ತಮ್ಮದೇ ಶಾಲೆಯಲ್ಲಿ ಶಿಕ್ಷಕರಾಗಿ ವೃತ್ತಿ ಆರಂಭಿಸಿದ್ದರು.

1953ರಲ್ಲಿ ಮಂಗಳೂರುನ ಶಿಕ್ಷಕ ತರಬೇತಿ ಶಾಲೆಯಲ್ಲಿ ತರಬೇತುಗೊಂಡು ಮತ್ತೆ ಶಿಕ್ಷಕರಾಗಿ ಮುಂದುವರೆದರು. 1966ರಲ್ಲಿ ಮುಂಬಯಿಗೆ ಸೇರಿ ವಡಾಲ ಅಲ್ಲಿನ ರಾಷ್ಟ್ರೀಯ ಕನ್ನಡ ಶಿಕ್ಷಣ ಸಂಸ್ಥೆ (ಎನ್‍ಕೆಇಎಸ್‍ಯಲ್ಲಿ ಹಗಲು ಶಿಕ್ಷಕರಾಗಿ, ರಾತ್ರಿ ಬಿಲ್ಲವರ ಅಸೋಸಿಯೇಶನ್ ಮುಂಬಯಿ ಸಂಚಾಲಿತ ಗುರುನಾರಾಯಣ ರಾತ್ರಿ ಶಾಲೆಯಲ್ಲಿ ಶಿಕ್ಷಕರಾಗಿ ಸೇರಿ ಎರಡೂ ಶಾಲೆಯಲ್ಲಿ ಸುಮಾರು ಎರಡೂವರೆ ದಶಕಗಳ ಕಾಲ ದೀರ್ಘಾವಧಿಯ ಶಿಕ್ಷಕರಾಗಿ ಸೇವೆಗೈದರು. ಬಿಲ್ಲವರ ಅಸೋಸಿಯೇಶನ್ ಆಕಾಶವಾಣಿ ಯಲ್ಲಿ ಸಾದರಪಡಿಸುತ್ತಿದ್ದ ಯಕ್ಷಗಾನ ತಾಳಮದ್ದಳೆಯಲ್ಲಿ ಓರ್ವ ಅರ್ಥಧಾರಿಯಾಗಿ ಮೂರು ದಶಕಗಳಿಗೂ ಮಿಕ್ಕಿ ಸೇವೆ ಸಲ್ಲಿಸಿ ಕುರ್ಕಾಲರು ಉತ್ತಮ ರಂಗಕರ್ಮಿ ಆಗಿದ್ದು, ಹಲವಾರು ನಾಟಕಗಳನ್ನು ನಿರ್ಮಿಸಿ ನಿರ್ದೇಶಿಸಿ ಅಭಿನಯಿಸಿ ಬಾರೀ ಜನಮನ್ನಣೆಗೆ ಪಾತ್ರರಾಗಿದ್ದರು.

ಬಾಂಬೆ ಬಂಟ್ಸ್ ಅಸೋಸಿಯೇಶನ್‍ನ `ಪತ್ರಪುಷ್ಪ' ಮಾಸಿಕದ ಸಂಪಾದಕರಾಗಿ ಹತ್ತು ವರ್ಷ ಸೇವೆ ಸಲ್ಲಿಸಿದ ಇವರು ಕಾವ್ಯ, ಚುಟುಕು, ಶಿಶುಗೀತೆ, ಅಂಕಣಬರಹ, ನಾಟಕ, ವ್ಯಕ್ತಿಚಿತ್ರ, ರಸಚಿತ್ರ, ಚಿತ್ರಕಥಾ, ಮುಂತಾದ ಪ್ರಕಾರಗಳಲ್ಲಿ ಸುಮಾರು 26ಕ್ಕೂ ಮಿಕ್ಕಿ ಕೃತಿಗಳನ್ನು ಪ್ರಕಟಿಸಿದ್ದಾರೆ. ಸುಮಾರು 10 ಸಂಪಾದಿತ ಕೃತಿಗಳನ್ನು ರಚಿಸಿದ್ದಾರೆ. ಕುರ್ಕಾಲರ ಗೌರವ ಗ್ರಂಥ ನಿಧಿಯಿಂದ ಈವರೆಗೆ ವಿವಿಧ ಲೇಖಕರ 8 ಕೃತಿಗಳು ಪ್ರಕಟವಾಗಿವೆ. ಇವರ ಕುರಿತು 3 ಅಭಿನಂದನಾ, ಒಂದು ಅಧ್ಯಯನ ಕೃತಿ ಪ್ರಕಟವಾಗಿವೆ. ಇನ್ನೂ ಹತ್ತಾರು ಕೃತಿಗಳು ಪ್ರಕಟಣೆಯ ಹಾದಿಯಲ್ಲಿ ಅಚ್ಚಿನ ಮನೆಯಲ್ಲಿದೆ. ಕುರ್ಕಾಲರ ಸಾಹಿತ್ಯ ಅವರ ವ್ಯಕ್ತಿತ್ವದ ಪ್ರತಿಬಿಂಬ ಎಂದರೆ ತಪ್ಪಲ್ಲ. ಇವರು ಸ್ಥಾಪಿಸಿರುವ ಲಕ್ಷಿ ್ಮೀಛಾಯಾ ವಿಚಾರ ವೇದಿಕೆಯಿಂದ ಅನೇಕ ಹಿರಿಯ ಕನ್ನಡಿಗರು ಗೌರವಿಸಲ್ಪಟ್ಟಿದ್ದಾರೆ. ಕುರ್ಕಾಲರು ತಮ್ಮ ಪತ್ನಿ (ಸ್ವರ್ಗಸ್ಥ) ಜಯಂತಿ ಕುರ್ಕಾಲರ ಹೆಸರಿನಲ್ಲಿ ಕೊಡಮಾಡುವ ಸಾಹಿತ್ಯ ಪ್ರಶಸ್ತಿಗಳಿಂದ 22 ಮಂದಿ ಸಾಹಿತಿಗಳು ಸನ್ಮಾನಿಸಲ್ಪಟ್ಟಿದ್ದಾರೆ. ಕುರ್ಕಾಲ್ ಅಭಿಮಾನಿ ಬಳಗ, ನೂರಾರು ವಿದ್ಯಾಥಿರ್üಗಳು, ಅಪಾರ ಸಂಖ್ಯೆಯ ಹಿತೈಷಿಗಳು ಅವರ 77ರ ಸಂಭ್ರಮ ಆಚರಿಸಿಗಿರಿಜಾತ ಗೌರವ ಗ್ರಂಥ ಸಮರ್ಪಿಸಿ ಗೌರವಿಸಿದ್ದರು.

ಅನೇಕ ವರ್ಷಗಳಿಂದ ಚೆಂಬೂರು ಗೋವಂಡಿಯ ಸ್ವನಿವಾಸದಲ್ಲೇ ವಾಸ್ತವ್ಯವಾಗಿದ್ದರೂ ಸದ್ಯ ನಿವೃತ್ತ ಜೀವನವಾಗಿಸಿ ಬೋರಿವಿಲಿ ಪೂರ್ವದ ಶಾಂತಿವನ್‍ನ ಧರಂ ಪ್ಯಾಲೇಸ್ ನಿವಾಸದಲ್ಲಿ ಸುಪುತ್ರನ ಜೊತೆ ವಾಸವಾಗಿದ್ದರು. ಸಂಜೆ ವೇಳೆಗೆ ಪಾರ್ಥೀವ ಶರೀರವನ್ನು ಸಾರ್ವಜನಿಕ ಅಂತಿಮ ದರ್ಶನಕ್ಕಾಗಿ ಇರಿಸಲಾಗಿದ್ದು ರಾತ್ರಿ (ನ.12) ಬೋರಿವಿಲಿಯ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು.

ಸಂತಾಪದ ಸುರಿಮಳೆ:

ಬಿ.ಎಸ್ ಕುರ್ಕಾಲ್ ನಿಧನಕ್ಕೆ ಅವರ ಪರಮಶಿಷ್ಯರಲ್ಲೋರ್ವ ನ್ಯಾಚುರಲ್ ಐಸ್‍ಕ್ರೀಂ ಸಂಸ್ಥೆಯ ರಘುನಂದನ ಕಾಮತ್, ಬಿಲ್ಲವರ ಅಸೋಸಿಯೇಶನ್‍ನ ರೂವಾರಿ ಜಯ ಸಿ.ಸುವರ್ಣ, ಅಧ್ಯಕ್ಷ ನಿತ್ಯಾನಂದ ಡಿ.ಕೋಟ್ಯಾನ್, ಹಿರಿಯ ಪತ್ರಕರ್ತ ಎಂ.ಬಿ ಕುಕ್ಯಾನ್, ಡಾ| ವ್ಯಾಸರಾವ್ ನಿಂಜೂರು, ಸಾಹಿತಿ, ವಿದ್ವಾಂಸ, ರಾಣಿ ಅಬ್ಬಕ್ಕ ತುಳು ಸಂಶೋಧನಾ ಕೇಂದ್ರ ಬಂಟ್ವಾಳ ಇದರ ಅಧ್ಯಕ್ಷ ಪೆÇ್ರ| ತುಕರಾಮ ಪೂಜಾರಿ, ನ್ಯಾ| ಬಿ.ಮೊಯಿದ್ಧೀನ್ ಮುಂಡ್ಕೂರು, ಡಾ| ಸುನೀತಾ ಎಂ.ಶೆಟ್ಟಿ, ಚಂದ್ರಶೇಖರ ಪಾಲೆತ್ತಾಡಿ, ನ್ಯಾ| ವಸಂತ ಎಸ್.ಕಲಕೋಟಿ, ಡಾ| ಕರುಣಾಕರ ಶೆಟ್ಟಿ ಪಣಿಯೂರು, ಸಾ.ದಯಾ, ನ್ಯಾ| ಕಡಂದಲೆ ಪರಾರಿ ಪ್ರಕಾಶ್ ಎಲ್.ಶೆಟ್ಟಿ, ಪೇತೆಮನೆ ಪ್ರಕಾಶ್ ಶೆಟ್ಟಿ, ಡಾ| ಜಿ.ಡಿ ಜೋಶಿ, ಡಾ| ಆಶಾಲತಾ ಸುವರ್ಣ, ಸಾ.ದಯಾ, ಕಡಂದಲೆ ಸುರೇಶ್ ಭಂಡಾರಿ, ಡಾ| ವಿಶ್ವನಾಥ ಕಾರ್ನಾಡ್, ಕೆ.ಮಂಜುನಾಥಯ್ಯ, ಡಾ| ಮಂಜುನಾಥ್, ಡಾ| ಜಿ.ಎನ್ ಉಪಾಧ್ಯ, ಹೆಚ್.ಬಿಎಲ್ ರಾವ್, ಶಿಮುಂಜೆ ಪರಾರಿ, ಮೋಹನ್ ಮಾರ್ನಾಡ್, ರಾಮಮೋಹನ ಶೆಟ್ಟಿ ಬಳ್ಕುಂಜೆ, ಎಸ್.ಕೆ ಸುಂದರ್, ಡಾ| ಈಶ್ವರ ಅಲೆವೂರು, ಹರೀಶ್ ಜಿ.ಪೂಜಾರಿ ಕೊಕ್ಕರ್ಣೆ, ಹರೀಶ್ ಹೆಜ್ಮಾಡಿ, ಪಂ| ನವೀನ್‍ಚಂದ್ರ ಆರ್.ಸನೀಲ್ ಸೇರಿದಂತೆ ಅನೇಕ ಗಣ್ಯರು ಹಾಗೂ ಮಹಾನಗರದಲ್ಲಿನ ಬಹುತೇಕ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಮತ್ತು ಸದಸ್ಯರು, ತುಳು ಕನ್ನಡಾಭಿಮಾನಿಗಳು ಸಂತಾಪ ವ್ಯಕ್ತ ಪಡಿಸಿದ್ದಾರೆ. (ರೋನ್ಸ್ ಬಂಟ್ವಾಳ್)

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here