ಮಂಗಳೂರು: ಓಖಿ ಚಂಡಮಾರುತದ ಪ್ರತಾಪಕ್ಕೆ ಕರಾವಳಿ ಮೀನು ಖಾದ್ಯ ಪ್ರೀಯರು ಕಂಗೆಟ್ಟಿದ್ದಾರೆ.ಓಖಿ ಚಂಡಮಾರುತದ ಅಲೆಗಳಿಗೆ ಕಂಗೆಟ್ಟಿದ್ದ ಮೀನುಗಾರರು ವಾರಗಳು ಕಳೆದರೂ ಮೀನುಗಾರಿಕೆ ನಡೆಸಲು ಸಮುದ್ರಕ್ಕಿಳಿಯಲು ಹಿಂದೇಟು ಹಾಕುತ್ತಿದ್ದಾರೆ.
ಜತೆಗೆ ಕರಾವಳಿಯಲ್ಲಿ ಕಳೆದೊಂದು ವಾರದಿಂದ ಮೀನುಗಾರಿಕೆಗೆ ದೋಣಿಗಳು ತೆರಳದ್ದರಿಂದ ಮೀನು ಬೆಲೆ ಏಕಾಏಕಿ ಏರಿಕೆಯಾಗಿದ್ದು, ಇದರ ಪರಿಣಾಮ ಕೋಳಿ ಮಾಂಸದ ಬೆಲೆಯ ಮೇಲೂ ಆಗಿದೆ. ಮೀನುಗಳ ಬೆಲೆಯಲ್ಲಿ ಕೆ.ಜಿ.ಗೆ 200 ರೂ.ನಿಂದ 400 ರೂ.ಗಳ ತನಕ ಬೆಲೆ ಏರಿಕೆಯಾಗಿ, ಜನಸಾಮಾನ್ಯರಿಗೆ ಮೀನು ಕೈಗೆಟಕದಂತಾಗಿದೆ. ಕೇಜಿ ಲೆಕ್ಕದಲ್ಲಿ ಮಾರಾಟ ಆಗುತ್ತಿದ್ದ ಮೀನು ಈಗ ಪೀಸ್ ಗಳ ಲೆಕ್ಕದಲ್ಲಿ ಮಾರಾಟವಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಉದ್ಯಮವನ್ನೇ ನಂಬಿಕೊಂಡ ಸಣ್ಣ ಪುಟ್ಟ ಮೀನು ಮಾರಾಟಗಾರರು ದುಬಾರಿ ಬೆಲೆ ಕೊಟ್ಟು ಮೀನು ಖರೀದಿಸಿ ಮಾರಾಟ ಮಾಡುವ ಶಕ್ತಿ ಇಲ್ಲದಾಗಿದೆ.
ಇನ್ನು ಸ್ಟೇಟ್ ಬ್ಯಾಂಕ್ ಮೀನಿನ ಮಾರುಕಟ್ಟೆಯಲ್ಲಿ ಸುಮಾರು ೪೦೦ ಕ್ಕೂ ಹೆಚ್ಚು ಮಹಿಳೆಯರು ಮೀನು ಮಾರಾಟದ ಕಾರ್ಯದಲ್ಲಿ ತೊಡಗಿಕೊಂಡಿದ್ದರೆ ಈಗ ಅವರ ಸಂಖ್ಯೆ ಅರ್ಧದಷ್ಟು ಕಡಿಮೆಯಾಗಿದೆ.ಒಟ್ಟಿನಲ್ಲಿ ಓಖಿ ಚಂಡಮಾರುತದ ಪ್ರಭಾವ ಮೀನುಗಾರರನ್ನು ಕಂಗೆಡುವಂತೆ ಮಾಡಿದೆ.