ಮಂಗಳೂರು: ಮಂಗಳೂರಿನಲ್ಲಿ ಮತ್ತೆ ನೈತಿಕ ಪೊಲೀಸ್ ಗಿರಿ ನಡೆದಿರುವುದು ಸುದ್ದಿಯಾಗಿದೆ. ಮಂಗಳೂರು ಹೊರ ವಲಯದ ಮೂಡುಶೆಡ್ಡೆಯಲ್ಲಿರುವ ಪ್ರವಾಸಿ ತಾಣ ಪಿಲಿಕುಳ ನಿಸರ್ಗಧಾಮದ ವಾಟರ್ ಪಾರ್ಕಿನಲ್ಲಿ ಇಬ್ಬರು ವಿದ್ಯಾರ್ಥಿನಿಯರ ಜೊತೆ ಅನ್ಯಕೋಮಿನ ಯುವಕರಿಬ್ಬರು ಬಂದಿದ್ದು, ಹಿಂದು ಸಂಘಟನೆ ಕಾರ್ಯಕರ್ತರು ಅವರನ್ನು ಹಿಡಿದು ಥಳಿಸಿದ್ದಾರೆ.
ಬಳಿಕ ಸ್ಥಳಕ್ಕೆ ಆಗಮಿಸಿದ ಪೊಲೀಸರು ಯುವಕ ಯುವತಿಯರನ್ನು ವಶಕ್ಕೆ ಪಡೆದರೂ ಕಾರ್ಯಕರ್ತರು ಪೊಲೀಸರ ಎದುರೇ ಹಲ್ಲೆ ನಡೆಸಿದ್ದಾರೆ. ಯುವಕ - ಯುವತಿಯರು ಒಂದೇ ಕಾಲೇಜಿನವರಾಗಿದ್ದು ಪಿಲಿಕುಳದ ಮಾನಸ ವಾಟರ್ ಪಾರ್ಕಿಗೆ ಬಂದಿದ್ದರು.ವಿದ್ಯಾರ್ಥಿಗಳು ಅನ್ಯಕೋಮಿನವರು ಎಂದು ತಿಳಿದು ಸ್ಥಳೀಯ ಯುವಕರು ಹಿಂದೂ ಸಂಘಟನೆಯ ಕಾರ್ಯಕರ್ತರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಹಿಂದೂ ಸಂಘಟನೆಯ ಕಾರ್ಯಕರ್ತರು ಪಾರ್ಕ್ ಒಳನುಗ್ಗಿ ಹಲ್ಲೆ ನಡೆಸಿದ್ದಾರೆ.
ಯುವತಿಗೆ ಪೊಲೀಸರ ಎದುರೇ ಹಲ್ಲೆ ನಡೆಸಿದ ಹಿಂದೂ ಸಂಘಟನೆಯ ಕಾರ್ಯಕರ್ತ ಸಂಪತ್ ಎಂಬಾತನನ್ನು ಮಂಗಳೂರು ಗ್ರಾಮಾಂತರ ಪೊಲೀಸರು ಬಂಧಿಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.