ಮಂಗಳೂರು: ಮಹಾದಾಯಿ ವಿಚಾರದಲ್ಲಿ ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದ ಗೃಹ ಸಚಿವ ರಾಮಲಿಂಗಾ ರೆಡ್ಡಿ, "ಬಿಜೆಪಿಯೊಂದು ಡ್ರಾಮಾ ಕಂಪೆನಿ. ನರೇಂದ್ರ ಮೋದಿ ಕಂಪನಿಯ ಮಾಲಕರು. ಅಮಿತ್ ಶಾ ಅದರ ಮ್ಯಾನೇಜರ್," ಎಂದು ಗೃಹ ಸಚಿವ ರಾಮಲಿಂಗಾ ರೆಡ್ಡಿ ವ್ಯಂಗ್ಯವಾಡಿದ್ದಾರೆ.
"ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಈ ಕಂಪನಿಯ ಪಾತ್ರಧಾರಿಗಳು," ಎಂದು ಹೇಳಿದ ಅವರು, "ಇವರ ನಾಟಕದಿಂದ ರೈತರಿಗೆ ತೊಂದರೆಯಾಗುತ್ತಿದೆ. ಆದರೆ, ಕಾಂಗ್ರೆಸ್ ಏನಿದ್ದರೂ ರೈತರ ಪರವಾಗಿದೆ ಮತ್ತು ರೈತರ ಪರವಾಗೇ ಇರುತ್ತದೆ," ಎಂದು ತಿಳಿಸಿದರು.
ಮಂಗಳೂರಿನ ಶಕ್ತಿನಗರದಲ್ಲಿ ಪೊಲೀಸ್ ವಸತಿ ಗೃಹಕ್ಕೆ ಶಿಲಾನ್ಯಾಸಗೈದು ಮಾತನಾಡಿದ ಅವರು, "ಕರಾವಳಿಯಲ್ಲಿ ಸಂಘಟನೆಗಳು, ರಾಜಕೀಯ ನಾಯಕರ ಕುಮ್ಮಕ್ಕಿನಿಂದ ಕೋಮು ಗಲಾಟೆ ಆಗುತ್ತಿದೆ. ಇದಕ್ಕೆಲ್ಲ ಬಲಪಂಥೀಯರು, ಪಿಎಫ್ಐನವರ ಓವರ್ ಆಕ್ಟಿಂಗ್ ಕಾರಣ. ಇವರು ಸ್ವಲ್ವ ಸುಮ್ಮನಿದ್ದರೆ ಎಲ್ಲವೂ ಸರಿಯಾಗುತ್ತದೆ. ಜನರಿಗೆ ಈ ಗಲಾಟೆ ಯಾವುದೂ ಬೇಕಾಗಿಲ್ಲ," ಎಂದು ಹೇಳಿದರು.