Saturday 20th, April 2024
canara news

ಧರ್ಮಸ್ಥಳದಲ್ಲಿ ಪಾನಮುಕ್ತರ ಶತಮಾನೋತ್ಸವ ಆಚರಣೆ:

Published On : 17 Mar 2018   |  Reported By : Rons Bantwal


ದೃಢ ಸಂಕಲ್ಪದಿಂದ ಪಾನ ಮುಕ್ತರಾಗಿ ಆರೋಗ್ಯಪೂರ್ಣ ಜೀವನ ನಡೆಸಬೇಕು.

ಉಜಿರೆ: ಅಂತರಂಗ ಶುದ್ಧಿ ಮತ್ತು ಬಹಿರಂಗ ಶುದ್ಧಿಯೊಂದಿಗೆ ದೇವರ ದರ್ಶನ ಮಾಡಿ ನಿಮ್ಮಲ್ಲಿ ಆತ್ಮಶಕ್ತಿ ಜಾಗೃತವಾಗಿ ಪವಿತ್ರಾತ್ಮರಾಗಿದ್ದೀರಿ. ಮುಂದೆ ಯಾವುದೇ ಆಮಿಷಕ್ಕೆ ಒಳಗಾಗದೆ ದೃಢ ಸಂಕಲ್ಪದಿಂದ ಪಾನಮುಕ್ತರಾಗಿ ಆರೋಗ್ಯಪೂರ್ಣ ಜೀವನ ನಡೆಸಬೇಕು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು.

ಅವರು ಬುಧವಾರ ಧರ್ಮಸ್ಥಳದಲ್ಲಿ ಅಮೃತವರ್ಷಿಣಿ ಸಭಾ ಭವನದಲ್ಲಿ ಪಾನಮುಕ್ತರಿಗೆ ಹಿತವಚನ ನೀಡಿದರು.

ರಾಜ್ಯದ 23 ಕಡೆಗಳಲ್ಲಿ ಜನಜಾಗೃತಿ ವೇದಿಕೆ ಆಶ್ರಯದಲ್ಲಿ ಆಯೋಜಿಸಲಾದ ಮದ್ಯವರ್ಜನ ಶಿಬಿರಗಳಲ್ಲಿ ಭಾಗವಹಿಸಿ ಪಾನಮುಕ್ತರಾಗಿ ನೂರು ದಿನಗಳನ್ನು ಪೂರೈಸಿದ 1025 ಶಿಬಿರಾರ್ಥಿಗಳು ಬುಧವಾರ ಧರ್ಮಸ್ಥಳಕ್ಕೆ ಬಂದು ನೇತ್ರಾವತಿ ನದಿಯಲ್ಲಿ ಮಿಂದು, ದೇವರ ದರ್ಶನ ಮಾಡಿದ ಬಳಿಕ ಅಮೃತ ವರ್ಷಿಣಿ ಸಭಾ ಭವನದಲ್ಲಿ ಹೆಗ್ಗಡೆಯವರು ಅವರಿಗೆ ಹಿತೋಪದೇಶ ನೀಡಿದರು.

ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿದೆ. ಪಾನಮುಕ್ತರಾಗಿ ನಿಮ್ಮ ಆರೋಗ್ಯ ಸುಧಾರಣೆಯೊಂದಿಗೆ ವೈಯಕ್ತಿಕ ಹಾಗೂ ಸಾಮಾಜಿಕ ಗೌರವ ಹೆಚ್ಚಾಗುತ್ತದೆ. ಆರ್ಥಿಕ ಸ್ವಾವಲಂಬನೆಯೊಂದಿಗೆ ಸಾಂಸಾರಿಕ ಜೀವನ ಸುಖ-ಶಾಂತಿ ನೆಮ್ಮದಿಯಿಂದ ಸಾಗುತ್ತದೆ.

ಮುಂದೆ ಯಾವುದೇ ಆಮಿಷಕ್ಕೆ ಒಳಗಾಗಿ ಮದ್ಯಪಾನಕ್ಕೆ ಬಲಿಯಾಗಬಾರದು. ದುಶ್ಚಟಗಳ ಮೂಲಕ ಶನಿ ಹಿಡಿಯುತ್ತದೆ. ಪಾನ ಮುಕ್ತರಾದವರನ್ನು ಮತ್ತೆ ಮದ್ಯಪಾನ ಮಾಡಲು ಒತ್ತಾಯಿಸುವವರು ನಿಮ್ಮ ಪರಮ ಶತ್ರುಗಳು. ಆದುದರಿಂದ ಎಚ್ಚರಿಕೆಯಿಂದ ಶಾಂತಿ-ನೆಮ್ಮದಿಯ ಜೀವನ ನಡೆಸಿ ಎಂದು ಹೆಗ್ಗಡೆಯವರು ತಿಳಿಸಿದರು.
ಚುನಾವಣೆ ಸಂದರ್ಭದಲ್ಲಿ ಮದ್ಯಪಾನ ಮತ್ತು ಬಾಡೂಟದ ಆಮಿಷಕ್ಕೆ ಒಳಗಾಗಿ ಮತದಾನ ಮಾಡಬಾರದು. ಪ್ರಜ್ಞಾವಂತರಾಗಿ ಮತದಾನ ಮಾಡಿ ಎಂದು ಅವರು ಕಿವಿ ಮಾತು ಹೇಳಿದರು.

ಸಕಲೇಶಪುರದ ರೇಣುಕಾ ಮತ್ತು ಧರ್ಮಪ್ರಕಾಶ್ ತಮ್ಮ ಅನುಭವ ವಿವರಿಸಿದರು. ಜನಜಾಗೃತಿ ವೇದಿಕೆಯ ಕಾರ್ಯದರ್ಶಿ ವಿವೇಕ್ ವಿ. ಪಾಯಸ್ ಸ್ವಾಗತಿಸಿದರು. ಯೋಜನಾಧಿಕಾರಿ ತಿಮ್ಮಯ್ಯ ನಾಯ್ಕ್ ಧನ್ಯವಾದವಿತ್ತರು.

ಉಡುಪಿಯ ಅಶೋಕ ಸಿ. ಪೂಜಾರಿ, ಬಾರ್ಕೂರಿನ ಶ್ರೀನಿವಾಸ ಶೆಟ್ಟಿಗಾರ್, ದಾಮೋದರ ಶರ್ಮಾ, ಜನಾರ್ದನ ಹೆಬ್ರಿ ಮತ್ತು ಇಬ್ರಾಹಿಂ ಉಪಸ್ಥಿತರಿದ್ದರು.

ಮುಖ್ಯಾಂಶಗಳು:
• ಯಾವುದೇ ಆಮಿಷಕ್ಕೆ ಒಳಗಾಗಿ ಮತದಾನ ಮಾಡಬಾರದು. ಪ್ರಜ್ಞಾವಂತರಾಗಿ ಮತದಾನ ಮಾಡಬೇಕು.
• ಸದ್ಯದಲ್ಲಿಯೇ ಪಾನಮುಕ್ತರ ಸ್ವ-ಸಹಾಯ ಸಂಘಗಳನ್ನು ಪ್ರಾರಂಭಿಸಲಾಗುವುದು.
• ಕಳೆದ ಒಂದು ವರ್ಷದಲ್ಲಿ ಹನ್ನೊಂದು ಶತದಿನೋತ್ಸವ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
• ಮುಂದಿನ ವರ್ಷ 165 ಮದ್ಯವರ್ಜನ ಶಿಬಿರ ಏರ್ಪಡಿಸಲಾಗುವುದು.
• ಕಳೆದ ವರ್ಷ 147 ಶಿಬಿರಗಳಲ್ಲಿ 11,052 ಮಂದಿ ಪಾನಮುಕ್ತರಾಗಿದ್ದಾರೆ.




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here