Friday 19th, April 2024
canara news

ಸಾಹಿತ್ಯ ಬಳಗ ಮುಂಬಯಿ ರಜತ ಮಹೋತ್ಸವದ ವೈಚಾರಿಕ ಕಾರ್ಯಕ್ರಮ

Published On : 18 Mar 2018   |  Reported By : Bernard Dcosta


ಮುಂಬಯಿ, ಮಾ.18: ಸಾಹಿತ್ಯ ಬಳಗ ಮುಂಬಯಿ,ಇದರ ರಜತ ಮಹೋತ್ಸವದ ಅಂಗವಾಗಿ ಇತ್ತೀಚೆಗೆ ಸಾಹಿತ್ಯ ಬಳಗ, ಬಿಎಸ್‍ಕೆಬಿ ಅಸೋಸಿಯೇಶನ್ ಮತ್ತು ಪೇಜಾವರ ಮಠ ಮುಂಬಯಿ ಶಾಖೆಯ ಸಹಯೋಗದಲ್ಲಿ ವೈಚಾರಿಕ ಕಾರ್ಯಕ್ರಮವು ಸಾಂತಕ್ರೂಜ್ ಪೂರ್ವದಲ್ಲಿನ ಪೇಜಾವರ ಮಠದಲ್ಲಿ ಜರಗಿತು.

ನಾಡಿನ ಖ್ಯಾತ ವಿದ್ವಾಂಸ ಲಕ್ಷ್ಮೀಶ ತೋಲ್ಪಾಡಿ ಅವರು ಶಂಕರಾಚಾರ್ಯ ಭಗವತ್ಪಾದ ವಿರಚಿತ ಸೌಂದರ್ಯ ಲಹರಿಯ ಮೊದಲನೇ ಭಾಗವಾದ ಆನಂದ ಲಹರಿಯ ಕುರಿತು ವೈಚಾರಿಕ ಹಿನ್ನೆಲೆಯಲ್ಲಿ ಒಟ್ಟು ಐದು ದಿನ ಸುದೀರ್ಘ ಉಪನ್ಯಾಸ ನೀಡಿದರು. ಆರನೇ ದಿನದಂದು ಆಸಕ್ತರ ಅಪೇಕ್ಷೆಯ ಮೇರೆಗೆ ಶ್ರೀ ಚಕ್ರದ ಕುರಿತು ಕ್ಸ-ಕಿರಣ ಬೀರಿದರು. ಆ ಮೂಲಕ ಇದೊಂದು ಹೊರನಾಡಿನಲ್ಲಿ ನಡೆದ ಅಪೂರ್ವ ಕಾರ್ಯಕ್ರಮ ಎಂದು ಬಿಂಬಿಸಲ್ಪಟ್ಟಿತು.

ಈ ಉಪನ್ಯಾಸದ ಅಂಗವಾಗಿ ವೈಚಾರಿಕ ವಿಷಯಗಳೊಂದಿಗೆ ಧಾರ್ಮಿಕ ಹಾಗೂ ಭಾವನಾತ್ಮಕವಾದ ವಿಷಯಗಳಿಗೆ ಒತ್ತುನೀಡಬೇಕೆಂಬ ಉದ್ದೇಶದಿಂದ ವಿದುಷಿಯರಾದ ಡಾ| ಶ್ಯಾಮಲಾ ಪ್ರಕಾಶ್, ಸಹನಾ ಭಾರದ್ವಾಜ್, ಮತ್ತು ರೋಹಿಣಿ ಮಧ್ಯಸ್ಥ ಅವರಿಂದ ಕುಮಾರವ್ಯಾಸ ಭಾರತದ ವಿರಾಟಪರ್ವದ ಗಮಕ ವಾಚನ ಹಾಗೂ ವ್ಯಾಖ್ಯಾನ, ಲಲಿತಾ ಭಜನಾ ಮಂಡಳಿಯಿಂದ ಪುರಂದರದಾಸರ ಮತ್ತು ಕನಕದಾಸರ ಕೃತಿಗಳು, ವಿಠಲ ಭಜನಾ ಮಂಡಳಿಯಿಂದ ಗೋಪಾಲದಾಸರು ಮತ್ತು ಜಗನ್ನಾಥದಾಸರ ಕೃತಿಗಳು, ಮಧ್ವೆಶ ಮತ್ತು ವಾಗ್ದೇವಿ ಭಜನಾ ಮಂಡಳಿಗಳಿಂದ ಮಹಿಪತಿದಾಸರು ಮತ್ತು ವಿಜಯದಾಸರ ಕೃತಿಗಳು, ಗೋಕುಲ ಭಜನಾ ಮಂಡಳಿಯಿಂದ ವಿಜಯದಾಸರು, ಶ್ರೀಪಾದರಾಯರು ಹೆಳವನಕಟ್ಟೆ ಗಿರಿಯಮ್ಮ, ಹರಪನಹಳ್ಳಿ ಭೀಮವ್ವ, ಕನಕ-ಪುರಂದರರು, ಗೋಪಾಲದಾಸರು ಮುಂತಾದ ದಾಸರು ರಚಿಸಿದ ದೇವಿಸ್ತುತಿಗಳು ಹೀಗೆ ದಾಸವರೇಣ್ಯರ ವೈವಿಧ್ಯಮಯ ಹಾಡುಗಳನ್ನು ಪ್ರಸ್ತುತಪಡಿಸಿದರು.

ಕೊನೆಯದಿನ ವಿದ್ವಾನ್ ಎಂ.ಆರ್ ರಾಮಮೂರ್ತಿ ಮತ್ತು ವಿದ್ವಾನ್ ರಾಜಾರಾಮ ಮೂರ್ತಿ ಅವರಿಂದ ಕುಮಾರವ್ಯಾಸ ಭಾರತದ ಉದ್ಯೋಗಪರ್ವ ಗಮಕ ವಾಚನ ಹಾಗೂ ವ್ಯಾಖ್ಯಾನ ನಡೆಯಿತು.

ಸಮಾರೋಪ ಸಮಾರಂಭದಲ್ಲಿ ಸೌಂದರ್ಯ ಲಹರಿಯ ಮೂಲಕ ಆನಂದ ಲಹರಿಯನ್ನಿತ್ತ ವಿದ್ವಾನ್ ಲಕ್ಷೀಶ ತೊಲ್ಪಾಡಿಯವರಿಗೆ ಅತಿಥಿü ಗಣ್ಯರು ಗೌರವಾರ್ಪಣೆ ಗೈದರು. ಒಟ್ಟಿನಲ್ಲಿ ಆರು ದಿವಸಗಳ ಒಂದು ಧಾರ್ಮಿಕ, ಸಾಂಸ್ಕೃತಿಕ ಮತ್ತು ವೈಜ್ಞಾನಿಕ ಕಾರ್ಯಕ್ರಮದಲ್ಲಿ ಜ್ಞಾನಸತ್ರವು ನಡೆದಿತ್ತು. ಬಹಳ ಕ್ಲಿಷ್ಟವಾದ ವಿಷಯವಾದ್ದರಿಂದ ಆಸಕ್ತರು ಸಕ್ರಿಯವಾಗಿ ಭಾಗವಹಿಸಿದ್ದರು.

 

 

 




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here