Wednesday 14th, May 2025
canara news

ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್ - ಗೋಕುಲ, ಸಾಯನ್ ವತಿಯಿಂದ ಆಶ್ರಯದಲ್ಲಿ ಜಗದ್ಗುರು ಆದಿ ಶಂಕರಾಚಾರ್ಯರ ಜಯಂತೋತ್ಸವ ಆಚರಣೆ

Published On : 24 Apr 2018   |  Reported By : Rons Bantwal


ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್ , ಗೋಕುಲ ಸಯಾನ್, ಜಗದ್ಗುರು ಶ್ರೀ ಆದಿ ಶಂಕರಾಚಾರ್ಯರ ಜಯಂತ್ಯುತ್ಸವವನ್ನು ಬಿ. ಎಸ್ ಕೆ ಬಿ ಎಸೋಸಿಯೇಶನ್ ಮತ್ತು ಶ್ರೀ ಸುಬ್ರಹ್ಮಣ್ಯ ಸೇವಾ ಸಂಘದ ಸಹಭಾಗಿತ್ವದೊಂದಿಗೆ ರವಿವಾರ ದಿನಾಂಕ 22. 4. 2018 ರಂದು ಆಶ್ರಯ, ನೆರೂಲ್ ನಲ್ಲಿ ಸಂಭ್ರಮದಿಂದ ಆಚರಿಸಿತು.

ಶ್ರೀಕೃಷ್ಣ 'ಬಾಲಾಲಯ' ದಲ್ಲಿ ಬೆಳಗಿನ ನಿತ್ಯಪೂಜೆಯ ನಂತರ ಶ್ರೀ ಶಂಕರ ಭಗವತ್ಪಾದರ ಭಾವಚಿತ್ರವನ್ನು ಅಲಂಕೃತ ಮಂಟಪದಲ್ಲಿ ಪ್ರತಿಷ್ಟಾಪಿಸಲಾಯಿತು. ಉಡುಪಿಯಿಂದ ಆಗಮಿಸಿದ . ವೇದಮೂರ್ತಿಗಳಾದ ಕೃಷ್ಣರಾಜ್ ಮತ್ತು ಪ್ರತಾಪ್ ರಾವ್ ರವರ ಪೌರೋಹಿತ್ವದಲ್ಲಿ ಪ್ರಾರ್ಥನೆ, ಪುಣ್ಯಾಹವಾಚನ, ಪಂಚಗವ್ಯ, ಗಣಹೋಮ, ಮಹಾಲಕ್ಷ್ಮೀ ಹವನ, ರುದ್ರಾಭಿಷೇಕ, ಶಂಕರಾಚಾರ್ಯ ನಾಮಾರ್ಚನೆ, ಪೂಜೆ ಮುಂತಾದ ಧಾರ್ಮಿಕ ಕೈಂಕರ್ಯಗಳು, ನಾಗೇಶ್ ರಾವ್ ರವರ ಸಹಯೋಗದಿಂದ ಸಾಂಗವಾಗಿ ನೆರವೇರಿತು. ಧಾರ್ಮಿಕ ವಿಧಿಗಳ ಕರ್ತೃಗಳಾಗಿ ಪಿ.ಸಿ.ಎನ್ ರಾವ್, ವಾಣಿ ರಾವ್ ದಂಪತಿ, ಯು. ಆರ್ ರಾವ್ , ಇಂದ್ರಾಣಿ ರಾವ್ ದಂಪತಿ, ರತ್ನಾಕರ್ ರಾವ್ , ರಮಾದೇವಿ ದಂಪತಿ ಮತ್ತು ಶಿರಿಶ್ ರಾವ್, ಅನಿತಾ ರಾವ್ ದಂಪತಿ ಪಾಲ್ಗೊಂಡಿದ್ದರು. ಗೋಕುಲ ಕಲಾವೃಂದ ಭಜನಾ ಮಂಡಳಿಯಿಂದ ಆದಿ ಶಂಕರಾಚಾರ್ಯ ವಿರಚಿತ ಸ್ತೋತ್ರಗಳ ಪಠನೆ ನೆರವೇರಿತು.

 ಹವನದ ಪೂರ್ಣಾಹುತಿಯಾದ ನಂತರ ನಡೆದ ಅಷ್ಟಾವಧಾನ ಸೇವೆಯಲ್ಲಿ ವೇದ ಘೋಷ, ಸಂಗೀತ, ನೃತ್ಯ ಸರ್ವ ವಾದ್ಯ ಸೇವೆ ಜರಗಿತು. ಕುಮಾರಿ ಶ್ರಾವಣಿ ಹೆರ್ಲೆ ನೃತ್ಯ ಸೇವೆ ಸಲ್ಲಿಸಿದರು. ಈ ಸಂದರ್ಭದಲ್ಲಿ ವೇ. ಮು. ಪ್ರತಾಪ್ ರಾವ್ ರವರು ತಮ್ಮ ಉಪನ್ಯಾಸದಲ್ಲಿ 'ಹದಿಮೂರು ಶತಮಾನಗಳ ಹಿಂದೆ ಸಾಕ್ಷಾತ್ ಪರಶಿವನ ಅವತಾರ ಪುರುಷನಾಗಿ ಶ್ರೀ ಶಂಕರರು ಜನಿಸಿ ಅದ್ವೈತ ಸಿದ್ಧಾಂತದ ಪ್ರತಿಪಾದಕರೆನಿಸಿ, ತನ್ನ ಕೇವಲ 32 ವರ್ಷಗಳ ಜೀವಿತ ಕಾಲದಲ್ಲಿ ಸನಾತನ ಧರ್ಮ ಸಂರಕ್ಷಣೆಗಾಗಿ ಆಸೇತು ಹಿಮಾಚಲ ಪರ್ಯಂತ ಪರ್ಯಟನೆ ಮಾಡಿ ನಾಲ್ಕು ದಿಶೆಗಳಲ್ಲಿ ನಾಲ್ಕು ಮಠಗಳನ್ನು ಸ್ಥಾಪಿಸಿದ್ದಾರೆ. ಶಿವ, ವಿಷ್ಣು, ಗಣಪತಿ, ದೇವಿ, ಸುಬ್ರಹ್ಮಣ್ಯ, ಸರಸ್ವತಿ, ಹೀಗೆ ಎಲ್ಲಾ ದೇವರ ಮೇಲೆ ಸರಳ ಸುಂದರ ಸ್ತೋತ್ರಗಳನ್ನು ರಚಿಸಿ ಅವುಗಳನ್ನು ನಿತ್ಯವೂ ಪಠಿಸುವಂತಹ ಭಕ್ತಿ ಮಾರ್ಗವನ್ನು ಆಚಾರ್ಯರು ನಮಗೆ ತೋರಿಸಿಕೊಟ್ಟಿದ್ದಾರೆ. ಆಚಾರ್ಯರ ಮಾರ್ಗದರ್ಶನ ನಮಗೆ ದಾರಿದೀಪವಾಗಲಿ' ಎಂದರು. ತೀರ್ಥ-ಪ್ರಸಾದ ವಿತರಣೆ, ಪ್ರಸಾದ ಭೋಜನದೊಂದಿಗೆ ಕಾರ್ಯಕ್ರಮ ಸಂಪನ್ನವಾಯಿತು. ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್, ಬಿ. ಎಸ್. ಕೆ. ಬಿ. ಎಸೋಸಿಯೇಶನ್, ಸುಬ್ರಹ್ಮಣ್ಯ ಸೇವಾ ಸಂಘದ ಪದಾಧಿಕಾರಿಗಳು ಸೇರಿದಂತೆ ನೂರಾರು ಆಸ್ತಿಕರು ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here