Wednesday 14th, May 2025
canara news

ದ.ಕ. ಜಿಲ್ಲೆಯ ಕಲ್ಲಡ್ಕ ಶಾಲೆಯಲ್ಲಿ ಬಿಸಿಯೂಟ, ಚರ್ಚೆಗೆ ಗ್ರಾಸವಾದ ಪ್ರಭಾಕರ ಭಟ್ ನಡೆ

Published On : 05 Jun 2018   |  Reported By : canaranews network


ಮಂಗಳೂರು: ದ.ಕ. ಜಿಲ್ಲೆಯ ಬಂಟ್ವಾಳ ತಾಲೂಕಿನ ಕಲ್ಲಡ್ಕ ಶಾಲೆಯ ಬಿಸಿಯೂಟ ಪ್ರಕರಣ ಈಗ ಮತ್ತೇ ಸುದ್ದಿಯಲ್ಲಿದೆ. ಆರೆಸ್ಸೆಸ್ ಮುಖಂಡ ಡಾ. ಕಲ್ಲಡ್ಕ ಪ್ರಭಾಕರ ಭಟ್ ಮುಂದಾಳತ್ವದ ಎರಡು ಶಾಲೆಗಳ ಅನ್ನ ಕಸಿದ ವಿಚಾರ ಈ ಹಿಂದೆ ದೊಡ್ಡ ವಿವಾದಕ್ಕೆ ಕಾರಣವಾಗಿತ್ತು.

ಆದರೆ, ಈಗ ಅದೇ ಶಾಲೆಗಳ ಆಡಳಿತ ಮಂಡಳಿ ಮಧ್ಯಾಹ್ನದ ಬಿಸಿಯೂಟ 'ಅಕ್ಷರ ದಾಸೋಹ' ನೀಡುವಂತೆ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಿರುವುದು ಚರ್ಚೆಗೆ ಗ್ರಾಸವಾಗಿದೆ.ಶ್ರೀ ಕ್ಷೇತ್ರ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಿಂದ ಬರುತ್ತಿದ್ದ ಹಣದ ರೂಪದ ಅನುದಾನಕ್ಕೆ ಈ ಹಿಂದಿನ ಸರಕಾರದಲ್ಲಿ ಸಚಿವರಾಗಿದ್ದ ಬಿ. ರಮಾನಾಥ ರೈ ತಡೆ ಒಡ್ಡಿದ್ದರು.

ಬದಲಿಗೆ ಬಿಸಿಯೂಟ ನೀಡುವ ಪ್ರಸ್ತಾಪ ಇಟ್ಟಿದ್ದರು. ಆದರೆ, ಶಾಲೆಯ ಆಡಳಿತ ಮಂಡಳಿ ಬಿಸಿಯೂಟದ ಪ್ರಸ್ತಾಪ ತಿರಸ್ಕರಿಸಿ ಸಾವಿರಾರು ಶಾಲಾ ಮಕ್ಕಳು ರಸ್ತೆಗಿಳಿದು ಸಚಿವ ರಮಾನಾಥ ರೈ ವಿರುದ್ಧ ಭಾರೀ ಪ್ರತಿಭಟನೆ ನಡೆಸಿದ್ದರು.ಇದಲ್ಲದೆ ಶಾಲೆಯ ಪರವಾಗಿ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದಲ್ಲಿ ಭಿಕ್ಷಾಂದೇಹಿ ಅಭಿಯಾನವನ್ನೂ ಆರಂಭಿಸಲಾಗಿತ್ತು. ಇದಕ್ಕೆ ಸಾವಿರಾರು ಜನರು ಸ್ಪಂದಿಸುವ ಮೂಲಕ ಲಕ್ಷಾಂತರ ರೂಪಾಯಿ ಸಂಗ್ರಹಿಸಲಾಗಿತ್ತು. ಸಂಸದೆ ಶೋಭಾ ಕರಂದ್ಲಾಜೆ ನೇತೃತ್ವದಲ್ಲಿ ಅಕ್ಕಿ ಭಿಕ್ಷೆಯ ಮೂಲಕವೂ ಭಾರೀ ಪ್ರಮಾಣದಲ್ಲಿ ಅಕ್ಕಿ ಸಂಗ್ರಹಗೊಂಡಿತ್ತು.

ಗಣಿಧಣಿ ಜನಾರ್ದನ ರೆಡ್ಡಿ 25 ಲಕ್ಷ ರೂಪಾಯಿ ದೇಣಿಗೆ ನೀಡಿ ಸುದ್ದಿಯಾಗಿದ್ದರು. ಚುನಾವಣೆ ಸಂದರ್ಭದಲ್ಲಿ ಮಕ್ಕಳ ಊಟ ಕಸಿದ ವಿಚಾರವನ್ನು ದಕ್ಷಿಣ ಕನ್ನಡ ಹಾಗು ಉಡುಪಿ ಜಿಲ್ಲೆಯಲ್ಲಿ ಬಿಜೆಪಿ ಕಾಂಗ್ರೆಸ್ ವಿರುದ್ಧ ಪ್ರಮುಖ ಅಸ್ತ್ರವಾಗಿಸಿ ಬಳಸಿತ್ತು. ಚುನಾವಣೆಯಲ್ಲಿ ಸಚಿವ ರಮಾನಾಥ್ ರೈ ಸೋಲಿಗೆ ಇದೂ ಪ್ರಮುಖ ಕಾರಣ ಎಂದು ಹೇಳಲಾಗುತ್ತದೆ.ಬಿಸಿ ಊಟ ನಿಲ್ಲಿಸಿ ಬಳಿಕ ನಡೆದ ಪ್ರತಿಭಟನೆ, ಆರೋಪ ಪ್ರತ್ಯಾರೋಪ , ವಾಗ್ದಾಳಿಗಳ ನಂತರ ಈಗ ರಾಜ್ಯ ಸರಕಾರ ಬದಲಾಗುತ್ತಿದ್ದಂತೆ ಅದೇ ಶಾಲಾಡಳಿತ ಮಂಡಳಿ ಬಿಸಿಯೂಟಕ್ಕಾಗಿ ಶಿಕ್ಷಣ ಇಲಾಖೆಗೆ ಮನವಿ ಸಲ್ಲಿಸಿದೆ. ಈ ಮನವಿಗೆ ರಾಜ್ಯ ಸರಕಾರ ಒಪ್ಪಿಗೆಯನ್ನೂ ಸೂಚಿಸಿದೆ.

ಈ ಹಿನ್ನೆಲೆಯಲ್ಲಿ ಎರಡೂ ಶಾಲೆಗಳಿಗೆ ಬಿಸಿಯೂಟದ ಅಕ್ಕಿಯೂ ಪೂರೈಕೆಯಾಗಿದೆ.ಬಿಸಿಯೂಟದ ಅನುದಾನ ನಿಲ್ಲಿಸಿದ್ದ ಅಂದಿನ ರಾಜ್ಯ ಸರಕಾರದ ವಿರುದ್ಧ ತೊಡೆ ತಟ್ಟಿದ್ದ ಶಾಲೆಯ ಆಡಳಿತ ಮಂಡಳಿ ಹಾಗೂ ಆರ್.ಎಸ್.ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಈಗ ಬಿಸಿಯೂಟಕ್ಕಾಗಿ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಿರುವುದು ಚರ್ಚೆಗೆ ಗ್ರಾಸವಾಗಿದೆ.ಮಾತ್ರವಲ್ಲದೇ, ಬಿಸಿಯೂಟಕ್ಕಾಗಿ ಸಂಗ್ರಹಿಸಲಾಗಿದ್ದ ಲಕ್ಷಾಂತರ ರೂಪಾಯಿ ಏನಾಯಿತು? ಸಂಗ್ರಹಿಸಲಾದ ಅಕ್ಕಿ ಏನಾಯಿತು? ಎಂಬ ಪ್ರಶ್ನೆ ಮೂಡಲಾರಂಭಿಸಿದ್ದು ಚರ್ಚೆಗೆ ಕಾರಣವಾಗಿದೆ.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here