Wednesday 14th, May 2025
canara news

ಯುವತಿಯೆಂದು ನಂಬಿಸಿ ಸ್ನೇಹ ಸಂಪಾದನೆ- ಅಕ್ರಮವಾಗಿ ಬಂಧಿಸಿ ಅತ್ಯಾಚಾರ-ಆರೋಪ ಸಾಬೀತು

Published On : 20 Jun 2018   |  Reported By : canaranews network


ಮಂಗಳೂರು: ಕಾಲೇಜು ವಿದ್ಯಾರ್ಥಿನಿಯೊಬ್ಬಳನ್ನು ವಾಟ್ಸಪ್ನಲ್ಲಿ ಪರಿಚಯಿಸಿಕೊಂಡು ಬಳಿಕ ಅತ್ಯಾಚಾರಗೈದ ಅಪರಾಧವು ಮಂಗಳೂರಿನ 6ನೆ ಜಿಲ್ಲಾ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಮಂಗಳವಾರ ಸಾಬೀತಾಗಿದೆ.ನ್ಯಾಯಾಧೀಶರು ಶಿಕ್ಷೆಯ ಪ್ರಮಾಣ ಬುಧವಾರ ಪ್ರಕಟಿಸುವ ಸಾಧ್ಯತೆ ಇದೆ. ಬಂಟ್ವಾಳ ತಾಲೂಕಿನ ಪಾಂಡವರಕಲ್ಲು ಕೂಮಿನಡ್ಕ ನಿವಾಸಿ ವಿವಾಹಿತ ಇರ್ಷಾದ್ (27) ಅಪರಾಧಿ ಎಂದು ತಿಳಿದುಬಂದಿದೆ. ಮೂರು ವರ್ಷಗಳ ಹಿಂದೆ ಈ ಪ್ರಕರಣ ನಡೆದಿತ್ತು.

ಘಟನೆಯ ವಿವರ :
ಮಂಗಳೂರಿನ ಕಾಲೇಜುವೊಂದರಲ್ಲಿ ಓದುತ್ತಿದ್ದ 18 ವರ್ಷದ ವಿದ್ಯಾರ್ಥಿನಿಯನ್ನು ಆಕೆಯ ಗೆಳತಿಯೊಬ್ಬಳು ವಾಟ್ಸಪ್ ಗ್ರೂಪ್ಗೆ ಸೇರ್ಪಡೆ ಮಾಡಿದ್ದಳು. ಅದೇ ಗ್ರೂಪ್ನಲ್ಲಿ ವಿದ್ಯಾರ್ಥಿನಿಗೆ ರಫಾ ಎಂಬ ಹೆಸರಿನ ವಿದ್ಯಾರ್ಥಿನಿಯ ಪರಿಚಯವಾಗಿತ್ತು. ವಿದ್ಯಾರ್ಥಿನಿ ವಾಟ್ಸಪ್ ಗ್ರೂಪ್ನಿಂದ ಹೊರಬಂದಿದ್ದರೂ ರಫಾ ವಾಟ್ಸಪ್ನಲ್ಲಿ ಮೆಸೇಜ್ ಮಾಡುತ್ತಲೇ ಇರುತ್ತಿದ್ದಳು. ವಿದ್ಯಾರ್ಥಿನಿ ಕೂಡಾ ಆ ಮೆಸೇಜ್ ಪ್ರತಿಕ್ರಿಯೆ ನೀಡುತ್ತಿದ್ದಳು. ದಿನ ಕಳೆದಂತೆ ವಿದ್ಯಾರ್ಥಿನಿಯ ಹುಟ್ಟು ಹಬ್ಬಕ್ಕೆ ರಫಾ ವಿಷ್ ಮಾಡುತ್ತಾಳೆ, ಮಾತ್ರವಲ್ಲದೆ ತನ್ನ ಸಂಬಂಧಿಕರೊಬ್ಬನ ಬಳಿ ಹೂಗುಚ್ಛ ಕಳುಹಿಸಿಕೊಡುವ ಬಗ್ಗೆ ತಿಳಿಸುತ್ತಾಳೆ. ಅದರಂತೆಯೇ ಕಾಲೇಜಿಗೆ ಬಂದು ಇರ್ಷಾದ್ ವಿದ್ಯಾರ್ಥಿನಿಗೆ ಹೂಗುಚ್ಛ ನೀಡಿ ವಿಷ್ ಮಾಡಿ ಹಿಂದಿರುಗುತ್ತಾನೆ. ಕೆಲವು ದಿನಗಳ ಬಳಿಕ ವಿದ್ಯಾರ್ಥಿನಿ ತನ್ನ ಊರಿನಿಂದ ಕಾಲೇಜಿಗೆ ತೆರಳಲು ವಿಳಂಬ ಆಗುತ್ತಿದ್ದು, ತರಗತಿಗೆ ಹಾಜರಾಗಲು ಲೇಟ್ ಆಗುವ ಬಗ್ಗೆ ಹೇಳಿಕೊಳ್ಳುತ್ತಾಳೆ. ಅದಕ್ಕೆ ರಫಾ ಪ್ರತಿಕ್ರಿಯಿಸಿ ನನಗೆ ನಾಳೆ ಮಂಗಳೂರಿಗೆ ಹೋಗಲಿಕ್ಕಿದ್ದು, ನಿನ್ನನ್ನೂ ಜೊತೆಯಲ್ಲಿ ಕರೆದೊಯ್ಯುವುದಾಗಿ ತಿಳಿಸುತ್ತಾಳೆ. ಇದನ್ನು ನಂಬಿ ವಿದ್ಯಾರ್ಥಿನಿ 2015ರ ಜೂ. 20ರಂದು ಬೆಳಗ್ಗೆ 7:30ಕ್ಕೆ ಕಾರಿಗಾಗಿ ಕಾಯುತ್ತಿರುತ್ತಾಳೆ. ಆಗ ಕಾರೊಂದು ಬರುತ್ತದೆ ಆದ್ರೆ ಇದರಲ್ಲಿ ಸ್ನೇಹಿತೆ ರಫಾ ಇರದೆ ಇರ್ಷಾದ್ ಚಾಲನೆ ಮಾಡುತ್ತಿರುತ್ತಾನೆ.

ಆಗ ರಫಾ ಬಗ್ಗೆ ಕೇಳಿದಾಗ ಆಕೆ ಮುಂದೆ ಕಾರಿಗೆ ಹತ್ತುತ್ತಾಳೆ ಎಂದು ಇರ್ಷಾದ್ ಉತ್ತರಿಸುತ್ತಾನೆ.ಇರ್ಷಾದ್ನ ಮಾತನ್ನು ನಂಬಿದ ವಿದ್ಯಾರ್ಥಿನಿ ಕಾರನ್ನು ಹತ್ತುತ್ತಾಳೆ. ಬಳಿಕ ಇರ್ಷಾದ್ ವಿದ್ಯಾರ್ಥಿನಿಯನ್ನು ಹೆದರಿಸಿ ಅಪಹರಣ ಮಾಡಿ ಧಾರವಾಡಕ್ಕೆ ಕರೆದೊಯ್ಯುತ್ತಾನೆ. ಇತ್ತ ಸಂಜೆಯಾದರೂ ವಿದ್ಯಾರ್ಥಿನಿ ಮನೆಗೆ ತಲುಪದಿರುವುದನ್ನು ಗಮನಿಸಿದ ಪೋಷಕರು ಆತಂಕಗೊಂಡು ಬಂಟ್ವಾಳ ಠಾಣೆಯಲ್ಲಿ ದೂರು ನೀಡುತ್ತಾರೆ. ಇದೇ ಸಂದರ್ಭದಲ್ಲಿ ಇರ್ಷಾದ್ ಕುಟುಂಬ ಕೂಡ ಇರ್ಷಾದ್ ನಾಪತ್ತೆಯಾದ ಬಗ್ಗೆ ಪ್ರತ್ಯೇಕ ದೂರು ದಾಖಲಿಸುತ್ತದೆ.ಅಪಹರಣದ ನಂತರ ಧಾರವಾಡಕ್ಕೆ ಕರೆದೊಯ್ದು ಇರ್ಷಾದ್ ಅಲ್ಲಿ ಲಾಡ್ಜ್ನಲ್ಲಿ ಕೊಠಡಿಯನ್ನು ಪಡೆದು ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗುತ್ತಾನೆ. ಮುಂದಿನ 5 ದಿನಗಳ ಕಾಲ ಆಕೆಯನ್ನು ಗದಗ, ಹುಬ್ಬಳ್ಳಿಗೆ ಕರೆದೊಯ್ದು ಅಲ್ಲೂ ಅತ್ಯಾಚಾರ ಮಾಡುತ್ತಾನೆ . ಈ ಸಂದರ್ಭ ರಫಾ ಹೆಸರಿನಲ್ಲಿ ತಾನೇ ವಾಟ್ಸ್ಆ್ಯಪ್ಗೆ ಸಂದೇಶ ಕಳುಹಿಸುತ್ತಿದ್ದದ್ದು ಎಂದು ಸತ್ಯ ಬಹಿರಂಗಪಡಿಸಿರುತ್ತಾನೆ. ನಾಪತ್ತೆ ಪ್ರಕರಣವನ್ನು ಬೆಂಬತ್ತಿದ್ದ ಪೊಲೀಸರು ಜೂ. 25ರಂದು ಇಬ್ಬರನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗುತ್ತಾರೆ.ವಿದ್ಯಾರ್ಥಿನಿಯನ್ನು ಮಂಗಳೂರಿಗೆ ಕರೆದುಕೊಂಡು ಬಂದ ಪೊಲೀಸರು ನಗರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲು ಮಾಡಿ ಪರೀಕ್ಷೆಗೊಳಪಡಿಸುತ್ತಾರೆ. ಅಲ್ಲಿ ಅತ್ಯಾಚಾರ ಮಾಡಿರುವುದು ಸಾಬೀತಾಗಿದೆ. ವಿದ್ಯಾರ್ಥಿನಿ ಆಸ್ಪತ್ರೆಯಲ್ಲಿರುವಾಗ ಆರೋಪಿ ಇರ್ಷಾದ್ಗೆ ಬೇರೆ ಮದುವೆಯಾಗಿರುವ ಬಗ್ಗೆ ವಿಷಯ ತಿಳಿಯುತ್ತದೆ. ಇದರಿಂದ ವಿದ್ಯಾರ್ಥಿನಿ ಆಘಾತಕ್ಕೊಳಗಾಗುತ್ತಾಳೆ. ಇರ್ಷಾದ್ ವಿರುದ್ಧ ಬಂಟ್ವಾಳ ಠಾಣೆಯಲ್ಲಿ ದೂರು ನೀಡಿದ್ದು, ಆತನ ಮೇಲೆ ಅಪಹರಣ (366), ಅತ್ಯಾಚಾರ (376), ಅಕ್ರಮ ಬಂಧನ (342), ಬೆದರಿಕೆ (506) ಪ್ರಕರಣ ದಾಖಲಾಗುತ್ತದೆ.ಬಂಟ್ವಾಳ ಠಾಣೆಯ ಅಂದಿನ ಇನ್ಸ್ಪೆಕ್ಟರ್ ಬೆಳ್ಳಿಯಪ್ಪ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು. ಪ್ರಕರಣವನ್ನು ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಡಿ.ಟಿ. ಪುಟ್ಟರಂಗಸ್ವಾಮಿ ಅವರು ಎಲ್ಲ ಆರೋಪಗಳನ್ನು ಸಾಬೀತುಪಡಿಸಿ ತೀರ್ಪು ನೀಡಿದ್ದಾರೆ. ಈ ಪ್ರಕರಣದಲ್ಲಿ ಲಾಡ್ಜ್ ದಾಖಲೆ ಮತ್ತು ಸಿಬ್ಬಂದಿ ಸಾಕ್ಷಿ, ಡಾಕ್ಟರ್ ವರದಿಗಳು ಸೇರಿದಂತೆ ಒಟ್ಟು 22 ಸಾಕ್ಷಿಯನ್ನಾಗಿ ಪರಿಗಣಿಸಲಾಗಿದೆ. ಸರಕಾರದ ಪರವಾಗಿ ಜುಡಿತ್ ಒ ಎಂ. ಕ್ರಾಸ್ತಾ ವಾದಿಸಿದ್ದರು.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here