ಬಸ್ರೂರು ತುಳುನಾಡಿನ ಮತ್ತು ಕರ್ನಾಟಕದ ನಾಗರೀಕತೆಯ ಪ್ರಧಾನ ಮೈಲುಗಲ್ಲಾಗಬೇಕಾದ ಒಂದು ಪ್ರದೇಶ. ಪ್ರಾಚಿನ ತುಳುನಾಡಿನ ಬಂದರು ವಾಣಿಜ್ಯ ಪ್ರದೇಶವಾದ ಬಸ್ರೂರು ಸುಮಾರು 300ಕ್ಕಿಂತಲೂ ಹೆಚ್ಚು ದೇಗುಲಗಳ ನೆಲೆವೀಡಾಗಿತ್ತು. ಇದೀಗ ಸುತ್ತಲೂ ವಾರಾಹಿನದಿಯನ್ನು ಅಪ್ಪಿಕೊಂಡಿರುವ ಈ ಪ್ರದೇಶ ಹಲವು ಸಂಸ್ಕøತಿಗಳನ್ನು ತನ್ನೊಳಗೆ ಬಚ್ಚಿಟ್ಟುಕೊಂಡು ಮೂಕವೇದನೆಯನ್ನು ಅನುಭವಿಸುತ್ತಿದೆ. ಸರಕಾರ ಮತ್ತು ಪುರಾತತ್ವ ಇಲಾಖೆಯ ಮತ್ತು ಅಕಾಡೆಮಿಗಳ ನಿರ್ಲಕ್ಷ್ಯದಿಂದ ತನ್ನ ಮಡಿಲೊಳಗಿದ್ದ ಇತಿಹಾಸವನ್ನು ಸಾರುವ ಸ್ಮಾರಕಗಳು ಮಣ್ಣುಪಾಲಾಗಿವೆ. ಶಾಸನಗಳು ಬಟ್ಟೆ ಒಗೆಯುವ ಕಲ್ಲುಗಳಾಗಿ, ಮೆಟ್ಟಲುಗಳಾಗಿ ನಾಮಾವಶೇಷಗೊಂಡಿವೆ. ಅಲ್ಲದೆ ತುಳುನಾಡಿನ ಹಾಗೂ ಭಾಷೆಯ ಪ್ರತೀಕವಾದ ತುಳುವೇಶ್ವರನ ದೇಗುಲವು ಶಿಥಿಲಗೊಂಡರೂ, ಪ್ರಕೃತಿ ಶಕ್ತಿಯಿಂದ ಆಲದಮರದಿಂದಾವೃತವಾದ ಗರ್ಭಗುಡಿಯಲ್ಲಿದ್ದು ತನ್ನ ಶಾಪಮೋಕ್ಷಕ್ಕಾಗಿ ಕಾಯುತ್ತಿದ್ದಾನೆ.
ಇಂತಹ ಭವ್ಯ ಪರಂಪರೆಯ ತುಳುನಾಡಿನ ಈ ಪ್ರದೇಶವನ್ನು ಜಗತ್ತಿಗೆ ಸಾರಿ ಹೇಳಬೇಕೆಂಬ ಉದ್ದೇಶದಿಂದ ತುಳುವೆರೆ ಆಯನೊ ಕೂಟವು ನಡೆಸುವ ತುಳುನಾಡೋಚ್ಚಯ ಕಾರ್ಯಕ್ರಮವನ್ನು ಬಸ್ರೂರಿನಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಈ ಬಗ್ಗೆ ತುಳುವೆರೆ ಆಯನೊ ಕೂಟ ಕುಡ್ಲ ಮತ್ತು ಕಾಸರಗೋಡಿನ ಸದಸ್ಯರು ಬಸ್ರೂರು ಅಪ್ಪಣ್ಣ ಹೆಗ್ಡೆ ಮತ್ತು ಡಾ.ವಾದಿರಾಜ್ ಭಟ್ಟ್ ರವರಲ್ಲಿ ಚರ್ಚಿಸಿ ಅವರ ಸಹಾಯಸಹಕಾರವನ್ನು ಕೋರಿಕೊಂಡರು. ಈ ಸಂದರ್ಭದಲ್ಲಿ ಅಪ್ಪಣ್ಣ ಹೆಗ್ಡೆಯವರು ಮಾತನಾಡಿ “ಈ ಮೊದಲು ಹಲವುಬಾರಿ ತುಳು ಸಮ್ಮೇಳನವನ್ನು ಆಯೋಜಿಸಲು ಹೊರಟರೂ ಅದು ಕೂಡಿಬರಲಿಲ್ಲ, ಈಗ ಕಾಲಕೂಡಿ ಬಂದಿದೆ ಎಂದು ಅನಿಸುತ್ತಿದೆ. ಸಮಸ್ತರನ್ನೂ ಒಟ್ಟು ಸೇರಿಸಿ, ತುಳುನಾಡಿನಲ್ಲಿ ಜಾತಿ-ಮತ-ಭಾಷಾ ಸೌಹಾರ್ದತೆಯನ್ನು ಸಾರುವ ತುಳುನಾಡೋಚ್ಚಯ-2018ನ್ನು ಬಸ್ರೂರಿನಲ್ಲಿ ನಡೆಸುವುದು ತುಂಬಾ ಹೆಮ್ಮೆಯ ವಿಷಯ” ಎಂದರು.
ತುಳುವೆರೆ ಆಯನೊ ಕೂಟ ಕುಡ್ಲ ಇದರ ಪದಾಧಿಕಾರಿಗಳಾದ ದಯಾನಂದ ಕತ್ತಲ್‍ಸಾರ್, ಡಾ. ರಾಜೇಶ ಆಳ್ವ, ಆಶಾ ಶೆಟ್ಟಿ ಅತ್ತಾವರ, ಹರೀಶ್ ಶೆಟ್ಟಿ ಪಣಿಯೂರು, ಪ್ರಸಾದ್.ಯಸ್ ಕೊಂಚಾಡಿ, ನಾಗಾರಾಜ್ ಕುದ್ರೊಳಿ, ಭೂಷಣ್ ಕುಲಾಲ್, ರಕ್ಷಿತ್ ಕುಡುಪು, ರಾಧಿಕ ವಾಮಂಜೂರು, ಚೇತನ್ ಕುಮಾರ್ ಕುಲಶೇಖರ, ಮೊದಲಾದವರು ಭೇಟಿನೀಡಿದರು.