ಮಂಗಳೂರು: ಕಾಂಗ್ರೆಸ್ ನ ಹಿರಿಯ ನಾಯಕ, ನೇರ ನಿಷ್ಠೂರ ನುಡಿಯ ಜನಾರ್ಧನ ಪೂಜಾರಿ ಸದ್ದಿಲ್ಲದೇ ರಾಜಕೀಯ ನಿವೃತ್ತಿಯ ಬಗ್ಗೆ ಯೋಚಿಸುತ್ತಿದ್ದಾರೆಯೇ? ಎಂಬ ಅನುಮಾನ ಕರಾವಳಿಯ ರಾಜಕೀಯ ವಲಯದಲ್ಲಿ ಮೂಡಲಾರಂಭಿಸಿದೆ.ಈ ಕುರಿತು ಗಂಭೀರ ಚರ್ಚೆಗಳು ಕೂಡ ಆರಂಭವಾಗಿವೆ.
ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಅಬ್ಬರಿಸಿದ್ದ ಜನಾರ್ಧನ ಪೂಜಾರಿ ಈಗ ಸೈಲೆಂಟ್ ಆಗಿದ್ದಾರೆ.ಈ ಹಿಂದಿನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಎಡವಿದಾಗಲೆಲ್ಲಾ ಪೂಜಾರಿ ಸಿದ್ದರಾಮಯ್ಯ ವಿರುದ್ಧ ಮಾತಿನ ಚಾಟಿ ಏಟು ಬೀಸುತ್ತಿದ್ದರು. ಇದು ಕಾಂಗ್ರೆಸ್ ಮುಖಂಡರಿಗೆ ಇರಿಸುಮುರಿಸು ಉಂಟುಮಾಡಿತ್ತು.
ತನ್ನ ತಪ್ಪುಗಳನ್ನು ತಿದ್ದಿಕೊಳ್ಳದಿದ್ದರೆ ಚುನಾವಣೆಯಲ್ಲಿ ಕಾಂಗ್ರೆಸ್ ಜಯಗಳಿಸಲು ಸಾಧ್ಯವಿಲ್ಲ ಎಂದು ಭವಿಷ್ಯ ನುಡಿದ್ದ ಪೂಜಾರಿ ಅವರ ಮಾತು ಸತ್ಯವಾಗಿದೆ . ತಮ್ಮ ಮಾತಿಗೆ ಬೆಲೆ ಕೊಡದೇ ರಾಜ್ಯ ಕಾಂಗ್ರೆಸ್ ಮುಖಂಡರು ಅವಮಾನಿಸಿದ್ದಾರೆ ಎನ್ನುವ ದುಗುಡ ಅವರಲ್ಲಿ ಮನೆ ಮಾಡಿದೆ.
ಕಳೆದ ಬಾರಿ ಮಂಗಳೂರಿಗೆ ಭೇಟಿ ನೀಡಿದ್ದ ರಾಹುಲ್ ಗಾಂಧಿ ಅವರ ಎದುರು ಕಣ್ಣಿರು ಸುರಿಸಿ ತಮ್ಮ ವೇದನೆ, ತಮಗಾಗುತ್ತಿರುವ ಅವಮಾನಗಳ ಬಗ್ಗೆ ಬೇಸರ ವ್ಯಕ್ತಪಡಿಸಿದ್ದ ಪೂಜಾರಿ, ಸಿದ್ದರಾಮಯ್ಯ ಸರ್ಕಾರ ರಾಜ್ಯದಲ್ಲಿ ಅಧಿಕಾರದಲ್ಲಿದ್ದಾಗ, ಸರ್ಕಾರದ ನಡೆಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು.ಜೊತೆಗೆ ಅವರ ಕಾರ್ಯವೈಖರಿಯನ್ನು ಸಾಕಷ್ಟು ಬಾರಿ ಖಂಡಿಸಿದ್ದ ಜನಾರ್ಧನ ಪೂಜಾರಿ ಇದೀಗ ರಾಜಕಾರಣದಿಂದ ದೂರ ಉಳಿಯುವ ಮುನ್ಸೂಚನೆ ನೀಡಿದ್ದಾರೆ ಎನ್ನಲಾಗುತ್ತಿದೆ.