Friday 19th, April 2024
canara news

ಮಕ್ಕಳನ್ನು ಧೈರ್ಯವಂತಹ ಮನುಷ್ಯನನ್ನಾಗಿ ಮಾಡುವಂತಹ ಪ್ರಯತ್ನ ಆಗಬೇಕಿದೆ: ರಾಜೇಶ್ ರೈ ಕೋಟೆಕಾರ್

Published On : 15 Aug 2018   |  Reported By : Rons Bantwal


ಉಳ್ಳಾಲ; ಮಕ್ಕಳನ್ನು ಧೈರ್ಯವಂತಹ ಮನುಷ್ಯನನ್ನಾಗಿ ಮಾಡುವಂತಹ ಪ್ರಯತ್ನ ಆಗಬೇಕಿದೆ. ಈ ಮೂಲಕ ಅವರಲ್ಲಿ ಸರಿ ದಾರಿ ಮತ್ತು ತಪ್ಪು ದಾರಿಗಳ ಜ್ಞಾನ ವೃದ್ಧಿಯಾಗಲು ಸಾಧ್ಯ ಎಂದು ಶ್ರೀ ಕ್ಷೇತ್ರ ಕೊಂಡಾಣ ಸಮಿತಿ ಅಧ್ಯಕ್ಷ ರಾಜೇಶ್ ರೈ ಕೋಟೆಕಾರ್ ಗುತ್ತು ಅಭಿಪ್ರಾಯಪಟ್ಟರು.

ಅವರು ಎಸ್ಸೆಸ್ಸೆಫ್ ರಾಜ್ಯಾದಂತಹ ಹಮ್ಮಿಕೊಂಡ "ನಮ್ಮ ಮಕ್ಕಳು ನಮ್ಮವರಾಗಲು" ಎಂಬ ಧ್ಯೇಯ ವಾಕ್ಯದೊಂದಿಗೆ ಎಸ್ಸೆಸ್ಸೆಫ್ ಕೋಟೆಕಾರ್ ಸೆಕ್ಟರ್ ವತಿಯಿಂದ ಜನಜಾಗೃತಿ ಮೂಡಿಸುವ ಬೈಕ್ ರ್ಯಾಲಿಯ ಸಮಾರೋಪ ಹಾಗೂ ಎಸ್‍ವೈಎಸ್ ಕೆಸಿ ರೋಡು ಸೆಂಟರ್ ವತಿಯಿಂದ 72ನೇ ಸ್ವಾತಂತ್ರ್ಯದ ಅಂಗವಾಗಿ ಬೀರಿ ಖಾಸಗಿ ಸಭಾಂಗಣದಲ್ಲಿ ಭಾನುವಾರ ಜರಗಿದ "ಭಾರತ ಭಾರತೀಯರದ್ದಾಗಲಿ" ಪ್ರಜಾ ಸಂಗಮ ಕಾರ್ಯಕ್ರಮದಲ್ಲಿ ಸಂದೇಶ ಭಾಷಣ ಮಾಡಿದರು.

ಯುವಸಮುದಾಯ ಮಾರ್ಕಿನ ಹಿಂದುಗಡೆ ಓಡುವಂತಹ ವಾತಾವರಣ ಇದೆ. ಹಿಂದೆ ಕೂಡು ಕೂಡು ಕುಟುಂಬವಿತ್ತು. ಎಲ್ಲಾ ನೀತಿಪಾಠವನ್ನು ಮನೆಯೊಳಗೇ ಕಲಿಯುವಂತಹ ಸ್ಥಿತಿಯಿತ್ತು. ಮಕ್ಕಳಿಗೆ ಮನೆಯೇ ಪಾಠಶಾಲೆ ಆಗಿತ್ತು. ಆದರೆ ಇದೀಗ ಹೊರಗಡೆ ಆಟವಾಡುವಂತಹ ಮಕ್ಕಳನ್ನು ಒಳಗೆ ಕರೆತಂದು ಬಂಧಿಯಲ್ಲಿಟ್ಟು ಓದಿಸುವ ಕೆಲಸವಾಗುತ್ತಿದೆ. ಸಾಮಾನ್ಯ ಜೀವನವನ್ನು ಎದುರಿಸುವ ಜ್ಞಾನವನ್ನು ತುಂಬಲಾಗುತ್ತಿಲ್ಲ. ಪುಸ್ತಕದ ಅಕ್ಷರಗಳನ್ನು ಮಾತ್ರ ಓದಿಸುವ ಕಾರ್ಯವಾಗುತ್ತಿದೆ. ಇದರಿಂದಾಗಿ ಮಕ್ಕಳು ಹೊರಜಗತ್ತಿಗೆ ಹೊಂದಿಕೊಳ್ಳಲು ಕಷ್ಟಪಡುತ್ತಿದ್ದಾರೆ. ಬೇಡದ ದಾಸ್ಯಗಳಿಗೆ ಬಲಿಯಾಗುತ್ತಿದ್ದಾರೆ ಎಂದರು.

ಎಸ್‍ವೈಎಸ್ ರಾಜ್ಯ ಪ್ರ.ಕಾರ್ಯದರ್ಶಿ ಎಮ್ಮೆಸ್ಸೆಂ ಅಬ್ದುರ್ರಶೀದ್ ಝೈನಿ ಕಾಮಿಲ್ ಮಾತನಾಡಿ ದೇಶದಲ್ಲಿ ಸಹಸ್ರ ವರ್ಷಗಳಿಂದ ಪಾಲಿಸುತ್ತಿರುವ ಸಿದ್ಧಾಂತವಿದೆ. ಆದರೆ ಸದ್ಯ ಗುಂಪುಗಳಾಗಿ ವೈವಿದ್ಯತೆಯಲ್ಲಿ ಏಕತೆಯನ್ನು ಮರೆಯುವಂತಹ ಪ್ರಯತ್ನಗಳು ವಿವಿಧ ಶಕ್ತಿಗಳಿಂದ ಆಗುತ್ತಿದೆ. ಭವ್ಯ ಪರಂಪರೆಯನ್ನು ಉಳಿಸುವ ನಿಟ್ಟಿನಲ್ಲಿ ಭಾರತೀಯರಲ್ಲಿ ಜಾಗೃತಿಯನ್ನು ಮೂಡಿಸುವ ಕಾರ್ಯ ಆಗಬೇಕಿದೆ. ಸರ್ವರಿಗೂ ಸೇರಿದ ದೇಶವಾಗಬೇಕಿದೆ. ಹಿಂದೆ ದೇಶವನ್ನು ಆಡಳಿತ ನಡೆಸಿದವರು ಧರ್ಮದ ಆಧಾರದಲ್ಲಿ ದೇಶವನ್ನು ಬಯಸಿರಲಿಲ್ಲ. ಅವರವರ ಸಮುದಾಯದ ಸಾಮ್ರಾಜ್ಯವನ್ನು ಸ್ಥಾಪಿಸುತ್ತಾ ಹಿಂದೆ ಹೋಗಿದ್ದಾರೆ. ಜಾತಿ, ಮತ, ಧರ್ಮ, ಪಕ್ಷ, ಮತಗಳ, ಪಂಗಡದ ಆಧಾರದಲ್ಲಿ ದೇಶವನ್ನು ಒಡೆಯಲು ಯುವಜನ ಬಿಡಬಾರದು. ಯಾರನ್ನೂ ಅನ್ಯರನ್ನಾಗಿ ಕಾಣದೆ, ಎಲ್ಲರೂ ನಮ್ಮವರೆಂದು ಕಾಣುವ ವಾತಾವರಣ ನಿರ್ಮಾಣವಾಗಬೇಕಿದೆ. ಪವಿತ್ರವಾದ ಪರಂಪರೆ ದೇಶದಲ್ಲಿ ಇನ್ನೂ ಮುಂದುವರಿಯಬೇಕು. ಭಾರತ ಜಗತ್ತಿನಲ್ಲಿ ಸೂಪರ್ ಪವರ್ ಆಗಿ ಮೆರೆಯುವಂತಹ ತಾಕತ್ತು ಬರಬೇಕಿದೆ ಎಂದರು.

ಎಸ್‍ವೈಎಸ್ ಕೆ.ಸಿ ರೋಡು ಸೆಂಟರ್ ಅಧ್ಯಕ್ಷ ಎನ್. ಎಸ್ ಉಮ್ಮರ್ ಮಾಸ್ಟರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು.

ಮುಖ್ಯ ಅತಿಥಿಯಾಗಿ ಅಲೋಶಿಯಸ್ ಕಾಲೇಜಿನ ನಿರ್ದೇಶಕ ಫಾದರ್ ಡೆನ್ಝಿಲ್ ಲೋಬೋ, ತಲಪಾಡಿ ಗ್ರಾ.ಪಂ ಅಧ್ಯಕ್ಷ ಸುರೇಸ್ ಅಳ್ವ, ತಾ.ಪಂ ಸದಸ್ಯ ಮೊೈದೀನ್ ಬಾವ, ಎಸ್‍ವೈಎಸ್ ಮಂಗಳೂರು ವಲಯಧ್ಯಕ್ಷ ಮುಹಮ್ಮದಾಲಿ ಸಖಾಫಿ ಸುರಿಬೈಲ್, ಎಸ್ಸೆಸ್ಸೆಫ್ ಕೋಟೆಕಾರ್ ಸೆಕ್ಟರ್ ಅಧ್ಯಕ್ಷ ಅಬ್ದುಲ್ ಬಾರಿ ಸಅದಿ, ಎಸ್ ಎಂಎ ತಲಪಾಡಿ ರೇಂಜ್ ಅಧ್ಯಕ್ಷ ಎ.ಎಂ ಅಬ್ಬಾಸ್ ಹಾಜಿ, ಸ್ವಾಗತ ಸಮಿತಿ ಅಧ್ಯಕ್ಷ ಯು.ಬಿ ಮುಹಮ್ಮದ್ ಹಾಜಿ, ಬೀರಿ ಸಾರ್ವಜನಿಕ ಗಣೇಶೋತ್ಸ ಸಮಿತಿ ಅಧ್ಯಕ್ಷ ರಾಮನಾಥ್ ಕೋಟೆಕಾರ್, ಬೀರಿ ಯುವಕ ಮಂಡಲ ಹಿರಿಯ ಸದಸ್ಯ ಲಿಂಗಪ್ಪ ಗಟ್ಟಿ, ಉಚ್ಚೀಲ ಜುಮಾ ಮಸೀದಿ ಅಧ್ಯಕ್ಷ ಅಬ್ಬಾಸ್ ಹಾಜಿ ಪೆರಿಬೈಲ್, ಕೆಳಗಿನ ಕೋಟೆಕಾರ್ ಗುತ್ತು ಮುತ್ತಣ್ಣ ಶೆಟ್ಟಿ, ತುಳುನಾಡ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಹಮೀದ್ ಹಸನ್, ಎಸ್ಸೆಸ್ಸೆಫ್ ತಲಪಾಡಿ ಸೆಕ್ಟರ್ ಅಧ್ಯಕ್ಷ ಇಸ್ಮಾಯಿಲ್ ಕೆ.ಸಿ ನಗರ, ಉಪಸ್ಥಿತರಿದ್ದರು.

ಎಸ್ಸೆಸ್ಸೆಫ್ ಕೋಟೆಕಾರ್ ಸೆಕ್ಟರ್ ಅಧ್ಯಕ್ಷ ಅಬ್ದುಲ್ ಬಾರಿ ಸಅದಿ ಸ್ವಾಗತಿಸಿದರು. ಎಸ್‍ವೈಎಸ್ ಕೆ.ಸಿ ರೋಡು ಸೆಂಟರ್ ಕಾರ್ಯದರ್ಶಿ ಫಾರೂಖ್ ಕೋಟೆಪುರ ವಂದಿಸಿದರು.
ಕೆ.ಸಿ.ರೋಡು ಹಿದಾಯತ್ ನಗರದ ಅಲ್ ಹಿದಾಯ ಮಸೀದಿ ವಠಾರದಿಂದ ಚಾಲನೆಗೊಂಡ ಬೈಕ್ ರ್ಯಾಲಿ ಕೋಟೆಕಾರು ಬೀರಿಯವರೆಗೆ ಸಾಗಿತ್ತು. ಈ ನಡುವೆ ಜರಗಿದ ಬೀದಿ ಭಾಷಣದಲ್ಲಿ ಬಶೀರ್ ಮದನಿ ಕೂಳೂರು ದಿಕ್ಸೂಚಿ ಭಾಷಣ ನೆರವೇರಿಸಿದರು.

 




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here