ಉಜಿರೆ: ಪರಿಶುದ್ಧ ಮನಸ್ಸಿನಿಂದ, ಶ್ರದ್ಧಾ-ಭಕ್ತಿಯಿಂದ ಭಗವಂತನ ಗುಣಗಾನ ಮಾಡಿ ಹಾಡುವುದರಿಂದ ನಮಗೆ ಆನಂದ ಸಿಗುತ್ತದೆ. ಭಜನೆಯಿಂದ ವಿಭಜನೆ ಆಗಬಾರದು ಸಮಾಜದ ಸಂಘಟನೆ ಆಗಬೇಕು ಎಂದು ಧಾರವಾಡದ ಮಣಕವಾಡ ಶ್ರೀಗುರು ಅನ್ನದಾನೀಶ್ವರ ದೇವಮಂದಿರ ಸಿದ್ಧರಾಮ ದೇವರು ಹೇಳಿದರು.
ಅವರು ಭಾನುವಾರ ಧರ್ಮಸ್ಥಳದಲ್ಲಿ ಮಹೋತ್ಸವ ಸಭಾ ಭವನದಲ್ಲಿ ಇಪ್ಪತ್ತನೇ ವರ್ಷದ ಭಜನಾ ತರಬೇತಿ ಕಮ್ಮಟವನ್ನು ಉದ್ಘಾಟಿಸಿ ಮಾತನಾಡಿದರು.
ಭಜನೆ ಮೂಲಕ ಪರಮಾತ್ಮನನ್ನು ಕೊಂಡಾಡಿ ಕೃತಜ್ಞತೆ ವ್ಯಕ್ತ ಪಡಿಸುವುದೇ ಭಜನೆಯ ಉದ್ದೇಶವಾಗಿದೆ. ದೇಹಕ್ಕೆ ಭೋಜನ ಹೇಗೆ ಅಗತ್ಯವೊ, ಹಾಗೆಯೇ ಆತ್ಮಕ್ಕೆ ಭಜನೆ ಅಗತ್ಯವಾಗಿದೆ. ಭಾರತಕ್ಕೆ ಮಹತ್ವ ಹಾಗೂ ಗೌರವ ಬಂದಿರುವುದು ಆಧ್ಯಾತ್ಮಿಕ ಶಕ್ತಿಯಿಂದ ಎಂದು ಅವರು ಅಭಿಪ್ರಾಯ ಪಟ್ಟರು. ಭಜನೆ ಕಲಿತು ಇತರರಿಗೂ ಕಲಿಸಿ. ಎಂದೂ ಜಗಳ ಮಾಡಬಾರದು. ವ್ಯಕಿಯಾಗಿ ಶಿಬಿರಕ್ಕೆ ಬಂದವರು ಅಪಾರ ಶಕ್ತಿಯೊಂದಿಗೆ ಹೊರಗೆ ಹೋಗಬೇಕು. ಭಜನೆ ಕಲಿತವರು ಇತರರಿಗೂ ಕಲಿಸಿ ಎಂದು ಅವರು ಸಲಹೆ ನೀಡಿದರು.
ಮಾಣಿಲದ ಮೋಹನದಾಸ ಸ್ವಾಮೀಜಿ ಮಾತನಾಡಿ, ನಮ್ಮ ಮನಸ್ಸು, ಭಾವನೆ ಮತ್ತು ಕರ್ಮ ಪರಿಶುದ್ಧವಾದಾಗ ಸಾರ್ಥಕ ಜೀವನ ನಡೆಸಲು ಸಾಧ್ಯವಾಗುತ್ತದೆ. ಭಜನಾಪಟುಗಳು ನಾಯಕತ್ವ ಗುಣ ಬೆಳೆಸಿಕೊಂಡು ಸಮಾಜದ ದುಶ್ಚಟಗಳು ಹಾಗೂ ದೌರ್ಬಲ್ಯಗಳನ್ನು ದೂರ ಮಾಡುವ ಸಮಾಜ ಸುಧಾರಕರಾಗಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ, ಶ್ರದ್ಧಾ-ಭಕ್ತಿಯಿಂದ ಭಾಷಾ ಶುದ್ಧಿಯೊಂದಿಗೆ ರಾಗ, ತಾಳ, ಲಯಬದ್ಧವಾಗಿ ಭಜನೆ ಹಾಡಬೇಕು. ಯಾವುದೇ ವಿಚಾರಗಳನ್ನು ಸರಿಯಾಗಿ ತಿಳಿದುಕೊಂಡು ಆಚರಣೆ ಮಾಡಬೇಕು. ಸಂಸ್ಕøತಿಯ ಪಲ್ಲಟದಿಂದಾಗಿ ಮೂಲ ಸ್ವರೂಪ, ತತ್ವ ಮತ್ತು ಸತ್ವಕ್ಕೆ ಧಕ್ಕೆಯಾಗಬಾರದು. ಭಜನೆ ಮೂಲಕ ಮುಕ್ತ ಹಾಗೂ ಮುಗ್ದ ಮನಸ್ಸಿನಿಂದ ದೇವರ ಆರಾಧನೆ ಮಾಡಬೇಕು ಎಂದು ಹೆಗ್ಗಡೆಯವರು ಸಲಹೆ ನೀಡಿದರು.
ಹೇಮಾವತಿ ವಿ. ಹೆಗ್ಗಡೆಯವರು ಶಿಬಿರಾರ್ಥಿಗಳಿಗೆ ಭಜನಾ ಪರಿಕರಗಳನ್ನು ನೀಡಿ ಶುಭ ಹಾರೈಸಿದರು.
ಅಕ್ಕಿ ಆಲೂರು ಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಶಿರಸಿಯ ಮಲ್ಲಿಕಾರ್ಜುನ ಸ್ವಾಮೀಜಿ, ಡಿ. ಹರ್ಷೇಂದ್ರ ಕುಮಾರ್, ಎಸ್.ಡಿ.ಎಂ. ಶಿಕ್ಷ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಬಿ. ಯಶೋವರ್ಮ, ಮೂಬಿದ್ರೆಯ ದಿನೇಶ್ ಕುಮಾರ್ ಆನಡ್ಕ ಉಪಸ್ಥಿತರಿದ್ದರು.
ಭಜನಾ ಕಮ್ಮಟದ ಸಂಚಾಲಕ ಸುಬ್ರಹ್ಮಣ್ಯ ಪ್ರಸಾದ್ ಸ್ವಾಗತಿಸಿದರು. ಕಾರ್ಯದರ್ಶಿ ಮಮತಾ ರಾವ್ ಧನ್ಯವಾದವಿತ್ತರು. ಶ್ರೀನಿವಾಸ ರಾವ್ ಕಾರ್ಯಕ್ರಮ ನಿರ್ವಹಿಸಿದರು.
ರಾಜ್ಯದಲ್ಲಿ 12 ಜಿಲ್ಲೆಗಳಿಂದ 178 ಪುರುಷರು ಹಾಗೂ 94 ಮಹಿಳೆಯರು ಸೇರಿದಂತೆ ಒಟ್ಟು 272 ಶಿಬಿರಾರ್ಥಿಗಳು ಭಜನಾ ಕಮ್ಮಟದಲ್ಲಿ ಭಾಗವಹಿಸುತ್ತಿದ್ದಾರೆ.
ಮುಖ್ಯಾಂಶಗಳು:
• ದೇಹಕ್ಕೆ ಭೋಜನ ಅಗತ್ಯ. ಆತ್ಮಕ್ಕೆ ಭಜನೆ ಅಗತ್ಯ.
• ಗಂಡನಿಗೆ ಸಂಶಯ ಇರಬಾರದು, ಹೆಂಡತಿಗೆ ಸಂಕೋಚ ಇರಬಾರದು.
• ಭಜನೆ ಕಲಿತವರು ಇತರರಿಗೂ ಕಲಿಸಬೇಕು.
- ಸಿದ್ಧರಾಮ ದೇವರು, ಧಾರವಾಡ
• ಮುಕ್ತ ಹಾಗೂ ಮುಗ್ಧ ಮನದಿಂದ ದೇವರ ಆರಾಧನೆ ಮಾಡಬೇಕು.
• ಸಂಸ್ಕøತಿಯ ಪಲ್ಲಟದಿಂದ ಮೂಲ ಸ್ವರೂಪಕ್ಕೆ ಧಕ್ಕೆಯಾಗಬಾರದು.
• ವಿಚಾರಗಳನ್ನು ತಿಳಿದು ಶ್ರದ್ಧೆಯಿಂದ ಆಚರಣೆ ಮಾಡಬೇಕು.
- ಡಿ. ವೀರೇಂದ್ರ ಹೆಗ್ಗಡೆಯವರು
• ರಾಜ್ಯದ 12 ಜಿಲ್ಲೆಗಳಿಂದ 178 ಪುರುಷರು ಹಾಗೂ 94 ಮಹಿಳೆಯರು ಸೇರಿದಂತೆ ಒಟ್ಟು 272 ಮಂದಿ ಭಜನಾ ಕಮ್ಮಟದಲ್ಲಿ ಭಾಗವಹಿಸುತ್ತಿದ್ದಾರೆ.
• ಕಳೆದ 19 ವರ್ಷಗಳಲ್ಲಿ 1760 ಭಜನಾ ಮಂಡಳಿಗಳ 3328 ಮಂದಿಗೆ ಭಜನಾ ತರಬೇತಿ ನೀಡಲಾಗಿದೆ.