Wednesday 14th, May 2025
canara news

ಚಲನಚಿತ್ರಗಳು ಸಮಾಜಕ್ಕೆ ಉತ್ತಮ ಸಂದೇಶ ನೀಡುತ್ತವೆ- ಆರ್.ಪಿ.ನಾಯ್ಕ

Published On : 30 Sep 2018   |  Reported By : Rons Bantwal


ಮುಂಬಯಿ,ಸೆ.30: ಕೊಂಕಣಿ ಚಲನಚಿತ್ರ ರಸಗ್ರಹಣವೆನ್ನುವ ವಿನೂತನ ಚಿತ್ರಸಂವಾದ ಕಾರ್ಯಕ್ರಮವು ಇತ್ತೀಚೆಗೆ ನಗರದ ಶಿವರಾಮ ಕಾರಂತ ಭವನದಲ್ಲಿ ಜರುಗಿತು. ಮಂಗಳೂರು ವಿಶ್ವವಿದ್ಯಾನಿಲಯದ ಘಟಕ ಕಾಲೇಜು ವಿಶ್ವವಿದ್ಯಾನಿಲಯ ಸಂಧ್ಯಾ ಕಾಲೇಜಿನ ಸ್ನಾತಕೋತ್ತರ ಕೊಂಕಣಿ ವಿಭಾಗವು ಈ ಕಾರ್ಯಕ್ರಮವನ್ನು ಆಯೋಜಿಸಿತ್ತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಆರ್.ಪಿ.ನಾಯ್ಕ ಮಾತನಾಡಿ ಈ ಕಾರ್ಯಕ್ರಮಕ್ಕೆ ಅಧ್ಯಕ್ಷರ ವಿವೇಚನೆಯ ಸಹಕಾರ ನೀಡಿರುವದಾಗಿ ತಿಳಿಸಿದರು. ಚಲನಚಿತ್ರಗಳು ಸಾಮಾಜಿಕ, ಕೌಟುಂಬಿಕ ಕಥಾಧಾರಿತ ವಿಷಯವನ್ನು ಹೊಂದಿರುವಾಗ ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡಿದಂತಾಗುತ್ತದೆ. ಅಂತಹ ವಿಷಯವಸ್ತು ಆಧರಿಸಿದ `ಅಂತು' ಕೊಂಕಣಿ ಚಲನಚಿತ್ರವು ಎಲ್ಲರ ಜೀವನದ ಕಥೆಯಾಗಿದೆ ಎಂದರು.

ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು ಈವರೆಗೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು,ಮುಂಬರುವ ದಿನಗಳಲ್ಲಿ ಹಳ್ಳಿಯಿಂದ ನಗರ, ನಗರದಿಂದ ರಾಜ್ಯ, ರಾಜ್ಯದಿಂದ ಹೊರರಾಜ್ಯ, ಹೊರರಾಜ್ಯದಿಂದ ಹೊರದೇಶದವರೆಗೆ ಕೊಂಕಣಿ ಜಾಗೃತಿ ಅಭಿಯಾನವನ್ನು ನಡೆಸಿ ದುಬೈಯಲ್ಲಿ ವಿಶ್ವಕೊಂಕಣಿ ಸಮಾರೋಪ ಕಾಣಲಿದೆಯೆಂದರು. ಕೊಂಕಣಿ ಸಾಹಿತ್ಯವನ್ನು ಅಭಿವೃದ್ದಿಪಡಿಸುವ ನಿಟ್ಟಿನಲ್ಲಿ 100 ಪುಸ್ತಕಗಳನ್ನು ಪ್ರಕಟಿಸುವ ದೂರದೃಷ್ಟಿಯೋಜನೆ ಅಕಾಡೆಮಿಯ ಮುಂದಿದ್ದು ಕೊಂಕಣಿ ಆಸಕ್ತರೆಲ್ಲರೂ ಈ ಕಾರ್ಯಗಳಲ್ಲಿ ಕೈಜೋಡಿಸಬೇಕೆಂದು ಆಶಿಸಿದರು.

ಅಧ್ಯಕ್ಷತೆಯನ್ನು ವಹಿಸಿಕೊಂಡು ಮಾತನಾಡಿದ ಸಂಧ್ಯಾ ಕಾಲೇಜಿನ ಪ್ರಾಂಶುಪಾಲರಾದ ರಾಮಕೃಷ್ಣ ಬಿ.ಎಂ.ರವರು ಚಲನಚಿತ್ರಗಳು ಇಂದು ತೀವ್ರಗತಿಯಲ್ಲಿ ಜನಮಾನಸದಲ್ಲಿ ನೆಲೆಯೂರುವ ಸಾಮಾಜಿಕ ಮಾಧ್ಯಮವಾಗಿದೆಯೆಂದರು.

ಪ್ರಾಸ್ತಾವಿಕವಾಗಿಮಾತನಾಡಿದ ವಿಭಾಗದ ಸಂಯೋಜಕರಾಗಿರುವ ಡಾ. ಅರವಿಂದ ಶ್ಯಾನಭಾಗರು, ತಿಂಗಳಿಗೊಂದು ಕೊಂಕಣಿ ಚಲನಚಿತ್ರ ವೀಕ್ಷಿಸಿ ಚಿತ್ರವಿಮರ್ಶೆ ಮಾಡುವ ಕಾರ್ಯಕ್ರಮವು ಸ್ನಾತಕೋತ್ತರ ಹಂತದ ಅಧ್ಯಯನಾರ್ಥಿಗಳಲ್ಲಿ ಸಾಹಿತ್ಯಿಕ ಆಸಕ್ತಿಯನ್ನು ಜಾಗೃತಿಗೊಳಿಸುವದೆಂದರು.

ವೇದಿಕೆಯಲ್ಲಿ ಅಂತು ಕೊಂಕಣಿ ಚಲನಚಿತ್ರದ ನಿರ್ಮಾಪಕ, ನಿರ್ದೇಶಕ ಅಕ್ಷಯ ನಾಯಕ ಕರೋಪಾಡಿ, ಸಂಭಾಷಣೆಯನನು ಬರೆದಿರುವ ಕೊಡಿಯಾಲ ಖಬರ ಸಂಪಾದಕ ವೆಂಕಟೇಶ ಬಾಳಿಗಾ, ಅಭಿನೇತ್ರಿ ಪೂರ್ಣಿಮಾ ಸುರೇಶ ಇದ್ದರು. ನಂತರ ನಡೆದ ಚಲನಚಿತ್ರ ಪ್ರದರ್ಶನ ಮತ್ತು ಸಂವಾದದಲ್ಲಿ ಚಿತ್ರತಂಡದ ಇತರ ಕಲಾವಿದರೂ ಪಾಲ್ಗೊಂಡು ಕೊಂಕಣಿ ಅಭಿಮಾನಿಗಳ ಮನಸೂರೆಗೊಳ್ಳುವಂತೆ ಮಾಡಿದರು. ಕಾರ್ಯಕ್ರಮದ ಆರಂಭದಿಂದ ಕೊನೆಯವರೆಗೂ ಕೊಂಕಣಿ ಸಾಂಸ್ಕøತಿಕ ಸಂಘದ ಅಧ್ಯಕ್ಷರಾದ ವಿಟ್ಠಲ ಕುಡ್ವಾ, ಜಿ.ಎಸ್.ಬಿ. ಮಹಿಳಾ ಮಂಡಲದ ಸದಸ್ಯರು, ಕೊಂಕಣಿ ಭಾಷಾಮಂಡಳ ಕರ್ನಾಟಕ ಇದರ ಪದಾಧಿಕಾರಿಗಳು, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಸದಸ್ಯರುಗಳಾದ ಸಂತೋಷ ಶೆಣೈ ಮತ್ತು ಲಕ್ಷ್ಮಣ ಪ್ರಭು, ಕೊಂಕಣಿ ಪ್ರೇಮಿಗಳಾದ ವಿಠೋಬ ಭಂಡಾರ್ಕರ್, ಡಾ. ಸುದೇಶರಾವ್ ಮತ್ತಿತರರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಆರಂಭದಲ್ಲಿ ಚಂದ್ರಿಕಾ ಮಲ್ಯ ಪ್ರಾರ್ಥನಾ ಗೀತೆಯನ್ನು ಹಾಡಿದರು.ಪ್ರೇಮ್ ಮೊರಾಸ್ ಎಲ್ಲರಿಗೂ ವಂದನಾರ್ಪಣೆಗೈದರು. ಅಕ್ಷತಾರವರು ಕಾರ್ಯಕ್ರಮದ ನಿರೂಪಣೆ ಮಾಡಿದರು. ಇಂಗ್ಲೀಷ್, ತುಳುಮತ್ತು ಕೊಂಕಣಿ ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರು ಸಕ್ರಿಯವಾಗಿ ಪಾಲ್ಗೊಂಡು ಸಂವಾದವನ್ನು ಯಶಸ್ವಿಗೊಳಿಸಿದರು.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here