ಮುಂಬಯಿ, ಆ.29: ಶ್ರೀ ರಜಕ ಸಂಘ ಮುಂಬಯಿಯ ಯುವ ವಿಭಾಗದವರಿಂದ ಯುವಕರಿಗಾಗಿ ದೋಸ್ತಿ-5 ನ್ನು ದಾದರಿನ ಕೊಹಿನೂರ್ ಹಾಲಿನಲ್ಲಿ ತಾ.18.08.2019 ರಂದು ಆಯೋಜಿಸಲಾಗಿತ್ತು. ಯುವ ವಿಭಾಗದ ಮುಖ್ಯ ಕಾರ್ಯಾಲಯದ ಸದಸ್ಯರು ಹಾಗೂ ನೂತನ ಸದಸ್ಯರು ಕೂಡಿ ದೀಪ ಪ್ರಜ್ವಲಿಸಿ, ಕುಲದೇವರನ್ನು ಆರಾಧಿಸುತ್ತ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ನಂತರ ಮುಖ್ಯ ಕಚೇರಿ ಹಾಗೂ ಎಲ್ಲಾ ವಲಯಗಳ ಅಧ್ಯಕ್ಷರಿಗೆ ವಿಶೇಷವಾದ ಗುರುತು ಚಿಹ್ನೆಯನ್ನು ಕೊಡಲಾಯಿತು.
ಇದೇ ಸಮಯದಲ್ಲಿ ಕಾರ್ಯಕ್ರಮದ ಆರಂಭಕ್ಕೆ ಸೆಲ್ವಿನ್ ಮತ್ತು ಕ್ಲೈಡ್ ಇವರಿಂದ ವಿಶೇಶವಾದ ಸಂಗೀತ ಹಾಗೂ ವಾದನ ಮಿಶ್ರಿತ ಪ್ರದರ್ಶನ ಎಲ್ಲರ ಮನ ಮೆಚ್ಚುಗೆ ಪಡೆಯಿತು. ಯುವ ವಿಭಾಗದ ಅಧ್ಯಕ್ಷರಾದ ಶ್ರೀ ರೋನಕ್ ಕುಂದರ್‍ರವರು ಎಲ್ಲಾ ಸಹಭಾಗಿಗಳಿಗೆ ಯುವ ವಿಭಾಗದ ಧ್ಯೇಯೋದ್ದೇಶಗಳನ್ನು ಮತ್ತು ಗುರಿಯ ಬಗ್ಗೆ ಒಂದು ಮೇಲ್ನೋಟವನ್ನು ಚಿತ್ರಿಸಿ ತೋರಿಸಿದರು. ಹಿರಿಯ ಕೆಲವು ಸದಸ್ಯರಿಂದ ಅನುಭವಗಳನ್ನು ವಿವರಿಸಿ ತಿಳಿಹೇಳಲಾಯಿತು. ಇದನ್ನೆಲ್ಲಾ ನೋಡಿ ಮತ್ತು ಕೇಳಿದಾಗ ನವ ಯುವ ಸದಸ್ಯರಿಗೆಲ್ಲರಿಗೆ ಸ್ಫೂರ್ತಿ ತುಂಬಿ ಬಂತು.
ಎಲ್ಲರ ಪರಿಚಯ ಎಲ್ಲರಿಗೂ ಆಗುವಂತೆ ಹಾಗೂ ಒಗ್ಗಟ್ಟಿನ ಬಲವನ್ನು ತೊರ್ಪಡಿಸಲು ಮತ್ತು ಉತ್ತಮ ಸಂಘಟಕನಾಗಿ, ಮಾರ್ಗದರ್ಶಕರಾಗಿ, ನಾಯಕನಾಗಿ ಬೆಳೆಯಲು ಬೇಕಾಗಿರುವ ಕೆಲವು ಗುಣ, ನಡತೆ, ವಿಚಾರಗಳನ್ನು ತಿಳಿಸಿ ಹೇಳಲು ವಿಶಿಷ್ಟವಾದ ಕೆಲವು ಆಟೋಟ-ಚಟುವಟಿಕೆಗಳನ್ನು ಆಯೋಜಿಸಲಾಗಿತ್ತು. ವಿವಿಧ ತಂಡಗಳಲ್ಲಿ ವಿಭಾಗಿಸಿ, ಒಟ್ಟುಗೂಡಿಸಿ, ನಲಿಸಿ, ಕುಣಿಸಿ, ಉಣಿಸಿದ ನಂತರ ಎಲ್ಲರಲ್ಲಿಯೂ ಒಂದು ಸಂಘಟಿತ ಭಾವನೆ ಮೂಡಿ ಬಂದು ಎಲ್ಲರೂ ತಮ್ಮ ವೈಯಕ್ತಿಕ ಬೆಳವಣಿಗೆ ಹಾಗೂ ಸಂಘದ ವೃದ್ಧಿಗೋಸ್ಕರ ಶ್ರಮವಹಿಸಲು ಸಿದ್ಧರಿದ್ದಾರೆಂದು ಘೋಶಿಸಿದರು.
ಕಾರ್ಯದರ್ಶಿ ಸಂಜೀತ್ ಕುಂದರ್‍ರವರುಭಾಗವಹಿಸಿದವರೆಲ್ಲರಿಗೂ, ಸಂಘದ ಮುಖ್ಯ ಕಚೇರಿಯ ಕಾರ್ಯಕಾರಿಣಿ ಸಮಿತಿಯವರಿಗೂ, ಪ್ರಾಯೋಜಕರಿಗೂ, ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಸಹಕರಿಸಿದವರೆಲ್ಲರಿಗೂ ಮನಪೂರ್ವಕ ಧನ್ಯವಾದವನ್ನು ಸಮರ್ಪಿಸಿದರು. ಉಪಾಧ್ಯಕ್ಷರಾದ ಸ್ಪರ್ಶ್ ಸಾಲಿಯನ್ ಹಾಗೂ ವಲಯದ ಅಧ್ಯಕ್ಷರಾದ ನಿತೀಶ್ ಸಾಲಿಯನ್ (ಡೋಂಬಿವಲಿ), ವಿಶಾಲ್ ಕುಂದರ್ (ವಸಯಿ), ಅಖಿಲೇಶ್ ಸಾಲಿಯನ್ (ನವಿಮುಂಬಯಿ), ಸಂದೀಪ್ ಸಾಲಿಯನ್ (ಸೆಂಟ್ರಲ್), ಕು. ದಾಮಿನಿ ಗುಜರನ್ (ವೆಸ್ಟರ್ನ್) ಇವರೆಲ್ಲರೂ ಕೂಡಿ ತಮ್ಮ ವಲಯದ ಜವಾಬ್ದಾರಿಯನ್ನು ನಿಭಾಯಿಸುವಂತೆ ಒಪ್ಪಿಕೊಂಡು ಸರ್ವರೂ ಒಂದಾಗಿ ಸಮಾಜದ ವೃದ್ಧಿಗಾಗಿ ದುಡಿಯೋಣ ಹಾಗೂ ಮುಂದುವರಿಯೋಣ ಎಂದು ಕೊಂಡು ಎಲ್ಲರೂ ಬೀಳ್ಕೊಂಡರು.