ಉಜಿರೆ: ಸ್ಥಳೀಯ ಎಸ್.ಡಿ.ಎಂ. ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನ ಕಾಲೇಜಿನಲ್ಲಿ ಜೈವಿಕ ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥ ಬಾಲಕೃಷ್ಣ ಶೆಟ್ಟಿ ಅವರಿಗೆ ಮಂಗಳೂರಿನ ಯೇನೆಪೋಯ ವಿಶ್ವವಿದ್ಯಾಲಯ ಪಿ.ಎಚ್‍ಡಿ. ಪದವಿ ಪ್ರದಾನ ಮಾಡಿ ಗೌರವಿಸಿದೆ.
ಯೇನೆಪೋಯ ಮೆಡಿಕಲ್ ಕಾಲೇಜಿನ ಡಾ. ಮಂಜುಳಾ ಶಾಂತಾರಾಮ್ ಮಾರ್ಗದರ್ಶನದಲ್ಲಿ ಸ್ಥೂಲಕಾಯದ ತೊಂದರೆ ಇರುವವರಲ್ಲಿ ಜೀವ ರಾಸಾಯನಿಕ ಪದಾರ್ಥಗಳ ಮೇಲೆ ಆಗುವ ಪರಿಣಾಮಗಳ ಬಗ್ಯೆ ತುಲನಾತ್ಮಕ ವೈದ್ಯಕೀಯ ಅಧ್ಯಯನದ ಬಗ್ಯೆ ಇವರು ಮಂಡಿಸಿದ ಮಹಾ ಪ್ರಬಂಧಕ್ಕೆ ಪಿ.ಎಚ್‍ಡಿ. ಪದವಿ ಪ್ರದಾನ ಮಾಡಲಾಗಿದೆ.
ತುಳು ಪ್ರತಿಭಾ ಪುರಸ್ಕಾರ ನಾಳೆ
ಉಜಿರೆ: ಮಂಗಳೂರಿನ ತುಳುಕೂಟದ ಆಶ್ರಯದಲ್ಲಿ ತುಳು ಪ್ರತಿಭಾ ಪುರಸ್ಕಾರ ಪ್ರದಾನ ಸಮಾರಂಭವು ಶನಿವಾರ ಗುರುವಾಯನಕೆರೆಯಲ್ಲಿರುವ ಸರ್ಕಾರಿ ಪ್ರೌಢ ಶಾಲೆಯಲ್ಲಿ ನಡೆಯಲಿದೆ ಎಂದು ಶಾಲಾ ಮುಖ್ಯೋಪಾಧ್ಯಾಯ ಜಗನ್ನಾಥ ಮತ್ತು ತುಳುಕೂಟದ ಕಾರ್ಯದರ್ಶಿ ರತ್ನಕುಮಾರ್ ಎಂ. ತಿಳಿಸಿದ್ದಾರೆ.
ಎಸ್.ಎಸ್.ಎಲ್.ಸಿ. ಪಬ್ಲಿಕ್ ಪರೀಕ್ಷೆಯಲ್ಲಿ ಗರಿಷ್ಠ ಅಂಕ ಪಡೆದ ಗುರುವಾಯನಕೆರೆ ಸರ್ಕಾರಿ ಪ್ರೌಢ ಶಾಲೆಯ ಕುಮಾರಿ ತೇಜಸ್ವಿನಿ ಕೆ. ಮತ್ತು ಪಿ.ಯು.ಸಿ. ಯಲ್ಲಿ ಗರಿಷ್ಠ ಅಂಕ ಪಡೆದ ಮಂಗಳೂರಿನ ಎಕ್ಸ್‍ಪರ್ಟ್ ಪದವಿ ಪೂರ್ವ ಕಾಲೇಜಿನ ಮನೀಶ್ ಶ್ರೀರಾಮ್ ಅವರಿಗೆ ತುಳು ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಗುವುದು.
ಬೆಳ್ತಂಗಡಿ ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಆರ್.ಯನ್. ಪೂವಣಿ ಕಾರ್ಯಕ್ರಮ ಉದ್ಘಾಟಿಸುವರು.
ಮಂಗಳೂರು ತುಳುಕೂಟದ ಅಧ್ಯಕ್ಷ ಬಿ. ದಾಮೋದರ ನಿಸರ್ಗ ಅಧ್ಯಕ್ಷತೆ ವಹಿಸುವರು.
ಉಜಿರೆ ಎಸ್.ಡಿ.ಎಂ. ಕಾಲೇಜಿನ ಉಪನ್ಯಾಸಕ ಡಾ. ದಿವಾ ಕೊಕ್ಕಡ ಮತ್ತು ಶಾಲಾ ಮುಖ್ಯ ಶಿಕ್ಷಕ ಜಗನ್ನಾಥ ಶುಭಾಶಂಸನೆ ಮಾಡುವರು.
ಉಚಿತ ತರಬೇತಿ
ಉಜಿರೆ: ನಿರುದ್ಯೋಗಿಗಳು ಸ್ವ-ಉದ್ಯೋಗ ಆರಂಭಿಸಲಿಕ್ಕಾಗಿ ಉಜಿರೆಯಲ್ಲಿರುವ ರುಡ್‍ಸೆಟ್ ಸಂಸ್ಥೆಯಲ್ಲಿ ಊಟ, ವಸತಿಯೊಂದಿಗೆ ಉಚಿತ ತರಬೇತಿ ಆಯೋಜಿಸಲಾಗಿದೆ ಎಂದು ಸಂಸ್ಥೆಯ ನಿರ್ದೇಶಕರು ತಿಳಿಸಿದ್ದಾರೆ.
ಹೊಲಿಗೆ ತರಬೇತಿ (30 ದಿನ), ಸೆಲೂನ್ ಉದ್ಯಮ (30 ದಿನ), ದ್ವಿಚಕ್ರ ವಾಹನಗಳ ದುರಸ್ತಿ (30 ದಿನ), ಎಲೆಕ್ಟ್ರಿಕಲ್ ಮೋಟಾರ್ ರಿವೈಂಡಿಂಗ್ (30 ದಿನ), ರಬ್ಬರ್ ಟ್ಯಾಪಿಂಗ್ (30 ದಿನ).
ಆಸಕ್ತರು ಸವಿವರ ಮಾಹಿತಿಯೊಂದಿಗೆ ತಕ್ಷಣ ಅರ್ಜಿ ಸಲ್ಲಿಸಲು ಕೋರಲಾಗಿದೆ.
ವಿಳಾಸ: ನಿರ್ದೇಶಕರು, ರುಡ್‍ಸೆಟ್ ಸಂಸ್ಥೆ, ಸಿದ್ದವನ, ಉಜಿರೆ – 574 240, ದೂರವಾಣಿ: 08256 – 236404.