ಮುಂಬಯಿ, (ಪೆರ್ಲ) ಅ.31: ಸಮಕಾಲೀನ ವೈಚಾರಿಕ ನೆಲೆಗಳಲ್ಲಿ ಜನಪರ, ಜೀವಪರವಾದ ಸಾಹಿತ್ಯ ಬರಹಗಳು ವರ್ತಮಾನದ ಅಗತ್ಯವಾಗಿದೆ. ಕವಿತೆಗಳು ಆಂತರಂಗಿಕ ಭಾವನೆಗಳನ್ನು ಅರಳಿಸುವ, ವೈಚಾರಿಕತೆಯೊಂದಿಗೆ ಹಿತ ನೀಡುವ ನಿಟ್ಟಿನಲ್ಲಿ ಕವಿಗಳು ಭಾವಶುದ್ದಿಯೊಂದಿಗೆ ಅಕ್ಷರಕ್ಕೆ ಜೀವಕಳೆ ನೀಡಬೇಕು ಎಂದು ಹಿರಿಯ ಸಾಹಿತಿ, ಪತ್ರಕರ್ತ ರಾಧಾಕೃಷ್ಣ ಕೆ.ಉಳಿಯತ್ತಡ್ಕ ತಿಳಿಸಿದರು.
ಸಾಹಿತಿ, ಪ್ರಾಧ್ಯಾಪಕ ಬಾಲಕೃಷ್ಣ ಬೇರಿಕೆ ಅವರ ನಾಲ್ಕನೆಯ ಸಾಹಿತ್ಯ ಸಂಕಲನವಾದ ಹೆಸರಿರದ ಹೂವು ಹನಿಗವನ ಸಂಕಲನದ ಆರ್ಲಪದವಿನ ಪಾಣಾಜೆ ಕೃಷಿ ಪತ್ತಿನ ಸಹಕಾರಿ ಸಂಘದ ಸಭಾ ಭವನದಲ್ಲಿ ಇತ್ತೀಚೆಗೆ ನಡೆದ ಬಿಡುಗಡೆಸಮಾರಂಭದ ಅಂಗವಾಗಿ ಆಯೋಜಿಸಲಾಗಿದ್ದ ಹನಿ ಕವಿಗೋಷ್ಠಿ ಅಧ್ಯಕ್ಷತೆ ವಹಿಸಿ ಉಳಿಯತ್ತಡ್ಕ ಮಾತನಾಡಿದರು.
ಜನಮನವನ್ನು ತಲಪುವಲ್ಲಿ ಕಾವ್ಯದ ಗಾತ್ರ ಮುಖ್ಯವಾಗುವುದಿಲ್ಲ. ಆದರೆ ಅಕ್ಷರದೊಳಗಣ ಭಾವಾರ್ಥ ಗಾತ್ರವನ್ನು ನಿರ್ಧರಿಸುತ್ತದೆ ಎಂದ ಅವರು ಸಮಗ್ರ ಸಾಹಿತ್ಯ ಪ್ರಕಾರಗಳು ಇಂದು ಕಿರಿದುಗೊಂಡು ಹಿರಿದಾದ ಅರ್ಥವ್ಯಾಪಕತೆಗಳಿಂದ ಸಮಾಜವನ್ನು ಮುನ್ನಡೆಸುತ್ತಿದೆ ಎಂದು ತಿಳಿಸಿದರು. ಬಾಲಕೃಷ್ಣ ಬೇರಿಕೆಯವರ ಹನಿ ಕವನಗಳ ಒಳಾರ್ಥ ಚಿಂತನೆಗೊಳಪಡಿಸಿ ಹೃದಯಕ್ಕೆ ನಾಟುತ್ತದೆ. ಅಧ್ಯಯನಶೀಲತೆ, ವಿಷಯ ಸಂಗ್ರಹ ಹಾಗೂ ಅಕ್ಷರಗಳನ್ನು ಬಳಸುವ ನಾಜೂಕು, ಸ್ಪಷ್ಟತೆಗಳನ್ನು ಯುವ ಕವಿಗಳು ಅಳವಡಿಸಿಕೊಳ್ಳಬೇಕೆಂದು ಅವರು ಕರೆನೀಡಿದರು.
ವೆಂಕಟ್ ಭಟ್ ಎಡನೀರು, ಗಣೇಶ್ ಪೈ ಬದಿಯಡ್ಕ, ಸುಭಾಶ್ ಪೆರ್ಲ, ಡಾ.ಎಸ್.ಎನ್.ಭಟ್ ಪೆರ್ಲ, ಶ್ರೀನಿವಾಸ ಸ್ವರ್ಗ, ಕೃಷ್ಣಕಾಂತ ರೈ ಕಳ್ವಾಜೆ, ನಾರಾಯಣ ಕುಂಬ್ರ, ಪರಮೇಶ್ವರ ನಾಯ್ಕ್, ರಿತೇಶ್ ಕಿರಣ್ ಕಾಟುಕುಕ್ಕೆ, ಆನಂದ ರೈ ಅಡ್ಕಸ್ಥಳ, ಜ್ಯೋಸ್ನ್ಸಾ ಎಂ.ಕಡಂದೇಲು, ದಯಾನಂದ ರೈ ಕಳ್ವಾಜೆ, ಚಿನ್ಮಯಕೃಷ್ಣ ಕಡಂದೇಲು, ಚಿತ್ತರಂಜನ್ ಕಡಂದೇಲು, ಉಮೇಶ್ ಬೆಳ್ಳಿಪ್ಪಾಡಿ, ಸುಜಯ ಕೊಡೆಂಕಿರಿ, ಪುರುಷೋತ್ತಮ ಭಟ್ ಕೆ., ಜನಾರ್ದನ, ಉದಯರವಿ ಕೋಂಬ್ರಾಜೆ, ಅಭಿ ಪೆರ್ಲ ಮೊದಲಾದವರು ಸ್ವ ರಚಿತ ಹನಿಗವನಗಳನ್ನು ವಾಚಿಸಿದರು. ಸುಂದರ ಬಾರಡ್ಕ ಗೋಷ್ಠಿ ನಿರ್ವಹಿಸಿದರು. ಬಾಲಕೃಷ್ಣ ಬೇರಿಕೆ ಸ್ವಾಗತಿಸಿ, ವಂದಿಸಿದರು.