ವ್ಯಕ್ತಿ ಸಾಧನೆ ಸ್ವಸಮುದಾಯ-ಹುಟ್ಟೂರಿಗೂ ಹೆಮ್ಮೆದಾಯಕ : ವಿದ್ಯಾಪ್ರಸನ್ನಶ್ರೀ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)
ಮುಂಬಯಿ, ಜು.30: ಕಾರ್ಕಳದ ಕುಗ್ರಾಮದಲ್ಲಿ ಹುಟ್ಟಿ ತೀರಾ ಬಡತನ ಎದುರಿಸಿ ತೇಜೋವಧೆಯಂತಹ ಅವಮಾನ ಸಹಿಸಿ ತುಂಬಾ ಎಳೆವಯಸ್ಸಿನಲ್ಲೇ ಬದುಕು ಕಟ್ಟಿಕೊಂಡ ನಮ್ಮೂರ ಹುಡುಗನೊಬ್ಬ ಇವತ್ತು ದೊಡ್ಡದೊಡ್ಡ ಸೆಲೆಬ್ರೆಟಿಗಳಿಗೆ ಕೇಶ ವಿನ್ಯಾಸ ಮಾಡುತ್ತಿರುವುದು ಅಭಿನಂದನಾರ್ಹ. ಜನ್ಮಭೂಮಿಯಿಂದ ಕರ್ಮಭೂಮಿಗೆ ಹೋಗಿ ಅತೀ ಶೀಘ್ರವಾಗಿ ಅತೀ ದೊಡ್ಡ ಸಾಧನೆ ಮಾಡಿರುವುದು ಆಶ್ಚರ್ಯವಾದರೂ ಅಭಿಮಾನದ ಸಂಗತಿಯೇ ಸರಿ. ಹುಟ್ಟು ಕೌರಿಕನೊಬ್ಬ ಅಂತರಾಷ್ಟ್ರೀಯ ಮಟ್ಟದಲ್ಲಿ ವ್ಯಾಪಕವಾಗಿ ಪ್ರಸಿದ್ಧಿ ಆಗಿರುವುದೇ ಶ್ರೇಷ್ಠ ಸಾಧನೆ. ಇದು ಹುಟ್ಟೂರ ತುಳುನಾಡಿಗೂ ಹೆಮ್ಮೆದಾಯಕವಾಗಿದೆ ಎಂದು ಜಗದ್ಗುರು ಶ್ರೀ ಮಧ್ವಾಚಾರ್ಯ ಮಹಾಸಂಸ್ಥಾನಮ್ ಶ್ರೀ ಸಂಪುಟ ನರಸಿಂಹಸ್ವಾಮಿ ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ಮಠದ ಮಠಾಧೀಶರಾದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ತಿಳಿಸಿದರು.
ಕಳೆದ ಬುಧವಾರ ಪೂರ್ವಾಹ್ನ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಅಲ್ಲಿನ ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ಮಠಕ್ಕೆ ಹೇರ್ ಸ್ಟೈಲೋ ಮೂಲಕ ಅಂತರಾಷ್ಟ್ರೀಯ ಹಿರಿಮೆಗೆ ಪಾತ್ರರಾದ ಮುಂಬಯಿನ ಖ್ಯಾತ ಕೇಶ ವಿನ್ಯಾಸಕಾರ, ಶಿವಾ'ಸ್ ಹೇರ್ ಡಿಝೈನರ್'ಸ್ ಪ್ರೈವೇಟ್ ಲಿಮಿಟೆಡ್‍ನ ಆಡಳಿತ ನಿರ್ದೇಶಕ ಡಾ| ಶಿವರಾಮ ಕೆ.ಭಂಡಾರಿ ಭೇಟಿಯನ್ನಿ ತ್ತು ತನ್ನ `ಸ್ಟೈಲಿಂಗ್ ಅಟ್ ದ ಟಾಪ್' ಕನ್ನಡ ಕೃತಿಯನ್ನು ಶ್ರೀಗಳ ಮುಖೇನ ಶ್ರೀ ಸನ್ನಿಧಿಗೆ ಸಮರ್ಪಿಸಿದ ಶುಭಾವಸರದಲ್ಲಿ ಶ್ರೀ ವಿದ್ಯಾಪ್ರಸನ್ನರು ಶಿವರಾಮ ಭಂಡಾರಿ ಅವರ ಸಾಧನೆ ಅರಿತು ಅಭಿನಂದಿಸಿ ಶಲು ಹೊದಿಸಿ ಮಂತ್ರಾಕ್ಷತೆ, ಪ್ರಸಾದವನ್ನಿತ್ತು ಅನುಗ್ರಹಿಸಿದÀರು.
ಈ ಸಂದರ್ಭದಲ್ಲಿ ಕೃತಿಕರ್ತೆ ಜಯಶ್ರೀ ಜಿ.ಶೆಟ್ಟಿ, ಹಿರಿಮೆಯ ಪತ್ರಿಕಾ ಛಾಯಾಕಾರ ಗೋಪಾಲ ಶೆಟ್ಟಿ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.