ಮುಂಬಯಿ; ಅನಿತಾ ಪಿ.ಪೂಜಾರಿ ತಾಕೊಡೆ ಅವರು ಬರೆದಿರುವ `ಸವ್ಯಸಾಚಿ ಸಾಹಿತಿ' ಹಾಗೂ `ಮೋಹನ ತರಂಗ' ಎರಡು ಕೃತಿಗಳು ನವೆಂಬರ್ 30, ಶನಿವಾರದಂದು ಸಾಂತಕ್ರೂಜ್ ಕಲೀನಾ ಇಲ್ಲಿನ ಮುಂಬಯಿ ವಿಶ್ವವಿದ್ಯಾಲಯದಲ್ಲಿನ ಕವಿ ಕುಸುಮಾಗ್ರಜ ಮರಾಠಿ ಭಾಷಾ ಭವನದಲ್ಲಿ ಮುಂಬಯಿ ವಿಶ್ವವಿದ್ಯಾಲಯದ ಕವಿಕುಸುಮಾಗ್ರಜ ಮರಾಠಿ ಭಾಷಾ ಭವನದಲ್ಲಿ ಬೆಳಿಗ್ಗೆ 11 ಗಂಟೆಯಿಂದ ನಡೆಯುವ ಕಾರ್ಯಕ್ರಮದಲ್ಲಿ ಲೋಕಾರ್ಪಣೆಗೊಳ್ಳಲಿದೆ.
ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಜಿ.ಎನ್ ಉಪಾಧ್ಯ ಅವರ ಅಧ್ಯಕ್ಷತೆಯಲ್ಲಿ ಅನಿತಾ ಅವರ ನಾಲ್ಕನೆಯ ಕೃತಿ `ಸವ್ಯಸಾಚಿ ಸಾಹಿತಿ' ಲೋಕಾರ್ಪಣೆಗೊಳ್ಳಲಿದೆ. `ಸಾಹಿತ್ಯ ಸುಧೆ' ಪ್ರಕಾಶನದಿಂದ ಪ್ರಕಟವಾದ ಈ ಕೃತಿ, ಎಂ.ಎ ಪದವಿಗೆ ಡಾ| ಜಿ.ಎನ್ ಉಪಾಧ್ಯ ಅವರ ಮಾರ್ಗದರ್ಶನ ದಿಂದ ಸಿದ್ಧಪಡಿಸಿದ, ಡಾ.ಬಿ.ಜನಾರ್ದನ ಭಟ್ ಅವರ ಜೀವನ ಸಾಧನೆಯ ಕುರಿತು ಬರೆದಿರುವ ಶೋಧ ಸಂಪ್ರಬಂಧವಾಗಿದೆ. ಈ ಕೃತಿಯನ್ನು ಡಾ. ಈಶ್ವರ್ ಅಲೆವೂರು ಪರಿಚಯಿಸಲಿರುವರು. 2019 ಮೇ ತಿಂಗಳಿನಲ್ಲಿ ನಡೆದ ಕನ್ನಡ ಎಂ.ಎ ಪರೀಕ್ಷೆಯಲ್ಲಿ ಸರ್ವಾಧಿಕ ಅಂಕ ಗಳಿಸಿ, ಪ್ರಥಮ ರ್ಯಾಂಕ್ ಪಡೆದ ಅನಿತಾ ಪಿ.ಪೂಜಾರಿ ತಾಕೊಡೆ ಅವರಿಗೆ ಚೊಚ್ಚಲ ಎಂ.ಬಿ ಕುಕ್ಯಾನ್ ಚಿನ್ನದ ಪದಕವನ್ನು ರಂಗತಜ್ಞ ಜೆ.ಲೋಕೇಶ್, ಸಾಹಿತಿ ಅನುಬೆಳ್ಳೆ, ಅಖಿಲ ಭಾರತ ತುಳು ಒಕ್ಕೂಟದ ಅಧ್ಯಕ್ಷ ಧರ್ಮಪಾಲ ದೇವಾಡಿಗ, ಸಾಹಿತಿ ಶಾಂತಾರಾಮ ವಿ.ಶೆಟ್ಟಿ ಮತ್ತಿತರ ಗಣ್ಯರ ಉಪಸ್ಥಿತಿಯಲ್ಲಿ ವಿವಿ ವತಿಯಿಂದ ಪ್ರದಾನಿಸಲಾಗುವುದು.
ಕರ್ನಾಟಕ ಸಂಘ ಮುಂಬಯಿಯ ಅಧ್ಯಕ್ಷ ಮನೋಹರ ಎಂ.ಕೋರಿ ಅಧ್ಯಕ್ಷತೆಯಲ್ಲಿ ನಡೆಯಲಿರುವ ಮಧ್ಯಾಹ್ನ 2.30ರಿಂದ ಆರಂಭವಾಗುವ ಕಾರ್ಯಕ್ರಮದಲ್ಲಿ ಮುಂಬಯಿಯ ಹೆಸರಾಂತ ರಂಗನಟ ಮೋಹನ್ ಮಾರ್ನಾಡ್ ಅವರ ಜೀವನ ಸಾಧನೆಯ ಹಿನ್ನೆಲೆಯಲ್ಲಿ ರಚಿಸಿದ ಅನಿತಾ ಅವರ ಐದನೆಯ ಕೃತಿ `ಮೋಹನ ತರಂಗ' ಬಿಡುಗಡೆ ಆಗಲಿದೆ. ಕರ್ನಾಟಕ ಸಂಘ ಮುಂಬಯಿ ಪ್ರಕಾಶನದ ಮೂಲಕ ಪ್ರಕಟಗೊಂಡ ಈ ಕೃತಿಯನ್ನು ರಂಗ ಕಲಾವಿದ ಅವಿನಾಶ್ ಕಾಮತ್ ಅವರು ಪರಿಚಯಿಸಲಿದ್ದಾರೆ. ಮುಖ್ಯ ಅತಿಥಿüಗಳಾಗಿ ಜೆ.ಲೋಕೇಶ್, ಗೌರವಾನ್ವಿತ ಅತಿಥಿüಗಳಾಗಿ, ಎನ್.ಸಿ ಶೆಟ್ಟಿ, ಧರ್ಮಪಾಲ ದೇವಾಡಿಗ, ಡಾ| ಜಿ.ಎನ್ ಉಪಾಧ್ಯ, ಡಾ.ಬಿ.ಆರ್ ಮಂಜುನಾಥ್, ಮಹೇಶ್ ತಲಕಾಡ್, ಎಂ.ಗಣೇಶ ಪಾಲ್ಗೊಳ್ಳಲಿರುವರು.
ಮೂಲತಃ ಮೂಡಬಿದರೆ ತಾಕೊಡೆ ಇಲ್ಲಿಯವರಾದ ಅನಿತಾ, ಮೈಸೂರಿನ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದಿಂದ ಬಿ.ಎ ಪದವಿ ಪಡೆದಿದ್ದಾರೆ. ಕಳೆದ ಎರಡು ದಶಕಗಳಿಂದ ಮುಂಬಯಿ ವಾಸಿಯಾಗಿ ರುವ ಇವರು ಪ್ರತಿಭಾವಂತ ವಿದ್ಯಾಥಿರ್üನಿ. ಕವಿಯಾಗಿ, ಕಥೆಗಾರ್ತಿಯಾಗಿ, ಅಂಕಣಕಾರೆಯಾಗಿ ಈಗಾಗಲೇ ಪ್ರಸಿದ್ಧಿ ಪಡೆದಿದ್ದಾರೆ. ಕಾಯುತ್ತಾ ಕವಿತೆ, ಅಂತರಂಗದ ಮೃದಂಗ (ಕನ್ನಡ ಕವನ ಸಂಕಲನ) ಮರಿಯಲದ ಮದಿಮಾಲ್ (ತುಳು ಕವನ ಸಂಕಲನ) ಇವರ ಪ್ರಕಟಿತ ಕೃತಿಗಳಾಗಿವೆ. `ಅಂತರಂಗದ ಮೃದಂಗ' ಕೃತಿಗೆ ಜಗಜ್ಯೋತಿ ಕಲಾವೃಂದ (ರಿ.) ಸಂಸ್ಥೆಯಿಂದ `ಶೀಮತಿ ಸುಶೀಲ ಶೆಟ್ಟಿ ಸ್ಮಾರಕ ಕಾವ್ಯ ಪ್ರಶಸ್ತಿ' ಹಾಗೂ ಶಿಕಾರಿಪುರದ ಜನಸ್ಪಂದನ ಟ್ರಸ್ಟ್ (ರಿ.) ವತಿಯಿಂದ `ಅಲ್ಲಮ ಸಾಹಿತ್ಯ ಪ್ರಶಸ್ತಿ' ಲಭಿಸಿದೆ. ಈ ಬಾರಿಯ ಪ್ರತಿಷ್ಠಿತ ಮೈಸೂರು ದಸರಾ ಕವಿಗೋಷ್ಟಿಯಲ್ಲಿಯೂ ಭಾಗವಹಿಸಿದ್ದಾರೆ. ಸೃಜನಾ ಲೇಖಕಿಯರ ಬಳಗ ಮುಂಬಯಿ ಇದರ ಜೊತೆಕೋಶಾಧಿಕಾರಿ ಹಾಗೂ ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ (ರಿ.) ಇದರ ಕಾರ್ಯಕಾರಿ ಸಮಿತಿ ಸದಸ್ಯೆ ಆಗಿ ಸೇವಾ ನಿರತರಾಗಿದ್ದಾರೆ.