ಕಾರ್ಕಳ ತಾಲ್ಲೂಕಿನ ಕುಕ್ಕುಂದೂರಿನ ಮಹಾತ್ಮಾ ಗಾಂಧಿ ವಸತಿ ಪ್ರೌಢಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ಗ್ರಾಹಕ ಮಾಹಿತಿ ಕಾರ್ಯಕ್ರಮ ನಡೆಯಿತು. ಮೂಡುಬಿದಿರೆಯ ಗ್ರಾಹಕ ಸಂಘಟನೆಯ ಅಧ್ಯಕ್ಷ, ರಾಜ್ಯ ಸಂಪನ್ಮೂಲ ವ್ಯಕ್ತಿ, ದ.ಕ.ಜಿಲ್ಲಾ ಗ್ರಾಹಕ ಸಂಘಟನೆ ಒಕ್ಕೂಟದ ಜತೆ ಕಾರ್ಯದರ್ಶಿ ರಾಯೀ ರಾಜಕುಮಾರರು ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಅವರು ತಮ್ಮ ಮಾಹಿತಿ ಕಾರ್ಯಕ್ರಮದಲ್ಲಿ ಬಳಕೆದಾರರ ಹಿತ ರಕ್ಷಣಾ ಕಾಯಿದೆಯ ಎಲ್ಲಾ ಅಂಶಗಳನ್ನೂ ತಿಳಿಸಿಕೊಟ್ಟರು. ಗ್ರಾಹಕ ಹಕ್ಕು ಹಾಗೂ ಕರ್ತವ್ಯಗಳ ಸಂಪೂರ್ಣ ಮಾಹಿತಿಯನ್ನು ಹಲವಾರು ಉದಾಹರಣೆಗಳ ಮೂಲಕ ಪ್ರಸ್ತುತ ಪಡಿಸಿದರು. ವಿದ್ಯಾರ್ಥಿಗಳು ಕೇಳಿದ ಹಲವಾರು ಪ್ರಶ್ನೆಗಳಿಗೆ ಸೂಕ್ತ ಉತ್ತರವನ್ನು ನೀಡಿ ಸಮಗ್ರ ಮಾರ್ಗದರ್ಶನ ಇತ್ತರು.
ವೇದಿಕೆಯಲ್ಲಿ ಶಾಲಾ ಆಡಳಿತಾಧಿಕಾರಿ ಎಂ.ಸಿ.ಆಚಾರ್, ಎಲ್ಲಾ ಶಿಕ್ಷಕ ಬಂಧುಗಳೂ, ಹಾಜರಿದ್ದರು. ಶಾಲಾ ಮುಖ್ಯೋಪಾಧ್ಯಾಯ ಎಂ. ಸಂಜೀವ ಪೂಜಾರಿ, ಸ್ವಾಗತಿಸಿದರು. ಗ್ರಾಹಕ ಕ್ಲಬ್ ನ ಸಂಯೋಜಕ ಶಿಕ್ಷಕಿ ಶ್ರೀಮತಿ ಜ್ಯೋತಿ ವಂದಿಸಿದರು. ವಿದ್ಯಾರ್ಥಿಗಳಿಗೆ ಗ್ರಾಹಕ ಛಾಯಾ ಪತ್ರಿಕೆಯನ್ನು ಉಚಿತವಾಗಿ ವಿತರಿಸಲಾಯಿತು.