ಮುಂಬಯಿ, ಡಿ.23: ಜಗದ್ಗುರು ಶ್ರೀ ಮಧ್ವಾಚಾರ್ಯ ಮಹಾ ಸಂಸ್ಥಾನದ ಉಡುಪಿ ಶ್ರೀ ಪೇಜಾವರ ಅಧೋಕ್ಷಜ ಮಠಧೀಶ ಪರಮಪೂಜ್ಯ ಯತಿಕುಲ ಚಕ್ರವರ್ತಿ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಪಾದಂಗಳವರ ಆರೋಗ್ಯ ವೃದ್ಧಿಗಾಗಿ ಸೂರ್ಯಗ್ರಹಣದ ಸಂದರ್ಭದಲ್ಲಿ ಡಿ.26ನೇ ಗುರುವಾರ ಬೆಳಿಗ್ಗೆ 8.00 ಗಂಟೆಯಿಂದ 11.00 ಗಂಟೆಯವರೆಗೆ ಶ್ರೀ ಪೇಜಾವರ ಮಠ, ಪ್ರಭಾತ್ ಕಾಲೋನಿ, ಸಾಂತಾಕ್ರೂಜ್ ಪೂರ್ವ, ಮುಂಬಯಿ ಇಲ್ಲಿ ವಿಶೇಷ ರೀತಿಯ ಪೂಜಾಧಿಗಳನ್ನು ಹಮ್ಮಿಕೊಳ್ಳಲಾಗಿದೆ.
ಅಂದು ಬೆಳಿಗ್ಗೆ 8.00 ಗಂಟೆಗೆ ಮಠದಲ್ಲಿನ ಶಿಲಾಮಯ ಮಂದಿರದ ಶ್ರೀಕೃಷ್ಣ ದೇವರ ಸನ್ನಿಧಿಯಲ್ಲಿ ಧನ್ವಂತರೀ ಜಪ ಹಾಗೂ ವಿಷ್ಣು ಸಹಸ್ರ ನಾಮಾರ್ಜನೆ, ಉಪರಾಗ ಶಾಂತಿಯನ್ನು ಮಾಡುವುದಾಗಿ ಮಠದ ವಿದ್ವಾನರು ಸಂಕಲ್ಪ ಮಾಡಿದ್ದಾರೆ.
ಆ ಪ್ರಯುಕ್ತ ಶ್ರೀ ಗುರುಗಳ ಭಕ್ತರು ಹಾಗೂ ಸಕಲ ಶಿಷ್ಯವೃಂದ ಈ ಧಾರ್ಮಿಕ ಕಾಯಕ, ಜಪ ಪೂಜಾಧಿಗಳಲ್ಲಿ ಭಾಗಿಗಳಾಗಬೇಕಾಗಿ ಪೂರ್ಣಪ್ರಜ್ಞ ವಿದ್ಯಾಪೀಠ ಪ್ರತಿಷ್ಠಾನದ ಆಡಳಿತ ಮಂಡಳಿ, ಪೇಜಾವರ ಮಠ ಮುಂಬಯಿ ಶಾಖೆಯ ಪ್ರಬಂಧಕರುಗಳಾದ ವಿದ್ವಾನ್ ಪ್ರಕಾಶ ಆಚಾರ್ಯ ರಾಮಕುಂಜ, ಡಾ| ರಾಮದಾಸ ಉಪಾಧ್ಯಾಯ ರೆಂಜಾಳ, ಹರಿ ಭಟ್, ನಿರಂಜನ್ ಗೋಗ್ಟೆ ಈ ಮೂಲಕ ವಿನಂತಿಸಿದ್ದಾರೆ.