ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಪಾದಂಗಳವರ ಕ್ಷೇಮಕ್ಕಾಗಿ ಪ್ರಾರ್ಥನೆ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)
ಮುಂಬಯಿ, ಡಿ.26: ವಿಶ್ವದ ಬಾನಂಗಳದಲ್ಲಿ ಈ ವರ್ಷದ ಕೊನೆಯ ಸೂರ್ಯಗ್ರಹಣ ಅಂದೆಣಿಸಿ ಖಗೋಳದ ವಿಸ್ಮಯ ಎಂದೇ ತಿಳಿಯಲಾದ ಖಗ್ರಾಸದಿಂದ ಕಂಕಣದತ್ತ ಕಂಡ ಗ್ರಹಣ ಪಯಣದ ವೈಭವದಲ್ಲಿ ಗೋಚರಿತ ಈ ಶತಮಾನದ ವಿದ್ಯಾಮಾನಕ್ಕೆ ಸಾಕ್ಷಿಯಾದ ಸೂರ್ಯಗ್ರಹಣದ ಸಂದರ್ಭದಲ್ಲಿ ಸಾಂತಾಕ್ರೂಜ್ ಪೂರ್ವದ ಶ್ರೀ ಪೇಜಾವರ ಮಠದಲ್ಲಿ ಗ್ರಹಣ ಶಾಂತಿ ಸಹಿತ ವಿಶೇಷ ರೀತಿಯ ಪೂಜಾಧಿಗಳನ್ನು ನೆರವೇರಿಸಲಾಯಿತು.
ಇಂದಿಲ್ಲಿ ಗುರುವಾರ ಸೂರ್ಯಗ್ರಹಣದ ನಿಮಿತ್ತ ಮಠದಲ್ಲಿನ ಶಿಲಾಮಯ ಮಂದಿರದ ಶ್ರೀಕೃಷ್ಣ ಮುಖ್ಯ ಪ್ರಾಣ ಸನ್ನಿಧಿಯಲ್ಲಿ ಧನ್ವಂತರಿ ಜಪ, ನಾಮಾತ್ರಯ ಜಪ, ವಿಷ್ಣು ಸಹಸ್ರ ನಾಮ, ಪಾರಾಯಣ, ಉಪರಾಗ ಶಾಂತಿ, ಗ್ರಹಣ ಶಾಂತಿ ಇನ್ನಿತರ ಧಾರ್ಮಿಕ ವಿಧಿವಿಧಾನಗಳನ್ನು ನಡೆಸಲಾಯಿತು. ಅಂತೆಯೇ ನಡೆದಾಡುವ ದೇವರು, ಕೋಟಿಗೊಬ್ಬ ಸನ್ಯಾಸಿ ಅಂದೆನಿಸಿದ ಜಗದ್ಗುರು ಶ್ರೀ ಮಧ್ವಾಚಾರ್ಯ ಮಹಾ ಸಂಸ್ಥಾನದ ಉಡುಪಿ ಶ್ರೀ ಪೇಜಾವರ ಅಧೋಕ್ಷಜ ಮಠಧೀಶ ಪೂಜ್ಯ ಯತಿಕುಲ ಚಕ್ರವರ್ತಿ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಇತ್ತೀಚಿನ ದಿನಗಳಿಂದ ತೀವ್ರ ಅಸ್ವಸ್ಥರಾಗಿರುವ ಕಾರಣ ಶ್ರೀಪಾದಂಗಳವರ ಕ್ಷೇಮ ಮತ್ತು ಶೀಘ್ರವಾಗಿ ಗುಣಮುಖರಾಗಿ ಆರೋಗ್ಯ ಪುನಸ್ಸಂಪಾದನೆಗಾಗಿ ಶ್ರೀಗಳಿಂದ ಸುಧಾಪಾಠ ಕೇಳಿದ ವಿದ್ವಾಂಸರು, ಮಠದ ಶ್ರೀಗಳ ಶಿಷ್ಯವೃಂದವು ವಿಶೇಷ ಪ್ರಾರ್ಥನೆ ಸಲ್ಲಿಸಿತು.
ಚಂದ್ರಾ ಸೂರ್ಯನನ್ನು ಸಂಪೂರ್ಣ ಮರೆ ಮಾಚದೆ ಅದರ ಅಂಚುಗಳಿಂದ ಬೆಳಕು ತೂರಿ ಬರುತ್ತಾ ಬಳೆ ಮಾದರಿಯಲ್ಲಿ ಕಂಡು ಕಂಕಣ ಗ್ರಹಣದ (ಬೆಳಿಗ್ಗೆ ಸುಮಾರು 9.25 ಗಂಟೆಗೆ) ಗರಿಷ್ಟ ಪ್ರಮಾಣದ ಗ್ರಹಣದ ವೇಳೆಗೆ ಪೇಜಾವರ ಮಠದ ಪ್ರಬಂಧಕರುಗಳಾದ ಡಾ| ರಾಮದಾಸ ಉಪಾಧ್ಯಾಯ ರೆಂಜಾಳ, ವಿದ್ವಾನ್ ಪ್ರಕಾಶ ಆಚಾರ್ಯ ರಾಮಕುಂಜ, ಹರಿ ಭಟ್, ಧರೆಗುಡ್ಡೆ ಶ್ರೀನಿವಾಸ್, ಪವನ ಭಟ್, ಆದಿತ್ಯ ಕಾರಂತ, ವಿಷ್ಣುತೀರ್ಥ ಸಾಲಿ ಸೇರಿದಂತೆ ಇನ್ನಿತರ ಪುರೋಹಿತರು ಪೂಜಾಧಿಗಳನ್ನು ನೆರವೇರಿಸಿದರು.
ಈ ಸಂದರ್ಭದಲ್ಲಿ ಪೂರ್ಣಪ್ರಜ್ಞ ವಿದ್ಯಾಪೀಠ ಪ್ರತಿಷ್ಠಾನದ ಆಡಳಿತ ಮಂಡಳಿ ಸದಸ್ಯರು, ಬಿ.ಆರ್ ಗುರುಮೂರ್ತಿ, ಪೇಜಾವರ ಮಠ ಮುಂಬಯಿ ಶಾಖೆಯ ನಿರಂಜನ್ ಭಟ್ ಗೋಗ್ಟೆ, ಸುರೇಂದ್ರಕುಮಾರ್ ಹೆಗ್ಡೆ, ಶೇಖರ್ ಸಾಲ್ಯಾನ್, ಮಿತ್ರಾ ಶೆಟ್ಟಿ, ಬಿರ್ಲಾ ಸಂಸ್ಥೆಯ ಭರತ್‍ಕುಮಾರ್ ಸಿಂಗ್, ಡಾ| ಎಂ.ಸೀತಾರಾಮ ಆಳ್ವ, ಹುನ್ನೂರು ಪರಿವಾರ, ಶ್ರೀ ಗುರುಗಳ ಭಕ್ತರು ಹಾಗೂ ಸಕಲ ಶಿಷ್ಯವೃಂದ ಈ ಧಾರ್ಮಿಕ ಕಾಯಕ, ಜಪ ಪೂಜಾಧಿಗಳಲ್ಲಿ ಭಾಗಿಗಳಾಗಿ ಶ್ರೀಗಳ ವೇಗದ ಚೇತರಿಕೆ ಪ್ರಾರ್ಥನೆಗೈದರು.