ಪಿ.ನಾರಾಯಣ ರಾವ್ ನೂತನ ಅಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆ
ಮುಂಬಯಿ, ಡಿ.27: ಕೂಟ ಮಹಾಜಗತ್ತು ಸಾಲಿಗ್ರಾಮ (ರಿ.) ಮುಂಬಯಿ ಅಂಗ ಸಂಸ್ಥೆಯು ತನ್ನ ವಾರ್ಷಿಕ ಮಹಾಸಭೆ-ಸ್ನೇಹಮಿಲನವನ್ನು ಕಳೆದ ಬುಧವಾರ ಮಾಟುಂಗಾ ಪೂರ್ವದ ಭಾವುದಾಜಿ ರಸ್ತೆಯಲ್ಲಿನ ಮೈಸೂರು ಅಸೋಸಿಯೇಶನ್‍ನ ಕಿರು ಸಭಾಗೃಹದಲ್ಲಿ ಕೂಟದ ಮುಂಬಯಿ ಅಂಗ ಸಂಸ್ಥೆಯ ಅಧ್ಯಕ್ಷ ಯು.ಎನ್ ಐತಾಳ್ ಅಧ್ಯಕ್ಷತೆಯಲ್ಲಿ ಜರುಗಿತು.
ಈ ಸಂದರ್ಭದಲ್ಲಿ ಕೂಟ ಬಂಧುಗಳು, ಸದಸ್ಯರು ಉಪಸ್ಥಿತರಿದ್ದು ಸಂಸ್ಥೆಯ2019-21ನೇ ಅವಧಿಯ ಕಾರ್ಯಕಾರಿ ಸಮಿತಿಗೆ ನೂತನ ಸದಸ್ಯರನ್ನಾಗಿ ಪಿ.ನಾಗೇಶ್ ರಾವ್, ರಮೇಶ್ ಎಂ.ರಾವ್, ನಿತ್ಯಾನಂದ ಎನ್.ರಾವ್, ಪಿ.ನಾರಾಯಣ ರಾವ್, ರವಿ ಆರ್.ರಾವ್, ಅಡೂರು ಹರ್ಷ ರಾವ್, ಅಶೋಕ್ ಕಾರಂತ್, ರೋಹಿಣಿ ಬೈರಿ, ಗೀತಾ ಆರ್.ಹೆರಲೆ ಆಯ್ಕೆ ಗೊಳಿಸಲಾಯಿತು. ಕೊನೆಯಲ್ಲಿ ಆಯ್ಕೆಗೊಂಡ ಸದಸ್ಯರು ಸರ್ವಾನುಮತದಿಂದ ಪಿ.ನಾರಾಯಣ ರಾವ್ ಅವರನ್ನು ನೂತನ ಅಧ್ಯಕ್ಷರನ್ನಾಗಿ ಆರಿಸಿದರು. ಎ.ಎಸ್.ಎನ್ ರಾವ್ ಆಯ್ಕೆ ಪ್ರಕ್ರಿಯೆ ನಡೆಸಿ ಸದಸ್ಯರ ಯಾದಿ ಪ್ರಕಟಿಸಿದರು. ನಿರ್ಗಮನ ಅಧ್ಯಕ್ಷ ಯು.ನಾರಾಯಣ ಐತಾಳ್ ಅವರು ನೂತನ ಅಧ್ಯಕ್ಷರಿಗೆ ಪುಷ್ಫಗುಪ್ಚವನ್ನಿತ್ತು ಅಧಿಕಾರ ಹಸ್ತಾಂತರಿಸಿ ಅಭಿನಂದಿಸಿದರು.
ನಮ್ಮ ಕೂಟ ಬಂಧುಗಳು ಸಮಾಜದ ಪ್ರತಿಯೊಂದು ಕಾರ್ಯಚಟುವಟಿಕೆ, ಸೇವೆಗಳಲ್ಲಿ ಸಕ್ರೀಯರಾಗಬೇಕು. ಆವಾಗಲೇ ನಮ್ಮ ಸಂಸ್ಕೃತಿ ಜೀವಾಳವಾಗಿ ಮುನ್ನಡೆಯುವುದು. ಇದು ನಮ್ಮ ಮುಂದಿನ ಜನಾಂಗಕ್ಕೂ ಪ್ರೇರಕ ಮತ್ತು ಮಾದರಿಯಾಗುವುದು. 2020ರ ಜನವರಿಯಲ್ಲಿ ಬೆಂಗಳೂರುನಲ್ಲಿ ಜರಗುವ ವಿಶ್ವಕೂಟ ಉತ್ಸವ ಮತ್ತು ಉಡುಪಿಯಲ್ಲಿ ನೆರವೇರಲಿರುವ ಸಾಲಿಗ್ರಾಮ ಜಾತ್ರೆಯಲ್ಲಿ ಪಾಲ್ಗೊಳ್ಳುವಂತೆ ನಿರ್ಗಮನ ಅಧ್ಯಕ್ಷ ನಾರಾಯಣ ಐತಾಳ್ ಕರೆ ನೀಡಿದರು.
ನೂತನ ಅಧ್ಯಕ್ಷ ಪಿ.ನಾರಾಯಣ ರಾವ್ ಮಾತನಾಡಿ ನಾವೆಲ್ಲರೂ ಒಂದಾಗಿ ನಮ್ಮ ಸಮಾಜದ ಮುನ್ನಡೆ ಬಗ್ಗೆ ಯೋಚಿಸಿ ಕ್ಷೇಮಾಭಿವೃದ್ಧಿ ಶ್ರಮಿಸಬೇಕು. ಅದಕ್ಕಾಗಿ ಕನಿಷ್ಠ ನಮ್ಮ ಸಂಸ್ಥೆಗೆ ಸ್ವಂತಃ ಕಛೇರಿಯನ್ನು ರೂಪಿಸಬೇಕು. ನೂತನ ಸದಸ್ಯರು ಸಂಸ್ಥೆಗೆ ಹೆಚ್ಚಿನ ಸದಸ್ಯರನ್ನು ಮಾಡಿ ಸಂಸ್ಥೆ ಹಾಗೂ ಸಮಾಜವನ್ನು ಬಲಾಢ್ಯಪಡಿಸುವಲ್ಲಿ ಸಕ್ರೀಯರಾಗಬೇಕು. ಆ ನಿಟ್ಟಿನಲ್ಲಿ ಸರ್ವರೂ ಜೊತೆಯಾಗಿ ಶ್ರಮಿಸೋಣ ಎಂದು ಕರೆಯಿತ್ತರು.
ವಾರ್ಷಿಕ ಸ್ನೇಹಮಿಲನದ ಅಂಗವಾಗಿ ಸದಸ್ಯರು ಮತ್ತು ಮಕ್ಕಳು ಮನೋರಂಜನಾ ಕಾರ್ಯಕ್ರಮ ಪ್ರಸ್ತುತ ಪಡಿಸಿದರು. ಕು| ಅನಿಷಾ ರಘುರಾಮ ಹೆರಲೆ ಪ್ರಾರ್ಥನೆಯನ್ನಾಡಿದರು. ದೀಪಕ್ ಕಾರಂತ್ ಮತ್ತು ಕೆ. ನಾರಾಯಣ ರಾವ್ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿ ಸಂಸ್ಥೆಯು ಮುನ್ನಡೆದು ಬಂದಿರುವ ಬಗ್ಗೆ ಸ್ಥೂಲವಾದ ಮಾಹಿತಿಯನ್ನಿತ್ತರು. ಇದೇ ಸಂದರ್ಭದಲ್ಲಿ ಪಿ.ನಾಗೇಶ್ ರಾವ್ ಪ್ರಾಯೋಜಿತ ಶೈಕ್ಷಣಿಕ ಪ್ರತಿಭಾ ಪುರಸ್ಕಾರವನ್ನು ಪ್ರತಿಭಾನ್ವಿತ ವಿದ್ಯಾಥಿರ್üಗಳಾದ ರಕ್ಷಿತ್ ಆರ್.ರಾವ್ ಮತ್ತು ಕು| ಅನಿಷಾ ಆರ್.ಹೆರಲೆ ಇವರಿಗೆ ಪ್ರದಾನಿಸಿದರು. ಹಾಗೂ ವಿಜೇತರಿಗೆ ಬಹುಮಾನಗಳನ್ನು ನೀಡಿ ಅಭಿನಂದಿಸಲಾಯಿತು. ಕೋಶಾಧಿಕಾರಿ ರಮೇಶ್ ಎಂ.ರಾವ್ ಸಭಾ ಕಲಾಪ ನಡೆಸಿ ಆಭಾರ ಮನ್ನಿಸಿದರು.