ಜೆ.ಪಿ ಪ್ರಕಾಶನದ ಸಾರಥ್ಯದಲ್ಲಿ ತುಲು ಲಿಪಿ ಕಲಿಕಾ ಶಿಬಿರದ ಉದ್ಘಾಟನೆ
ಮುಂಬಯಿ, ಡಿ.28: ಗೋರೆಗಾಂವ್ ಕರ್ನಾಟಕ ಸಂಘ ಮತ್ತು ಜೆ.ಪಿ ಪ್ರಕಾಶನ ಮುಂಬಯಿ ಸಂಯುಕ್ತ ಆಶ್ರಯದಲ್ಲಿ ತುಲು ಲಿಪಿ ಕಲಿಕಾ ಶಿಬಿರದ ಉದ್ಘಾಟನಾ ಕಾರ್ಯಕ್ರಮ ಇದೇ ಬರುವ ಜ.05ನೇ ಆದಿತ್ಯವಾರ ಸಂಜೆ 3.00 ಗಂಟೆಗೆ ಗೋರೆಗಾಂ ಪಶ್ಚಿಮದ ಎಸ್.ವಿ ರೋಡ್ ಸನಿಹದ ಆರೇ ರಸ್ತೆಯ ಕೇಶವ ಗೋರೆ ಸಭಾಗೃಹದಲ್ಲಿ ನಡೆಯಲಿದೆ ಎಂದು ಜೆ.ಪಿ ಪ್ರಕಾಶನದ ಅಧ್ಯಕ್ಷ ಜಯಕರ ದೇಜಪ್ಪ ಪೂಜಾರಿ ತಿಳಿಸಿದ್ದಾರೆ.
Jayakara D.Poojary Narayana Mendon
Surendrakumar Hegde S R Bandimar
ಗೋರೆಗಾಂವ್ ಕರ್ನಾಟಕ ಸಂಘದ ಅಧ್ಯಕ್ಷ ನಾರಾಯಣ ಆರ್.ಮೆಂಡನ್ ಅಧ್ಯಕ್ಷತೆಯಲ್ಲಿ ಜರುಗುವ ಕಾರ್ಯಕ್ರಮದಲ್ಲಿ ಕನ್ನಡ ಕಲಾವಿದರ ಪರಿಷತ್ತು ಮಹಾರಾಷ್ಟ್ರ ಇದರ ಅಧ್ಯಕ್ಷ ಡಾ| ಸುರೇಂದ್ರಕುಮಾರ್ ಹೆಗ್ಡೆ ಶಿಬಿರ ಉದ್ಘಾಟಿಸಲಿದ್ದಾರೆ. ಟೈಮ್ಸ್ ಆಫ್ ಕುಡ್ಲ ಪತ್ರಿಕೆಯ ಪ್ರಧಾನ ಸಂಪಾದಕ ಎಸ್.ಆರ್ ಬಂಡಿಮಾರ್ ಆಗಮಿಸಿ ತುಲು ಲಿಪಿ ಕಲಿಕಾ ಫಲಕದ ಅನಾವರಣ ಮಾಡುವರು. ಸಂಘಟಕರಾದ ಜಿ.ಟಿ ಆಚಾರ್ಯ, ಮುಂಡ್ಕೂರು ಸುರೇಂದ್ರ ಸಾಲಿಯಾನ್, ರಮೇಶ್ ಶೆಟ್ಟಿ ಪಯ್ಯಾರ್, ನಿತ್ಯಾನಂದ ಡಿ. ಕೋಟ್ಯಾನ್, ಎ.ಕೆ ಹರೀಶ್, ಕವಿ, ಲೇಖಕ ಪೇತ್ರಿ ವಿಶ್ವನಾಥ ಶೆಟ್ಟಿ ಅತಿಥಿü ಅಭ್ಯಾಗತರಾಗಿ ಪಾಲ್ಗೊಳ್ಳಲಿದ್ದಾರೆ.
ತುಳು ಭಾಷೆಯೊಂದಿಗೆ ತುಳು ಲಿಪಿಯ ಉಳಿವು, ತುಳು ಭಾಷೆಯನ್ನು ಸಂವಿಧಾನದ ಎಂಟನೇ ಪರಿಚ್ಛೇಯಕ್ಕೆ ಸೇರಿಸುವ ಅಗತ್ಯದ ಬಗ್ಗೆ ದಯಾಸಾಗರ ಚೌಟ, ನಾರಾಯಣ ಶೆಟ್ಟಿ ನಂದಳಿಕೆ, ಸಂತೋಷ ಮುದ್ರಾಡಿ ಮಾತನಾಡಲಿದ್ದಾರೆ. ತುಲು ಲಿಪಿ ಕಲಿಕೆಗೆ ಬೇಕಾಗುವ ಪುಸ್ತಕ, ಪೆನ್, ಪೆನ್ಸಿಲ್, ರಬ್ಬರ್ ಇತ್ಯಾದಿಗಳನ್ನು ಒದಗಿಸಲಾಗುವುದು. ತುಳು ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿ ಗೊಳಿಸುವಂತೆ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತುಳು ಅಧ್ಯಯನದ ಬಗ್ಗೆ ತಿಳಿದು, ಓದಿ ಕಲಿತು ಮುಂಬಯಿನಲ್ಲಿ ತುಳು ಲಿಪಿಯ ಅನುಭವಸ್ಥರಾಗಿ ತುಳು ಮಾತೆಯ ಸೇವೆಗೆ ಸಹಕರಿಸುವಂತೆ ಸಂಘಟಕರು, ಜೆ.ಪಿ ಪ್ರಕಾಶನದ ಅಧ್ಯಕ್ಷ ಜಯಕರ ದೇಜಪ್ಪ ಪೂಜಾರಿ ಮತ್ತು ಗೋರೆಗಾಂವ್ ಕರ್ನಾಟಕ ಸಂಘದ ಕಾರ್ಯದರ್ಶಿ ಗುಣೋದಯ ಐಲ್ ಈ ಮೂಲಕ ತಿಳಿಸಿದ್ದಾರೆ.