(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)
ಮುಂಬಯಿ, ಡಿ.29: ನಡೆದಾಡುವ ದೇವರು, ಕೋಟಿಗೊಬ್ಬ ಸನ್ಯಾಸಿಯಾಗಿದ್ದು ಇಂದಿಲ್ಲಿ ಮುಂಜಾನೆ ದೈವಕ್ಯರಾದ ಜಗದ್ಗುರು ಶ್ರೀ ಮಧ್ವಾಚಾರ್ಯ ಮಹಾ ಸಂಸ್ಥಾನದ ಉಡುಪಿ ಶ್ರೀ ಪೇಜಾವರ ಅದೋಕ್ಷಜ ಮಠಧೀಶ ಯತಿಕುಲ ಚಕ್ರವರ್ತಿ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಅವರಿಗೆ ಇಂದಿಲ್ಲಿ ಸಾಂತಾಕ್ರೂಜ್ ಪೂರ್ವದ ಪೇಜಾವರ ಮಠದಲ್ಲಿ ಶೋಕ ಪ್ರಾರ್ಥನೆ ನೇರವೇರಿಸಲಾಯಿತು.
ಶ್ರೀಗಳ ತವರೂರು ರಾಮಕುಂಜ ಇಲ್ಲಿನ ಮಠದ ಪ್ರಬಂಧಕ ವಿದ್ವಾನ್ ಪ್ರಕಾಶ ಆಚಾರ್ಯ ಮತ್ತು ನಿರಂಜನ ಗೋಗಟೆ ನೇತೃತ್ವಲ್ಲಿ ಮಠದಲ್ಲಿನ ಶಿಲಾಮಯ ಮಂದಿರದ ಶ್ರೀ ಕೃಷ್ಣನ ಸನ್ನಿಧಿಯ ಮುಂಭಾಗ ಶ್ರೀಗಳ ಭಾವಚಿತ್ರವನ್ನಿರಿಸಿ ಪುಷ್ಪಾರ್ಚನೆಗೈದು ಸದ್ಗತಿ ಕೋರಿದರು. ಶ್ರೀಗಳ ಕೃಷ್ಣೈಕ್ಯದ ಸುದ್ದಿ ತಿಳಿಯುತ್ತಿದ್ದಂತೆಯೇ ಮಠದಲ್ಲಿ ಭಾವುಕ, ಮೌನ ಆವರಿಸಿದ್ದು ಮಡುಗಟ್ಟಿದ ವಾತಾವಾರಣದಲ್ಲಿದ್ದ ಪುರೋಹಿತರು, ಶ್ರೀ ಗುರುಗಳ ಭಕ್ತರು, ಶಿಷ್ಯವೃಂದ ಮತ್ತು ಮಠದ ಕರ್ಮಚಾರಿಗಳು ಹಾಜರಿದ್ದು ಸಂತಾಪ ವ್ಯಕ್ತ ಪಡಿಸಿ, ಪುಷ್ಫನಮನ ಸಲ್ಲಿಸಿ ಅಶ್ರುತಾರ್ಪಣೆ ಸಮರ್ಪಿಸಿದರು.