ಕೃಷ್ಣೈಕ್ಯ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ಅವರ ವಿಶ್ವಗುರು ಸಂಸ್ಮರಣಾ ಸಭೆ
ಮುಂಬಯಿ, ಜ.03: ವಾರದಹಿಂದೆಯಷ್ಟೇ ಶ್ರೀ ಕೃಷ್ಣೈಕ್ಯರಾಗಿ ಬೃಂದಾವನದೊಳಗಿನಿಂದಲೇ ಪ್ರೇರಣೆ ಕೊಟ್ಟು ಫಲ ಪ್ರಸಾದ ಕೊಡಿಸಿದ ಪ್ರಾತಃಸ್ಮರಣೀಯ ಜಗದ್ಗುರು ಶ್ರೀ ಮಧ್ವಾಚಾರ್ಯ ಮಹಾ ಸಂಸ್ಥಾನದ ಉಡುಪಿ ಶ್ರೀ ಪೇಜಾವರ ಅಧೋಕ್ಷಜ ಮಠಧೀಶ ಪೂಜ್ಯ ಶ್ರೀ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಅವರದ್ದು ಇನ್ನು ನೆನಹು ಮಾತ್ರ. ಆದರೆ ಭೌತಿಕ ಶರೀರದೊಂದಿಗಿದ್ದಾಗಲೇ ಮಂತ್ರಾಕ್ಷತೆ, ಫಲ ಕೊಟ್ಟು ಆಶೀರ್ವಾದಿಸುತ್ತಿದ್ದ ಪೇಜಾವರ ಸ್ವಾಮಿಗಳು ಈಗ ವೃನ್ದಾವನಸ್ಥರಾದ ಮೇಲೆ ಅವರ ಆಶೀರ್ವಾದದ ರೂಪದಲ್ಲಿ ಏನನ್ನು ಪಡೆದು ಬರುವುದು ಎಂಬ ಚಿಂತೆ ಇದೀಗ ಅವರ ಭಕ್ತ ಸಮೂಹದಲ್ಲಿ ಮೂಡಿದೆ. ಶ್ರೀಗಳು ವೃನ್ದಾವನಸ್ಥರಾದ ಮೇಲೆ ಅವರ ಮೇಲೆ ಅನೇಕ ಜ್ಞಾನಿಗಳು ಶ್ಲೋಕಗಳನ್ನು ರಚಿಸಿದ್ದಾರೆ, ರಚಿಸುತ್ತಿದ್ದಾರೆ. ಅನೇಕ ಅಂತಹ ಶ್ಲೋಕಗಳಲ್ಲಿ ಶ್ರೀಗಳನ್ನು ಅಭೀಷ್ಟಪ್ರದರೆಂದು ಕರೆದಿದ್ದಾರೆ. ಮಹಾತ್ಮರು ಶರೀರದೊಂದಿಗೆ ಇದ್ದಾಗ ಎಷ್ಟು ಶಕ್ತಿ-ಮಹಿಮೆಗಳನ್ನು ಪ್ರಕಟ ಪಡಿಸುತ್ತಾರೆಯೋ, ಅದಕ್ಕಿಂತಲೂ ಅನೇಕ ಪಟ್ಟು ಹೆಚ್ಚಿನ ಶಕ್ತಿ, ಮಹಿಮೆಗಳು ಅವರು ಶರೀರ ತ್ಯಾಗದ ಮೇಲೆ ಅವರಿಂದ ಪ್ರಕಟವಾಗುತ್ತದೆ ಎಂಬುದನ್ನು ಅನೇಕ ಜ್ಞಾನಿಗಳು ನಮ್ಮನಿಮ್ಮೆಲ್ಲರಿಗೂ ತಿಳಿಸಿ ಕೊಟ್ಟಿದ್ದಾರೆ. ಏಕೆಂದರೆ, ಶರೀರದೊಂದಿಗಿದ್ದಾಗ ಆ ಶಕ್ತಿಯ ವ್ಯಾಪ್ತಿ ಅದರದ್ದೇ ಆದಂತಹ ರೀತಿಯಲ್ಲಿ ಸೀಮಿತವಾಗಿರುತ್ತವೆ. ಮಹಾತ್ಮರು ದೇಹತ್ಯಾಗ ಮಾಡಿದ ಮೇಲೆ ಅವರ ದಿವಾತ್ಮದ ಶಕ್ತಿಗೆ ತಲುಪಬಹುದಾದ ವ್ಯಾಪ್ತಿಯ ಸೀಮೆ ಜಗದ್ವ್ಯಾಪಿಯಾಗಿ ಬಿಡುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಅವರಿಗೆ ವಿಶ್ವಗುರು ಸಂಸ್ಮರಣಾ ಸಭೆಯನ್ನು ನಾಳೆ (ಜ.05) ಭಾನುವಾರ ಬೆಳಿಗ್ಗೆ 10.30 ಗಂಟೆಗೆ ಶ್ರೀ ವಿಶ್ವೇಶ ತೀರ್ಥ ಸಭಾಗೃಹ, ಪೇಜಾವರ ಮಠ ಪ್ರಭಾತ್ ಕಾಲೊನಿ ಸಾಂತಾಕ್ರೂಜ್ ಪೂರ್ವ ಮುಂಬಯಿ ಇಲ್ಲಿ ಆಯೋಜಿಸಲಾಗಿದೆ.
ಹೀಗಿರುವಾಗ, ಶ್ರೀ ವಿಶ್ವೇಶ ತೀರ್ಥರ ವೃಂದಾವನದ ಎದುರು ನಿಂತು ಕೈ ಮುಗಿದು ಸದ್ಗತಿ ಕೋರಲು ಆಸಾಧ್ಯವಾದ ಮುಂಬಯಿ ಅಲ್ಲಿನ ಪೇಜಾವರಶ್ರೀಗಳ ಲಕ್ಷಾಂತರ ಗುರು ಭಕ್ತರಿಗಾಗಿ ಅವಕಾಶವಾಗಿಸಿ ಮುಂಬಯಿನ ತುಳು-ಕನ್ನಡಿಗ ಸಂಘ ಸಂಸ್ಥೆಗಳು, ಮಠ-ಮಂದಿರಗಳ ಸಹಯೋಗದಲ್ಲಿ ಶ್ರೀ ಪೇಜಾವರ ಮಠ (ಪೂರ್ಣಪ್ರಜ್ಞ ವಿದ್ಯಾಪೀಠ ಪ್ರತಿಷ್ಠಾನ ಮುಂಬಯಿ), ಶ್ರೀ ಅದಮಾರು ಮಠ (ಮುಂಬಯಿ), ಶ್ರೀ ಪಲಿಮಾರು (ಮುಂಬಯಿ), ಶ್ರೀ ಸುಬ್ರಹ್ಮಣ್ಯ ಮಠ (ಮುಂಬಯಿ), ಬಿಎಸ್‍ಕೆಬಿ ಅಸೋಸಿಯೇಶನ್-ಗೋಕುಲ ಸಂಸ್ಥೆಗಳು ಸಂಸ್ಮರಣಾ ಸಭೆ ಹಮ್ಮಿಕೊಂಡಿದೆ.
ಅಂದು ಬೆಳಿಗ್ಗೆ ಹರಿನಾಮ ಸ್ಮರಣೆ, ಭಜನೆ, ವಿಷ್ಣು ಸಹಸ್ರನಾಮ, ಶ್ರೀ ವಿಶ್ವೇಶತೀರ್ಥ ಜೀವನ ಚಿತ್ರಣ, ಸುಖಾಂತ್ಯ ಮತ್ತು ಬೃಂದಾವನದ ಸಾಕ್ಷ್ಯಚಿತ್ರ ಪ್ರದರ್ಶನ, ಶ್ರದ್ಧಾಂಜಲಿ ಸಭೆ ಮತ್ತು ಪ್ರೀತಿಭೋಜನ ಆಯೋಜಿಸಲಾಗಿದೆ. ಆ ನಿಮಿತ್ತ ಮಹಾನಗರದಲ್ಲಿನ ಎಲ್ಲಾ ತುಳು-ಕನ್ನಡಿಗ, ಮಠ-ಮಂದಿರ, ಧಾರ್ಮಿಕÀ ಸಂಘ ಸಂಸ್ಥೆಗಳ ಪದಾಧಿಕಾರಿ, ಸದಸ್ಯರು ಪಾಲ್ಗೊಂಡು ಸಭೆಯ ಯಶಸ್ಸಿಗೆ ಸಹಕರಿಸುವಂತೆ ಸಂಘಟಕರಾದ ಡಾ| ಎ.ಎಸ್ ರಾವ್, ಅಧ್ಯಕ್ಷ ಡಾ| ಸುರೇಶ್ ಎಸ್.ರಾವ್ ಕಟೀಲು, ಪೇಜಾವರ ಮಠದ ವ್ಯವಸ್ಥಾಪಕರಾದ ಡಾ| ರಾಮದಾಸ ಉಪಾಧ್ಯಾಯ ರೆಂಜಾಳ, ಪ್ರಕಾಶ ಆಚಾರ್ಯ ರಾಮಕುಂಜ, ಹರಿ ಭಟ್ ಪುತ್ತಿಗೆ, ನಿರಂಜನ್ ಗೋಗ್ಟೆ, ಶ್ರೀ ಗುರುಗಳ ಭಕ್ತ ಬಳಗ ಮತ್ತು ಶಿಷ್ಯವೃಂದ ಈ ಮೂಲಕ ತಿಳಿಸಿದ್ದಾರೆ.