ಮುಂಬಯಿ, ಜ.28: ಮಯೂರವರ್ಮ ಸಾಂಸ್ಕೃತಿಕ ಪ್ರತಿಷ್ಠಾನ ಕೊಡಮಾಡುವ (2019-2020) ವಾರ್ಷಿಕ `ಚಕ್ರಧಾರಿ ಪ್ರಶಸ್ತಿ'ಗೆ ನಾಡಿನ ಹಿರಿಯ ಲೇಖಕಿ, ಕವಯತ್ರಿ, ಸಂಘಟಕಿ, ನಿವೃತ್ತ ಪ್ರಾಧ್ಯಾಪಕಿ, ಮುಂಬಯಿ ಕನ್ನಡಿಗರ ಒಲುಮೆಯ ಸುನೀತಕ್ಕ ಎಂದೇ ಪರಿಚಿತ ಡಾ| ಸುನೀತಾ ಎಂ.ಶೆಟ್ಟಿ ಅವರು ಆಯ್ಕೆಯಾಗಿದ್ದಾರೆ.
ಪದ್ಮನಾಭ ಸಪಲಿಗ, ಬಿ.ಬಿ ರಾವ್, ಎಸ್.ಕೆ ಸುಂದರ್ ಅವರನ್ನೊಳಗೊಂಡ ಆಯ್ಕೆ ಸಮಿತಿಯು 2019-2020ರ `ಚಕ್ರಧಾರಿ ಪ್ರಶಸ್ತಿ'ಗೆ ಡಾ| ಸುನೀತಾ ಎಂ.ಶೆಟ್ಟಿ ಅವÀರನ್ನು ಆಯ್ಕೆಗೊಳಿಸಿದೆ. 2010ರಿಂದ ಮುಂಬಯಿಯಲ್ಲಿ ನಾಡು, ನುಡಿಗೆ ತನ್ನದೇ ಆದ ಅಳಿಲು ಸೇವೆ ಸಲ್ಲಿಸುತ್ತಿರುವ ಮಯೂರ ವರ್ಮ ಸಾಂಸ್ಕೃತಿಕ ಪ್ರತಿಷ್ಠಾನ ಪ್ರತೀವರ್ಷ ಸಮಾಜ ಸೇವಾ ನಿರತ ಸಂಸ್ಥೆ ಯಾ ವ್ಯಕ್ತಿಗೆ ನಗದು ಸಹಿತ `ಚಕ್ರಧಾರಿ' ಪ್ರಶಸ್ತಿ ನೀಡುತ್ತಾ ಬಂದಿದೆ. ದಿನಾಂಕ 19.02.2020ರ ಬುಧವಾರ ಇಳಿಹೊತ್ತು 3.30 ಗಂಟೆಗೆ ಗೀತಾಂಬಿಕಾ ಸಭಾಗೃಹ, ಶ್ರೀ ಗೀತಾಂಬಿಕಾ ಮಂದಿರ, ಅಸಲ್ಫಾ ಇಲ್ಲಿ ನಡೆಯಲಿರುವ ದಶಮಾನೋತ್ಸವದ ನಿಮಿತ್ತ ಹಮ್ಮಿಕೊಂಡ ಶುಭವಸರದಲ್ಲಿ ಈ ಪ್ರಶಸ್ತಿಯನ್ನು ಪ್ರದಾನಿಸಲಾಗುವುದು. ಇದೇ ಸಂದರ್ಭದಲ್ಲಿ ಶಾರದಾ ಚಂದ್ರಶೇಖರ್ ಮೂಲೆಮನೆ ಅವರಿಗೆ ವಾರ್ಷಿಕ ಕೊಡಮಾಡುವ `ಕೃಷಿಬಂಧು' ಪುರಸ್ಕಾರ ಪ್ರದಾನಿಸಲಾಗುವುದು.
ಪ್ರತಿಷ್ಠಾನದ ಅಧ್ಯಕ್ಷ ಕಡಂದಲೆ ಸುರೇಶ್ ಎಸ್.ಭಂಡಾರಿ ಕಡಂದಲೆ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಅತಿಥಿüಗಳಾಗಿ ಡಾ| ತೋನ್ಸೆ ವಿಜಯಕುಮಾರ್ ಶೆಟ್ಟಿ, ಶ್ರೀ ರಾಧಾಕೃಷ್ಣ ಭಟ್, ಡಾ| ರಜನಿ ವಿ.ಪೈ, ನವೀನ್ ಶೆಟ್ಟಿ ಇನ್ನಬಾಳಿಕೆ ಉಪಸ್ಥಿತಲಿರುವರು.
ಕಾರ್ಯಕ್ರಮದಲ್ಲಿ ಪ್ರತಿಷ್ಠಾನ ಹತ್ತು ವರ್ಷಗಳ ಸವಿನೆನಪಿಗೆ ಪ್ರಕಟಿಸುತ್ತಿರುವ `ದಶಧಾರೆ (ನನ್ನೂರು-ನನ್ನ ಶಹರ)' ಕೃತಿ ಲೋಕಾರ್ಪಣೆ ಗೊಳ್ಳಲಿದೆ. ಪ್ರದ್ಯುಮ್ನ ಮೂರ್ತಿ ಕಡಂದಲೆ ಇವರ ಅಧ್ಯಕ್ಷತೆಯಲ್ಲಿ `ಸಂಸ್ಕೃತ ಕಾವ್ಯ ಸೌರಭ' ಕವಿಗೋಷ್ಠಿ ಅಲ್ಲದೆ ಅಭಿನಯ ಮಂಟಪ ಮುಂಬಯಿ ಇವರಿಂದ `ಒಯಿಕ್‍ಲಾ ಕಾಸ್ ಬೋಡು' ಎಂಬ ತುಳು ನಾಟಕ ಪ್ರದರ್ಶನಗೊಳ್ಳಲಿದೆ ಎಂದು ಮಯೂರ ವರ್ಮ ಸಾಂಸ್ಕೃತಿಕ ಪ್ರತಿಷ್ಠಾನದ ಕಾರ್ಯದರ್ಶಿ ವಿಶ್ವನಾಥ ದೊಡ್ಮನೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.