ವಿಶ್ವದ ಲಕ್ಷಾಂತರ ಬಿಲ್ಲವ ಬಂಧುಗಳ ಒಗ್ಗೂಡುವ ನಿರೀಕ್ಷೆ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)
ಮುಂಬಯಿ, ಜ.27: ಗೋರೆಗಾಂವ್ ಪೂರ್ವದ ಬ್ರಿಜ್‍ವಾಸಿ ಪ್ಯಾಲೇಸ್ ಸಭಾಗೃಹದಲ್ಲಿ ಕಳೆದ ಭಾನುವಾರ ಬಿಲ್ಲವ ಅಸೋಸಿಯೇಶನ್ ಮುಂಬಯಿ ಗೋರೆಗಾಂವ್ ಸ್ಥಳೀಯ ಕಚೇರಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿನ ಸರಳ ಕಾರ್ಯಕ್ರಮದಲ್ಲಿ ಪುತ್ತೂರು ಬಡಗನ್ನೂರು ಇಲ್ಲಿನ ಶ್ರೀ ಕ್ಷೇತ್ರ ಗೆಜ್ಜೆಗಿರಿ ನಂದನ ಬಿತ್ತ್‍ಲ್ ಇಲ್ಲಿ ಫೆಬ್ರವರಿಯಲ್ಲಿ ನೆರವೇರಲಿರುವ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆಯನ್ನು ರಾಷ್ಟ್ರೀಯ ಬಿಲ್ಲವ ಮಹಾ ಮಂಡಲದ ಗೌರವಾಧ್ಯಕ್ಷ, ದೇಯಿ ಬೈದ್ಯೆತಿ ಕೋಟಿ ಚೆನ್ನಯ ಮೂಲಸ್ಥಾನ ಗೆಜ್ಜೆಗಿರಿ ಕ್ಷೇತ್ರಾಡಳಿತ ಸಮಿತಿ ಗೌರವಾಧ್ಯಕ್ಷ ಜಯ ಸಿ.ಸುವರ್ಣ ಬಿಡುಗಡೆ ಗೊಳಿಸಿ ಯಶಕೋರಿದರು.
ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ಚಂದ್ರಶೇಖರ ಎಸ್.ಪೂಜಾರಿ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಅಸೋಸಿಯೇಶನ್‍ನ ನಿಕಟಪೂರ್ವಾಧ್ಯಕ್ಷ, ಶ್ರೀ ಗೆಜ್ಜೆಗಿರಿ ಪ್ರವರ್ತಕ ಮಂಡಳಿ ವಿಶ್ವ್ವಸ್ಥ ನಿತ್ಯಾನಂದ ಡಿ.ಕೋಟ್ಯಾನ್ ಮಾತನಾಡಿ ಸಾಂಪ್ರದಾಯಿಕ, ಶಾಸ್ತ್ರಾನುಸಾರ ಕುಲದ ತಾಯಿ ಮಕ್ಕಳನ್ನು ಒಗ್ಗೂಡಿಸಿ ಕ್ಷೇತ್ರದ ಅಭಿವೃದ್ಧಿ ಮಾಡಿದಾಗಲೇ ಸಮಗ್ರ ಬಿಲ್ಲವರ ಏಳಿಗೆ ಸಾಧ್ಯವಾಗುವುದು ಎಂದು ಅಷ್ಟಮಂಗಳದಲ್ಲಿ ತಿಳಿದುಬಂದಂತೆ ಐನೂರು ವರ್ಷಗಳ ಹಿಂದೆ ತುಳುನಾಡಿನ ಇತಿಹಾಸದಲ್ಲಿ ಹೊಸ ಮೈಲುಗಲ್ಲು ಸ್ಥಾಪಿಸಿದ ಗೆಜ್ಜೆಗಿರಿ ನಂದನ ಬಿತ್ತ್‍ಲ್ ಕ್ಷೇತ್ರ ಈಗ ಪುನರುತ್ಥಾನಕ್ಕೆ ಸಿದ್ಧಗೊಂಡಿದೆ. ಆ ನಿಟ್ಟಿನಲ್ಲಿ ಇಡೀ ವಿಶ್ವದ ಬಿಲ್ಲವರೇ ಕೇಂದ್ರೀಕೃತಗೊಳ್ಳುವ ದೇಯಿ ಬೈದ್ಯೆತಿ ಕೋಟಿ ಚೆನ್ನಯ ಮೂಲಸ್ಥಾನ ಗೆಜ್ಜೆಗಿರಿ ಕ್ಷೇತ್ರದಲ್ಲಿ ಬ್ರಹ್ಮಕಲಶೋತ್ಸವ ಸಂಭ್ರಮದ ಪೂರ್ವ ಸಿದ್ಧತೆಗಳು ಭರದಿಂದ ಸಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಅತಿಥಿü ಅಭ್ಯಾಗತರಾಗಿ ಹಿರಿಯ ಸಾಹಿತಿ, ಜಾನಪದ ವಿದ್ವಾಂಸ ಬನ್ನಂಜೆ ಬಾಬು ಅಮೀನ್, ರಾಷ್ಟ್ರೀಯ ಬಿಲ್ಲವ ಮಹಾ ಮಂಡಲದ ಅಧ್ಯಕ್ಷ ಡಾ| ರಾಜಶೇಖರ್ ಆರ್.ಕೋಟ್ಯಾನ್ (ಶ್ರೀ ಗೆಜ್ಜೆಗಿರಿ ಕ್ಷೇತ್ರಾಡಳಿತ ಸಮಿತಿ ಉಪಾಧ್ಯಕ್ಷ), ಮುಂಬಯಿ ಎನ್‍ಸಿಪಿ ಉತ್ತರಮಧ್ಯ ಜಿಲ್ಲಾ ನಿರೀಕ್ಷಕ ಲಕ್ಷ್ಮಣ ಸಿ.ಪೂಜಾರಿ ಚಿತ್ರಾಪು, ಭಾರತ್ ಬ್ಯಾಂಕ್‍ನ ನಿರ್ದೇಶಕ ಭಾಸ್ಕರ್ ಎಂ.ಸಾಲ್ಯಾನ್, ಉದ್ಯಮಿಗಳಾದ ರಮಾನಾಥ್ ಎಂ.ಕೋಟ್ಯಾನ್, ರೇಷ್ಮಾ ರವಿರಾಜ್, ಗೆಜ್ಜೆಗಿರಿ ಕ್ಷೇತ್ರಾಡಳಿತ ಕಾರ್ಯಕಾರಿ ಸಮಿತಿ ಸದಸ್ಯ ನಿಲೇಶ್ ಪೂಜಾರಿ ಪಲಿಮಾರು, ಅಸೋಸಿಯೇಶನ್‍ನ ಉಪಾಧ್ಯಕ್ಷರಾದ ಶಂಕರ ಡಿ.ಪೂಜಾರಿ, ದಯಾನಂದ್ ಆರ್.ಪೂಜಾರಿ, ಗೌ| ಪ್ರ| ಕೋಶಾಧಿಕಾರಿ ರಾಜೇಶ್ ಜೆ.ಬಂಗೇರ, ಮಹಿಳಾ ವಿಭಾಗದ ಉಪ ಕಾರ್ಯಧ್ಯಕ್ಷೆ ಗಿರಿಜಾ ಚಂದ್ರಶೇಖರ್, ಅಸೋಸಿಯೇಶನ್‍ನ ಗೋರೆಗಾಂವ್ ಸ್ಥಳೀಯ ಕಚೇರಿ ಗೌರವ ಕಾರ್ಯಾಧ್ಯಕ್ಷ ಜಗನ್ನಾಥ್ ವಿ.ಕೋಟ್ಯಾನ್, ಕಾರ್ಯಾಧ್ಯಕ್ಷ ಸಚ್ಚೀಂದ್ರ ಕೆ.ಕೋಟ್ಯಾನ್, ಉಪ ಕಾರ್ಯಾಧ್ಯಕ್ಷರಾದ ರಮೇಶ್ ಎಸ್.ಸುವರ್ಣ ಮತ್ತು ಮೋಹನ್‍ದಾಸ್ ಹೆಜ್ಮಾಡಿ ವೇದಿಕೆಯಲ್ಲಿದ್ದರು.
ಪ್ರಸ್ತುತ ಕ್ಷೇತ್ರ ನಿರ್ಮಾಣ ಕಾರ್ಯ ಅಂತಿಮ ಹಂತದಲ್ಲಿದೆ. ಕೋಟಿ ಚೆನ್ನಯರ ಮೂಲ ಮನೆಯಾದ ಗೆಜ್ಜೆಗಿರಿ ಮಾತೆ ದೇಯಿ ಬೈದ್ಯೆತಿಗೆ ಪುನರ್ಜನ್ಮ ನೀಡಿದ ತಾಣ. ಇದು ಗುರು ಸಾಯನ ಬೈದ್ಯರ ಕರ್ಮಭೂಮಿ. ಈ ಮೂರು ತಲೆಮಾರುಗಳ ಕಾರಣಿಕ ಶಕ್ತಿಗಳ ಆರಾಧನೆ ಗೆಜ್ಜೆಗಿರಿಯಲ್ಲಿ ಐದು ಶತಮಾನಗಳ ಬಳಿಕ ಈಗ ಮೊದಲ ಬಾರಿ ನಡೆಯಲಿದೆ. ಕೋಟಿ ಚೆನ್ನಯರನ್ನು ಆರಾಧಿಸುವ ಸುಮಾರು 247ರಷ್ಟು ಗರಡಿಗಳಿದ್ದು, ಅವೆಲ್ಲದಕ್ಕೂ ಕಲಶಪ್ರಾಯವಾಗಿ ಗೆಜ್ಜೆಗಿರಿ ಮೂಲಸ್ಥಾನ ಗರಡಿ ಮೂಡಿ ಬರಲಿದೆ. ಯಾಕೆಂದರೆ ಇದು ಕೋಟಿ ಚೆನ್ನಯರು ಬೆಳೆದಬ್ಬಾಳಿದ ಮಣ್ಣು. ಇಲ್ಲಿ ತಾಯಿ ಮತ್ತು ಮಕ್ಕಳ ಸಮಾಗಮ ಆರಾಧನೆ ಕೌಟುಂಬಿಕ ತರವಾಡು ಚೌಕಟ್ಟಿನಲ್ಲಿ ನಡೆಯಲಿದೆ. ದೇಯಿ ಬೈದ್ಯೆತಿ ಕೋಟಿ ಚೆನ್ನಯರ ಮೂಲಸ್ಥಾನ ಕ್ಷೇತ್ರವಾದ ಗೆಜ್ಜೆಗಿರಿಯಲ್ಲಿ ಇದೇ 2020ರ ಫೆಬ್ರವರಿ 26ರಿಂದ ಮಾರ್ಚ್ 2ವರೆಗೆ ಅದ್ದೂರಿಯ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ನಡೆಯಲಿದೆ. ತುಳುನಾಡು ಮಾತ್ರವಲ್ಲದೆ, ಬೆಂಗಳೂರು, ಮುಂಬಯಿ, ಗುಜರಾತ್, ದೆಹಲಿ ಮತ್ತು ವಿದೇಶಗಳಿಂದಲೂ ಲಕ್ಷಾಂತರ ಭಕ್ತರು ಅಂದಿನ ಐತಿಹಾಸಿಕ ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ ಎಂದು ಬ್ರಹ್ಮಕಲಶೋತ್ಸವ ಕಾರ್ಯಕ್ರಮಗಳ ವಿವರಗಳನ್ನೂ ನಿತ್ಯಾನಂದ ಕೋಟ್ಯಾನ್ ತಿಳಿಸಿದರು.
ಸಚ್ಚೀಂದ್ರ ಕೆ.ಕೋಟ್ಯಾನ್ ಸ್ವಾಗತಿಸಿದರು. ಅಕ್ಷಯ ಮಾಸಿಕದ ಸಂಪಾದಕ ಹರೀಶ್ ಕೆ.ಹೆಜ್ಮಾಡಿ ಪ್ರಸ್ತಾವನೆಗೈದು ಕಾರ್ಯಕ್ರಮ ನಿರೂಪಿಸಿದರು. ಬಬಿತಾ ಜನಾರ್ದನ್ ಕೋಟ್ಯಾನ್ ಉಪಕಾರ ಸ್ಮರಿಸಿದರು.