Tuesday 23rd, April 2024
canara news

ಕರಾವಳಿಯಲ್ಲಿ ಪ್ರಪ್ರಥಮ ಬಾರಿಗೆ ರಾಜ್ಯ ಪತ್ರಕರ್ತರ 35ನೇ ಸಮ್ಮೇಳನ

Published On : 20 Feb 2020   |  Reported By : Rons Bantwal


ಕರ್ನಾಟಕ ರಾಜ್ಯ ಪತ್ರಕರ್ತರ ಸಮ್ಮೇಳನ-2020

ಮುಂಬಯಿ, ಫೆ.16: ಇದೇ 2020ರ ಮಾ.07 ಮತ್ತು 08ರಂದು ಮಂಗಳೂರು ಅಲ್ಲಿನ ಪುರಭವನದಲ್ಲಿ ಕರ್ನಾಟಕದ ಕರಾವಳಿಯಲ್ಲೇ ಪ್ರಪ್ರಥಮ ಬಾರಿಗೆ ಕರ್ನಾಟಕ ಪತ್ರಕರ್ತರ 35ನೇ ಸಮ್ಮೇಳನ-2020 ನಡೆಯಲಿದೆ. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ (ಕೆಯುಡಬ್ಲ್ಯೂಜೆ) ಆಶ್ರಯದಲ್ಲಿ ನಡೆಯಲಿರುವ ಮೊದಲ ಸಮ್ಮೇಳನ ಇದಾಗಲಿದೆ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ತಿಳಿಸಿದರು.


ಮಂಗಳೂರು ಪ್ರೆಸ್‍ಕ್ಲಬ್‍ನಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ತಗಡೂರು ಮಾತನಾಡಿ ಮಂಗಳೂರು ನಗರವು ಕನ್ನಡ ಪತ್ರಿಕೋದ್ಯಮದ ತವರೂರು. ಪತ್ರಿಕಾ ರಂಗಕ್ಕೆ ಸಂಬಂಧಿಸಿದಂತೆ ಅನೇಕ ಚಾರಿತ್ರಿಕ ಹೆಜ್ಜೆ ಗುರುತುಗಳನ್ನು ಮೂಡಿಸಿದ ನಗರ. 177 ವರ್ಷಗಳ ಹಿಂದೆ ಈ ಊರಿನಲ್ಲಿಯೇ ಕನ್ನಡದ ಮೊದಲ ಪತ್ರಿಕೆ ಮಂಗಳೂರು ಸಮಾಚಾರ ಹುಟ್ಟಿತು. ಇಲ್ಲಿ ಶುರುವಾದ ಕನ್ನಡ ಪತ್ರಿಕೋದ್ಯಮ ಆಂದೋಲನ ಕನ್ನಡ ನಾಡಿನಾದ್ಯಂತ ವ್ಯಾಪಿಸಿತ್ತು. ಆ ದಿನಗಳಲ್ಲೇ ಅಸಂಘಟಿತರಾಗಿದ್ದ ಪತ್ರಕರ್ತರು ಸಂಘಟಿತರಾಗತೊಡಗಿದ್ದರು. ಈ ಆಶಯಗಳಿಗೆ ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರ್ ಅವರು ಬೆನ್ನೆಲುಬಾಗಿ ನಿಂತರು. ಹೀಗಾಗಿ 1932ರಲ್ಲಿ ಮೈಸೂರು ಪತ್ರಕರ್ತರ ಸಂಘ? ಬೆಂಗಳೂರಿನಲ್ಲಿ ಹುಟ್ಟು ಪಡೆಯಿತು. ಈ ಸಂಘಕ್ಕೆ ಆಗ ಪತ್ರಕರ್ತರೂ ಆಗಿದ್ದ ಸಾಹಿತಿ ಡಿ.ವಿ.ಗುಂಡಪ್ಪ ಅವರು ಮೊದಲ ಸ್ಥಾಪಕ ಅಧ್ಯಕ್ಷರು. ಇದೀಗ ಕೆಯುಡಬ್ಲ್ಯೂಜೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಜಿಲ್ಲಾ ಘಟಕಗಳನ್ನು ಹೊಂದಿರುವ ಮತ್ತು ಏಳು ಸಾವಿರಕ್ಕೂ ಅಧಿಕ ಸದಸ್ಯರನ್ನು ಒಳಗೊಂಡಿರುವ ಪತ್ರಕರ್ತ ಸಮುದಾಯದ ಏಕೈಕ ಸಂಘಟನೆಯಾಗಿದೆ ಎಂದರು.

1976, ಅಕ್ಟೋಬರ್ 6ರಂದು ಉದಯಿಸಿದ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು ಇದೀಗ ನಿರಂತರ ರಚನಾತ್ಮಕ ಚಟುವಟಿಕೆಗಳ ಆಗರದಂತಿದೆ. ಈಗಾಗಲೇ ದೇಶದಲ್ಲೇ ಅಭೂತಪೂರ್ವ ಎನಿಸಿದ ಎರಡು ಗ್ರಾಮ ವಾಸ್ತವ್ಯ ಕಾರ್ಯಗಳಿಂದ ಮನೆ ಮಾತಾಗಿದೆ. 2019ರ ಜುಲೈ.01ರಂದು ಮಂಗಳೂರಿನಲ್ಲಿ ಮೊಟ್ಟ ಮೊದಲ ಜಿಲ್ಲಾ ಪತ್ರಕರ್ತರ ಸಮ್ಮೇಳನ ಸಂಘಟಿಸಿತ್ತು. ಇದೀಗ ಕರಾವಳಿಯ ಚರಿತ್ರೆಯಲ್ಲೇ ಮೊದಲ ಬಾರಿಗೆ ಕೆಯುಡಬ್ಲ್ಯೂಜೆ ವತಿಯಿಂದ ನಡೆಯಲಿರುವ ರಾಜ್ಯ ಸಮ್ಮೇಳನಕ್ಕೆ ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಆತಿಥ್ಯ ವಹಿಸಿಕೊಂಡಿದೆ ಎಂದೂ ತಗಡೂರು ತಿಳಿಸಿದರು.

ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆ ಅವರು ಸಮ್ಮೇಳನದ ಲಾಂಛನ ಬಿಡುಗಡೆ ಗೊಳಿಸಿ ಶುಭ ಹಾರೈಸಿದ್ದಾರೆ. ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸಮ್ಮೇಳನದ ವೆಬ್‍ಸೈಟ್‍ನ್ನು ಅನಾವರಣಗೊಳಿಸಿ ಸಮ್ಮೇಳನದ ತಯಾರಿಗೆ ಚಾಲನೆ ನೀಡಿದ್ದಾರೆ. ಆ ಮೂಲಕ ಸಮ್ಮೇಳನದಲ್ಲಿ ಭಾಗವಹಿಸಲಿರುವ ಸದಸ್ಯರ ನೋಂದಣಿ ಪ್ರಕ್ರಿಯೆ ವೆಬ್‍ಸೈಟ್ ಮೂಲಕ ಆರಂಭ ಗೊಂಡಿದೆ. ಸಮ್ಮೇಳನದ ತಯಾರಿಗೆ ವಿವಿಧ ಸಮಿತಿಗಳನ್ನು ರಚಿಸಲಾಗಿದೆ. ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕರಾದ ಯು.ಟಿ ಖಾದರ್, ಡಿ.ವೇದವ್ಯಾಸ್ ಕಾಮತ್ ಮತ್ತು ಡಾ| ವೈ.ಭರತ್ ಶೆಟ್ಟಿ ಸಮ್ಮೇಳನದ ತಯಾರಿಗೆ ಕೈ ಜೋಡಿಸಿದ್ದಾರೆ. ಈ ಸಮ್ಮೇಳನದಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿರುವ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರು, ದೇಶದ ವಿವಿಧ ರಾಜ್ಯಗಳ ಮತ್ತು ವಿದೇಶದ ಪತ್ರಕರ್ತರು ಸೇರಿದಂತೆ ಸುಮಾರು 3 ಸಾವಿರಕ್ಕೂ ಅಧಿಕ ಪತ್ರಕರ್ತ ಸದಸ್ಯರು ಪಾಲ್ಗೊಳ್ಳಲಿದ್ದಾರೆ ಎಂದು ಕೆಯುಡಬ್ಲ್ಯೂಜೆ ಕಾರ್ಯಕಾರಿ ಸಮಿತಿ ಸದಸ್ಯ ಜಗನ್ನಾಥ ಶೆಟ್ಟಿ ಬಾಳ ತಿಳಿಸಿದರು.

ಸಮ್ಮೇಳನವನ್ನು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆ ಸಾನಿಧ್ಯದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಉದ್ಘಾಟಿಸಲಿದ್ದಾರೆ. ವಿಪಕ್ಷ ನಾಯಕ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಸ್ಪೀಕರ್, ಸಚಿವರು ಸೇರಿದಂತೆ ಪತ್ರಿಕೋದ್ಯಮ ದಿಗ್ಗಜರು, ಸಾಧಕರು, ಸಂಪಾದಕರು ಮತ್ತಿತರ ಗಣ್ಯರು ಭಾಗವಹಿಸಲಿದ್ದಾರೆ.

ಸಮಾರೋಪ ಸಮಾರಂಭದಲ್ಲಿ ಕೆಯುಡಬ್ಲ್ಯೂಜೆ ವಾರ್ಷಿಕ ಪ್ರಶಸ್ತಿಗಳನ್ನು ಪತ್ರಕರ್ತರಿಗೆ ಪ್ರದಾನ ಮಾಡಲಾಗುವುದು. ಸಾಧಕ ಪತ್ರಕರ್ತರನ್ನು ಸನ್ಮಾನ ಮಾಡಲಾಗುವುದು. ಎರಡೂ ದಿನಗಳು ಪತ್ರಕರ್ತರು, ಮಾಧ್ಯಮ ಸಾಧಕ-ಬಾದಕಗಳ ಬಗ್ಗೆ, ಕರಾವಳಿ ಜಿಲ್ಲೆ ಅಭಿವೃದ್ಧಿ ಬಗ್ಗೆ ವಿಚಾರ ಗೋಷ್ಠಿಗಳು ನಡೆಯಲಿವೆ ಎಂದು ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ ಮತ್ತು ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ ತಿಳಿಸಿದರು.

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here