ಮುಂಬಯಿ (ಉಜಿರೆ), ಎ.06: ಧರ್ಮಸ್ಥಳದ ಸ್ಥಳೀಯ ಎಸ್.ಡಿ.ಎಂ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಪ್ರಭಾಶ್ ಕುಮಾರ್, ಪಿ (63) ಸೋಮವಾರ ಬೆಳಗ್ಗಿನ ಜಾವ ಉಜಿರೆಯ ಖಾಸಗಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾದರು. ಅವರು ಪತ್ನಿ ಮತ್ತು ಒಬ್ಬ ಮಗ ಅಗಲುದ್ದಾರೆ.
ಎರಡು ವರ್ಷ ಧರ್ಮಸ್ಥಳದ ಸಂಚಾರಿ ಆಸ್ಪತ್ರೆಯಲ್ಲಿ ಮುಖ್ಯ ವೈದ್ಯಾಧಿಕಾರಿಯಾಗಿ ಸೇವೆ ಸಲ್ಲಿಸಿ ಬಳಿಕ ಉಜಿರೆಯಲ್ಲಿರುವ ಕ್ಷಯ ರೋಗ ನಿವಾರಣಾ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿಯಾಗಿ ಹಾಗೂ ನಂತರ ಎಸ್.ಡಿ.ಎಂ. ಆಸ್ಪತ್ರೆಯಲ್ಲಿ ವೈದ್ಯಕೀಯ ಅಧೀಕ್ಷಕರಾಗಿ ಒಟ್ಟು 40 ವರ್ಷಗಳ ಸೇವೆ ಸಲ್ಲಿಸಿದ್ದರು.
ಎಸ್.ಡಿ.ಎಂ. ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನ ಕಾಲೇಜಿನಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿಯೂ ಸೇವೆ ಸಲ್ಲಿಸಿದ್ದಾರೆ. ಸರಳ ಸಜ್ಜನಿಕೆಯ ವ್ಯಕ್ತಿತ್ವವನ್ನು ಹೊಂದಿದ ಅವರು ಶಿಸ್ತಿನ ಸಿಪಾಯಿಯಾಗಿ ನಿಷ್ಠೆಯಿಂದ ತಮ್ಮ ಕರ್ತವ್ಯ ನಿರ್ವಹಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು.
ಎಸ್.ಡಿ.ಎಂ ಆಸ್ಪತ್ರೆಯ ಆಡಳಿತ ಮಂಡಳಿ ಅಧ್ಯಕ್ಷರಾದ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಆಸ್ಪತ್ರೆಯಲ್ಲಿ ಸುದೀರ್ಘ ಸಲ್ಲಿಸಿದ ಡಾಕ್ಟರ್ ಪ್ರಭಾಶ್ ಕುಮಾರ್ ಅವರ ಸೇವಾ ಬದ್ಧತೆ ಹಾಗೂ ಕಾಳಜಿಯನ್ನು ಸ್ಮರಿಸಿ ಅವರ ಆತ್ಮಕ್ಕೆ ಚಿರಶಾಂತಿಯನ್ನು ಕೋರಿದ್ದಾರೆ ಹಾಗೂ ಅವರ ಅಗಲುವಿಕೆಯಿಂದ ಕುಟುಂಬ ವರ್ಗದವರಿಗೆ ಉಂಟಾದ ದುಃಖವನ್ನು ಸಹಿಸುವ ಶಕ್ತಿ-ತಾಳ್ಮೆಯನ್ನಿತ್ತು
ಶ್ರೀ ಮಂಜುನಾಥ ಸ್ವಾಮಿ ಹರಸಲೆಂದು ಪ್ರಾರ್ಥಿಸಿದ್ದಾರೆ.
ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಧರ್ಮಸ್ಥಳದ ಡಿ.ಹರ್ಷೇಂದ್ರ ಕುಮಾರ್, ಡಾ.ಸಾತ್ವಿಕ್, ಡಾ.ರವೀಂದ್ರನಾಥ ಪ್ರಭು, ಡಾ.ದಯಾಕರ್, ಎಂ.ಎಂ, ಡಾ.ಕೆ.ಎನ್. ಶೆಣೈ, ಡಾ. ಛಾತ್ರ, ಬೆನಕ ಆಸ್ಪತ್ರೆಯ ಡಾ. ಗೋಪಾಲಕೃಷ್ಣ ಭಟ್,ಡಾ.ಭಾರತಿ, ಡಾ. ಶೀತಲ್ ಕುಮಾರ್ ನೆಲ್ಲಿಕಾರು ಮೊದಲಾದವರು ಮನೆಗೆ ಭೇಟಿ ನೀಡಿ ಅಂತಿಮ ನಮನ ಸಲ್ಲಿಸಿದರು.
ಶೃದ್ಧಾಂಜಲಿ ಸಭೆ: ಎಸ್.ಡಿ.ಎಂ ಆಸ್ಪತ್ರೆಯಲ್ಲಿ ಶೃದ್ಧಾಂಜಲಿ ಸಭೆ ನಡೆಯಿತು. ಆಸ್ಪತ್ರೆಯ ಕಾರ್ಯನಿರ್ವಹಣಾಧಿಕಾರಿ ಮನ್ಮಥ್ ಕುಮಾರ್, ಡಾ.ಬಾಲಕೃಷ್ಣ ಭಟ್, ಡಾ. ಸಾತ್ವಿಕ್, ಎಸ್. ಡಿ.ಎಂ. ಮೆಡಿಕಲ್ ಟ್ರಸ್ಟ್ ನ ಕಾರ್ಯದರ್ಶಿ ಶಿಶುಪಾಲ ಪೂವಣಿ ಮತ್ತು ಅಣ್ಣಿ ಪೂಜಾರಿ ಮಾತನಾಡಿ ಡಾ. ಪ್ರಭಾಶ್ ಕುಮಾರ್ ರ ವ್ಯಕ್ತಿತ್ವ ಮತ್ತು ಸೇವೆಯನ್ನು ಸ್ಮರಿಸಿ ಅವರ ಆತ್ಮಕ್ಕೆ ಚಿರಶಾಂತಿ ಕೋರಿದರು.
ಆಸ್ಪತ್ರೆಯ ಎಲ್ಲಾ ವೈದ್ಯರು, ದಾದಿಯರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.ಮೌನ ಪ್ರಾರ್ಥನೆಯ ಬಳಿಕ ಆಸ್ಪತ್ರೆಯ ಹೊರರೋಗಿ ವಿಭಾಗಕ್ಕೆ ರಜೆ ನೀಡಲಾಯಿತು.