ಮುಂಬಯಿ (ಮೂಡುಬಿದಿರೆ), ಮೇ.14: ಕೊರೊನಾದಂತಹ ಸಂಕಷ್ಟ ಸ್ಥಿತಿಯಲ್ಲಿ ಜೀವದ ಹಂಗು ತೊರೆದು ಕಾರ್ಯನಿರ್ವಹಿಸುತ್ತಿರುವ ಪತ್ರಕರ್ತರ ನೋವಿಗೆ ಪತ್ರಿಕಾ ಒಡೆಯರು, ಮಾಲೀಕರು, ಸರ್ಕಾರ ಸ್ಪಂದಿಸಲೇ ಬೇಕು. ಮಾಧ್ಯಮವನ್ನೇ ನಂಬಿದ ಅದೆಷ್ಟೋ ಮಂದಿ ಇಂದು ಉದ್ಯೋಗದ ಭೀತಿ ಅನುಭವಿಸುತ್ತಿದ್ದಾರೆ. ಅರೆಕಾಲಿಕ (ಸ್ಟ್ರಿಂಜರ್ಸ್) ಪತ್ರಕರ್ತರಂತೂ ತೀವ್ರ ಸಂದಿಗ್ಧ ಸ್ಥಿತಿಯಲ್ಲಿದ್ದಾರೆ. ಕೂಡಲೇ ಮಾಧ್ಯಮದ ಮಾಲೀಕರು, ಸರ್ಕಾರ ಇವರ ನೋವಿಗೆ ದನಿಯಾಗಬೇಕೆಂದು ಕೇಮಾರು ಸಾಂದೀಪನೀ ಸಾಧನಾಶ್ರಮದ ಶ್ರೀ ಈಶವಿಠಲದಾಸ ಸ್ವಾಮೀಜಿ ಒತ್ತಾಯಿಸಿದ್ದಾರೆ.
ಅಂತರ್ಜಾಲ ಮಾಧ್ಯಮವೊಂದರಲ್ಲಿ ಪ್ರಕಟಗೊಂಡ ಅರೆಕಾಲಿಕ ಪತ್ರಕರ್ತರ ನೋವು ಅರ್ಥವೇ ಆಗೋದಿಲ್ವೇ ? ಓದಿಗೆ ಈಶ ವಿಠಲದಾಸ ಸ್ವಾಮೀಜಿ ಕೊರೊನಾ ವಾರಿಯರ್ಸ್ ಹೇಗೆ ತನ್ನ ಜೀವದ ಹಂಗು ತೊರೆದು ಕೆಲಸ ಮಾಡುತ್ತಾರೋ ಅದೇ ಮಾದರಿಯಲ್ಲಿ ಪತ್ರಕರ್ತರೂ ಜೀವದ ಹಂಗು ತೊರೆದು ಕೆಲಸ ಮಾಡುತ್ತಿದ್ದಾರೆ. ಅವರಿಗೂ ಸೂಕ್ತ ಗೌರವ , ನೆರವು ಸಿಗುವಂತಾಗಬೇಕು. ಅವರ ಜೀವಗಳಿಗೂ ಬೆಲೆ ಇದೆ ಎಂಬುದನ್ನು ಅರಿಯಬೇಕೆಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಇಂದು ಅರೆಕಾಲಿಕ ಪರ್ತರ್ತರು ಅನೇಕ ಸಮಸ್ಯೆಗಳಲ್ಲಿ ಸಿಲುಕಿದ್ದಾರೆ. ಅವರಿಗೆ ಸೂಕ್ತ ವೇತನ ಭದ್ರತೆಯಿಲ್ಲ. ಅವರಿಗೆ ಸೂಕ್ತ ಆರೋಗ್ಯ ಭದ್ರತೆಗಳಿಲ್ಲ. ಹೀಗಿರುವಾಗ ಮಾಧ್ಯಮದ ಒಡೆತನ ಹೊಂದಿದವರು ಇಂತಹವರ ಕುರಿತು ಚಿಂತಿಸಬೇಕೆಂದು ಒತ್ತಾಯಿಸಿದ್ದಾರೆ. ಆಯಾ ಪತ್ರಿಕೆಯ ಪ್ರಗತಿಗೆ ಅರೆಕಾಲಿಕ ಪತ್ರಕರ್ತರ ಪಾತ್ರ ಮಹತ್ವದ್ದಾಗಿದೆ. ಅಂತಹ ಅರೆಕಾಲಿಕ ಪತ್ರಕರ್ತರಿಗೆ ವೇತನ ಭದ್ರತೆ, ಆರೋಗ್ಯ ಭದ್ರತೆ ನೀಡಬೇಕು. ಈ ನಿಟ್ಟಿನಲ್ಲಿ ಮಾಧ್ಯಮದ ಮಾಲೀಕರು ಕಾರ್ಯೋನ್ಮುಖರಾಗಬೇಕಾಗಿದೆ ಎಂದು ಅಭಿಪ್ರಾಯಿಸಿದ್ದಾರೆ.