ಬೆಳ್ತಂಗಡಿ-ಬೆದ್ರಬೆಟ್ಟುವಿನಲ್ಲಿ ನಿರ್ಮಿತÀ ನೂತನ ಮನೆಯ ಹಸ್ತಾಂತರ
ಮುಂಬಯಿ (ಬೆಳ್ತಂಗಡಿ), ಜೂ.04: ಕರ್ನಾಟಕ ಕಲ್ಚರಲ್ ಫೌಂಡೇಶನ್ ಸೌದಿ ಅರೇಬಿಯ ಇದರ ವತಿಯಿಂದ ದಾರುಲ್ ಅಮಾನ್ ವಸತಿ ಯೋಜನೆಯಡಿಯಲ್ಲಿ ಬೆಳ್ತಂಗಡಿ ತಾಲೂಕಿನ ಬೆದ್ರಬೆಟ್ಟುವಿನಲ್ಲಿ ನಿರ್ಮಿಸಿದ ಮನೆಯ ಹಸ್ತಾಂತರ ಕಾರ್ಯಕ್ರಮ ನಡೆಯಿತು.
ಅಸ್ಸಯ್ಯಿದ್ ಝೈನುಲ್ ಆಬಿದೀನ್ ಜಮಾಲುಲೈಲಿ ತಂಙಳ್ ಕಾಜೂರು ದಾರುಲ್ ಅಮಾನ್ ವಸತಿ ಯೋಜನೆಯಡಿಯಲ್ಲಿ ನಿರ್ಮಿಸಿದ ಮನೆಯನ್ನು ಉದ್ಘಾಟಿಸಿದರು.ಅಸ್ಸಯ್ಯಿದ್ ಮುಹಮ್ಮದ್ ಇಂಬಿಚ್ಚಿ ಕೋಯ ತಂಙಳ್ ದುಆ ನೆರವೇರಿಸಿದರು. ಡಾ| ಮುಹಮ್ಮದ್ ಫಾಝಿಲ್ ರಝ್ವಿ ಮನೆಯ ಕೀ ಹಸ್ತಾಂತರ ಮಾಡಿದರು.
ಸೌದಿ ಅರೇಬಿಯಾ ಕೆ.ಸಿ ಎಫ್ ರಾಷ್ಟ್ರೀಯ ಸಮಿತಿ ಇದರ ಅದ್ಯಕ್ಷ ಡಿ.ಪಿ ಯೂಸುಫ್ ಸಖಾಫಿ ಬೈತಾರ್ ಕರ್ನಾಟಕ ಕಲ್ಚರಲ್ ಫೌಂಡೇಶನ್ ಸೌದಿ ಅರೇಬಿಯಾ ದಾರುಲ್ ಅಮಾನ್ ವಸತಿ ಯೋಜನೆಯಡಿ ಬಡ ಕುಟುಂಬಗಳಿಗೆ ಆಸರೆ ಯಾಗಿ ಉಚಿತವಾಗಿ ಮನೆಗಳನ್ನು ನಿರ್ಮಿಸಿ ಕೊಡುತ್ತಿದ್ದು, ಈಗಾಗಲೇ ಕರ್ನಾಟಕದ ಹಲವು ಭಾಗಗಳಲ್ಲಿ ಅನೇಕ ಅರ್ಹ ಬಡ ಕುಟುಂಬಗಳಿಗೆ ಮನೆ ಕಟ್ಟಲು ಸಹಾಯ ಧನ ಕೊಟ್ಟಿದೆ ಮತ್ತು ಹಲವು ಮನೆಗಳನ್ನು ದುರಸ್ತಿ ಮಾಡಿಸಿದೆ .ಇದೀಗ ಬೆಳ್ತಂಗಡಿ ತಾಲೂಕಿನ ಬೆದ್ರಬೆಟ್ಟುವಿನಲ್ಲಿ ಬಡ ಕುಟುಂಬವೊಂದಕ್ಕೆ ಸುಮಾರು 600 ಚದರ ಅಡಿಯ ಮನೆಯನ್ನು ನಿರ್ಮಿಸಿದೆ ಎಂದು ತಿಳಿಸಿದರು.
ಕೆಸಿಎಫ್ ಇಂಟರ್‍ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ಡಾ| ಶೈಖ್ ಬಾವ ಮಾತನಾಡಿ ಸುಮಾರು 7 ಲಕ್ಷ 50 ಸಾವಿರ ರೂಪಾಯಿ ಈ ಮನೆ ನಿರ್ಮಿಸಲಾಗಿದೆ. ಮನೆಗೆ ಅವಶ್ಯಕವಾದ ಪೀಠೋಪಕರಣ ಸೇರಿದಂತೆ ಇತ್ಯಾದಿಗಳ ವ್ಯವಸ್ಥೆಯನ್ನು ಮಾಡಿ ಕೊಡಲಾಗಿದೆ ಎಂದು ಹೇಳಿದರು.ಈ ಸಂದರ್ಭ ಮನೆಯನ್ನು ಅಲ್ಪಕಾಲಾವಧಿಯಲ್ಲಿ ಉತ್ತಮವಾಗಿ ಮನೆ ನಿರ್ಮಿಸಿದ ಯಾಕೂಬ್ ಮಲೆಬೆಟ್ಟು ರವರನ್ನು ಸೌದಿ ಕೆಸಿಎಫ್ ನಾಯಕರು ಸನ್ಮಾನಿಸಿದರು.
ಮುಖ್ಯ ಅತಿಥಿüಗಳಾಗಿ ಡಾ| ಅಬ್ದುಲ್ ರ್ರಶೀದ್ ಝೈನಿ, ಸೌದಿ ಅರೇಬಿಯಾ ಕೆಸಿಎಫ್‍ನ ರಾಷ್ಟ್ರೀಯ ನಾಯಕರಾದ ಹನೀಫ್ ಕಣ್ಣೂರ್, ಹಮೀದ್ ಮುಸ್ಲಿಯಾರ್ ಕರಾಯ, ಸಲೀಂ ಕನ್ಯಾಡಿ ಶುಕೂರ್ ನಾಳ, ಇಬ್ರಾಹಿಂ ಕಾಜೂರ್, ಬೆಳ್ತಂಗಡಿ ಮುಸ್ಲಿಂ ಜಮಾತ್ ಅಧ್ಯಕ್ಷ ಎಸ್ ಎಮ್ ಕೋಯಾ ತಂಙಳ್ ಮತ್ತು ಬೆಳ್ತಂಗಡಿ ಕರ್ನಾಟಕ ಮುಸ್ಲಿಂ ಜಮಾತ್, ಎಸ್‍ಎಸ್‍ಎಫ್, ಎಸ್‍ವೈಎಸ್‍ನ ನಾಯಕರು, ಸ್ಥಳೀಯ ಪಂಚಾಯತ್ ಸದಸ್ಯರು ಉಪಸ್ಥಿತರಿದ್ದರು. ಕೆಸಿಎಫ್ ಸೌದಿ ಅರೇಬಿಯಾ ಸಂಘಟನಾ ಕಾರ್ಯದರ್ಶಿ ಬಶೀರ್ ತಲಪಾಡಿ ಕಾರ್ಯಕ್ರಮ ನಿರೂಪಿಸಿದರು.