ಮುಂಬಯಿ, ಜೂ.08: ಕೀರ್ತಿಶೇಷ ಲಕ್ಷ್ಮೀವರತೀರ್ಥ ಸ್ವಾಮೀಜಿ ಅವರ 57ನೇ ಜನ್ಮದಿನಾಚರಣೆಯನ್ನು ಕಳೆದ ಭಾನುವಾರ ಮೂಡಬಿದ್ರಿ ಸಮೀಪದ ಕೇಮಾರು ಮಠ ಹಾಗೂ ಉಡುಪಿ ಪರಿಸರದ ವಿವಿಧ ಕಡೆಗಳಲ್ಲಿ ಪರಿಸರೋಪಯುಕ್ತ ವಿವಿಧ ರೀತಿಯ ಗಿಡಗಳನ್ನು ನೆಡುವುದರ ಮೂಲಕ ಆಚರಿಸಲಾಯಿತು.
ಶೀರೂರು ಶ್ರೀಗಳು ಪರಿಸರದ ಬಗ್ಗೆ ತೀರ ಕಾಳಜಿ ವಹಿಸಿದ್ದು ಅವರ ಜನ್ಮದಿನದಂದು ಭಕ್ತ ಜನರಿಗೆ ವಿವಿಧ ರೀತಿಯ ಗಿಡಗಳನ್ನು ವಿತರಿಸಿ ಜನ್ಮದಿನವನ್ನು ಆಚರಿಸುತ್ತಿದ್ದರು. ಇವರ ಈ ಸವಿನೆನಪಿಗಾಗಿ 57ನೇ ಜನ್ಮದಿನವಾದ ಈ ಬಾರಿಯೂ ವಿವಿಧ ಕಡೆಗಳಲ್ಲಿ ವಿವಿಧ ತಳಿಯ 57 ಸಸಿಗಳನ್ನು ನೆಡಲಾಯಿತು ಎಂದು ಪೂರ್ವಾಶ್ರಮದ ಸಹೋದರ ಲಾತವ್ಯ ಆಚಾರ್ಯ ಹೇಳಿದರು. ಈ ಸಂದರ್ಭದಲಿ ಕೇಮಾರು ಸಂದೀಪನಿ ಸಾಧನಾಶ್ರಮದ ಮಠಾಧೀಶ ಶ್ರೀ ಈಶ ವಿಠಲದಾಸ ಸ್ವಾಮೀಜಿ ವರಿಗೆ ವಿವಿಧ ತಳಿಯ 12 ಗಿಡಗಳನ್ನು ಅವರು ಹಸ್ತಾಂತರಿಸಿದರು.
ಶ್ರೀಗಳ ಪೂರ್ವಾಶ್ರಮದ ಸಹೋದರರಾದ ವಾದಿರಾಜ ಆಚಾರ್ಯ, ಶ್ರೀನಿವಾಸ ಆಚಾರ್ಯ ಹಾಗೂ ಪೂರ್ವಾಶ್ರಮದ ಸಂಬಂಧಿಕರಾದ ಪ್ರಹ್ಲಾದ ಆಚಾರ್ಯ, ಅರ್ಜುನ್ ಆಚಾರ್ಯ,ಅಕ್ಷೋಬ್ಯ ಆಚಾರ್ಯ ಹಾಗೂ ಇತರರು ಉಪಸ್ಥಿತರಿದ್ದರು.