ಬದಿಯಡ್ಕ: ನಾಡೋಜ ಡಾ.ಕಯ್ಯಾರ ಕಿಞ್ಞಣ್ಣ ರೈ ಅವರ 105ನೇ ಜನ್ಮ ದಿನಾಚರಣೆ ಸೋಮವಾರ ಕವಿ ಮನೆ ಕವಿತಾ ಕುಟೀರದಲ್ಲಿ ಕೋವಿಡ್ ನಿಬಂಧನೆಯಂತೆ ಸರಳವಾಗಿ ನೆರವೇರಿತು.
ಬದಿಯಡ್ಕ ಗ್ರಾ.ಪಂ. ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್ ದೀಪ ಬೆಳಗಿಸಿ, ಕಯ್ಯಾರರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಗೈದು ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು ಸಾಹಿತ್ಯ, ಗಡಿನಾಡ ಹೋರಾಟ, ರಾಜಕೀಯ ನೇತಾರ, ಪ್ರಗತಿಪರ ಕೃಷಿಕ, ಆದರ್ಶ ಶಿಕ್ಷಕ ಸಹಿತ ಬಹುಮುಖಿ ವ್ಯಕ್ತಿತ್ವದ ಕಯ್ಯಾರ ಬದುಕು-ಬರಹಗಳು ಸದಾ ಅನುಸರಣೀಯ. ಸರಳ ವ್ಯಕ್ತಿತ್ವ ಕವಿಯ ಹೃದಯ ಶ್ರೀಮಂತಿಕೆ, ಬದುಕಿನ ಬದ್ದತೆ, ಕ್ರಿಯಾತ್ಮಕ ಜೀವನ ಹೊಸ ತಲೆಮಾರಿಗೆ ಎಂದಿಗೂ ಆದರ್ಶನೀಯ ಎಂದು ತಿಳಿಸಿದರು.
ಕಾಸರಗೋಡು ಶಾಸಕ ಎನ್.ಎ.ನೆಲ್ಲಿಕುನ್ನು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿ, ಕೊರೊನಾ ಸವಾಲಿನ ಇಂದಿನ ಜಗತ್ತು ಇಷ್ಟು ಹೈರಾಣಗೊಳ್ಳಲು ನಮ್ಮ ಜೀವನ ಕ್ರಮಗಳು, ಅಶಿಸ್ತಿನ ಆಹಾರ-ವಿಹಾರಗಳು, ಹವ್ಯಾಸಗಳು ಮುಖ್ಯ ಕಾರಣವಾಗಿದೆ. ಆದರೆ ಧೀಮಂತ ವ್ಯಕ್ತಿತ್ವದ ಕಯ್ಯಾರರು ಸರಳ, ಶಿಸ್ತುಬದ್ದ ಜೀವನದ ಮೂಲಕ ಶತಮಾನಗಳ ಪೂರ್ಣ ಜೀವನ ನಿರ್ವಹಿಸಿ ಮೇಲ್ಪಂಕ್ತಿಯೊದಗಿಸಿದ್ದಾರೆ. ಸಾಹಿತ್ಯ, ಕನ್ನಡ ಹೋರಾಟ, ರಾಜಕೀಯ, ಪತ್ರಿಕೋದ್ಯಮ, ಶಿಕ್ಷಣ ಕ್ಷೇತ್ರ, ಕೃಷಿ ಮೊದಲಾದ ಬಹುಮುಖದ ವ್ಯಕ್ತಿತ್ವದವರಾದ ಕಯ್ಯಾರರು ಕಾಸರಗೋಡಿನ ಅಭಿಮಾನ ಎಂದರು.
ಕಾಸರಗೋಡು ಸರ್ಕಾರಿ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ.ಎ.ಶ್ರೀನಾಥ್ ಅಧ್ಯಕ್ಷತೆ ವಹಿಸಿದ್ದರು. ಬದಿಯಡ್ಕ ಗ್ರಾ.ಪಂ. ಮಾಜಿ ಅಧ್ಯಕ್ಷ ಮಾಹಿನ್ ಕೇಳೋಟ್, ಸಮಾಜ ಸೇವಕ ಚಂದ್ರಹಾಸ ರೈ ಪೆರಡಾಲ, ನಿವೃತ್ತ ಮುಖ್ಯೋಪಾಧ್ಯಾಯ ಡಾ.ಬೇ.ಸಿ.ಗೋಪಾಲಕೃಷ್ಣ ಭಟ್, ನವಜೀವನ ಶಾಲಾ ಶಿಕ್ಷಕ ನಿರಂಜನ ರೈ ಪೆರಡಾಲ, ರಾಮಚಂದ್ರ ಚೆಟ್ಟಿಯಾರ್ ಬದಿಯಡ್ಕ, ಬಿಜು ಅಬ್ರಹಾಂ, ಅಖಿಲೇಶ್ ನಗುಮುಗಂ ಉಪಸ್ಥಿತರಿದ್ದು ಮಾತನಾಡಿದರು.
ಕಯ್ಯಾರರ ಸುಪುತ್ರರಾದ ಪ್ರದೀಪ್ ರೈ, ರಂಗನಾಥ ರೈ, ಸೊಸೆಯಂದಿರಾದ ಆರತಿ ಪಿ.ರೈ, ಉಷಲತಾ ಆರ್.ರೈ, ಮೊಮ್ಮಗಳು ಪ್ರಕೃತಿ ರೈ ಉಪಸ್ಥಿತರಿದ್ದರು. ಪುರುಷೋತ್ತಮ ಭಟ್ ಕೆ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.